HOME » NEWS » District » POOR FOOD SUPPLY AT ANGANWADI CENTERS IN VIJAYAPURA DISTRICT RH

ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಪೂರೈಕೆ; ಬಡಮಕ್ಕಳ ಜೀವದೊಂದಿಗೆ ಗುತ್ತಿಗೆದಾರರು, ಅಧಿಕಾರಿಗಳ ಚೆಲ್ಲಾಟ ಆರೋಪ

ಅಂಗನವಾಡಿ ಕೇಂದ್ರಗಳಿಗೆ ಸರಕಾರ ನಿಗದಿಪಡಿಸಿದ ಆಹಾರ ಪದಾರ್ಥಗಳನ್ನು ಗುತ್ತಿಗೆದಾರರು ಪೂರೈಕೆ ಮಾಡುತ್ತಾರೆ. ಜಿಲ್ಲೆಯಲ್ಲಿ  ಪ್ರತಿ ತಿಂಗಳು ನೀಡುವ 20 ಕೆಜಿ ಆಹಾರದಲ್ಲಿ 14 ರಿಂದ 15 ಕೆಜಿ ಮಾತ್ರ ಪೂರೈಕೆಯಾಗುತ್ತಿದೆ. ಉಳಿದ ಐದಾರು ಕೆಜಿ ಆಹಾರ ಧಾನ್ಯಗಳ ಗೋಲ್ ಮಾಲ್ ನಡೆಯುತ್ತದೆ ಎಂಬ ಆರೋಪವಿದೆ.

news18-kannada
Updated:June 19, 2020, 4:19 PM IST
ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಪೂರೈಕೆ; ಬಡಮಕ್ಕಳ ಜೀವದೊಂದಿಗೆ ಗುತ್ತಿಗೆದಾರರು, ಅಧಿಕಾರಿಗಳ ಚೆಲ್ಲಾಟ ಆರೋಪ
ಕಳಪೆ ಆಹಾರ ಪದಾರ್ಥ
  • Share this:
ವಿಜಯಪುರ (ಜೂ. 19); ಅಂಗನವಾಡಿ ಮಕ್ಕಳಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ, ಇದಕ್ಕೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಈ ಬಾರಿ ಆಹಾರ ವಿತರಣೆ ತೂಕದಲ್ಲಿಯೂ ಕಡಿತ ಬಹಿರಂಗವಾಗಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಬಿ.ಕೆ.ಎಲ್.ಟಿ ಅಂಗನವಾಡಿಯಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಗುತ್ತಿಗೆದಾರರು ಕಳಪೆ ಗುಣಮಟ್ಟದ ತೊಗರಿ ಪೂರೈಕೆ ಮಾಡಿದ್ದಾರೆ. ಬಡ ಮಕ್ಕಳಿಗೆ ಕಳಪೆ ಮಟ್ಟದಿಂದ ಆಹಾರ ಪದಾರ್ಥ ವಿತರಣೆ ಮಾಡುವ ಮೂಲಕ ಮಕ್ಕಳ ಜೀವದೊಂದಿಗೆ ಗುತ್ತಿಗೆದಾರರು ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಾಂಡಾದ ಯುವಕ ಮಹೇಶ ನಾಯಕ ಎಂಬುವವರು ಅಂಗನವಾಡಿಗೆ ತೆರಳಿ ತಮ್ಮ ತಾಂಡಾದ ಮಕ್ಕಳಿಗೆ ನೀಡುವ ಆಹಾರ ಪದಾರ್ಥ ಪರಿಶೀಲನೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಈ ಕಳಪೆ ಆಹಾರ ಪೂರೈಕೆಯಲ್ಲಿ ಸಂಬಂಧಪಟ್ಟ ಇಲಾಖೆಯೂ ಶಾಮೀಲಾಗಿರುವ ಶಂಕೆಯಿದೆ. ಪ್ರತಿ ತಿಂಗಳು ಪೂರೈಕೆಯಾಗುವ ಆಹಾರದ ತೂಕ ಕಡಿಮೆಯಿದೆ. ಪರಿಶೀಲನೆಗೆ ಕಳುಹಿಸಿ ದೃಢಪಡಿಸಿದ ಆಹಾರವೂ ಕಳಪೆಯಾಗಿರುವುದು ವಿಪರ್ಯಾಸವಾಗಿದೆ. ಇಂಥ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವ ಮತ್ತು ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಭಾಷ್ ಆಲಗೂರ, ಬೆಳಗಾವಿಯಲ್ಲಿರುವ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿ ಆಹಾರದ ಗುಣಮಟ್ಟದ ಬಗ್ಗೆ ಖಾತ್ರಿ ಪಡಿಸಿಕೊಂಡು ಆಹಾರ ಪೂರೈಕೆ ಮಾಡಲಾಗುತ್ತಿದೆ. ಈ ಕುರಿತು ಸಿಡಿಪಿಓ ಅವರಿಂದ ತನಿಖೆ ನಡೆಸಿ ಗುತ್ತಿಗೆದಾರರು ತಪ್ಪೆಸಗಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನು ಓದಿ: ಕೊರೋನಾ ವಾರಿಯರ್ಸ್-ತಾಂಡಾ ನಿವಾಸಿಗಳ ನಡುವೆ ಘರ್ಷಣೆ; ಪೊಲೀಸರು ಸೇರಿ ಹಲವರಿಗೆ ಗಾಯ

ಈ ಮಧ್ಯೆ ಅಂಗನವಾಡಿ ಕೇಂದ್ರಗಳಿಗೆ ಸರಕಾರ ನಿಗದಿಪಡಿಸಿದ ಆಹಾರ ಪದಾರ್ಥಗಳನ್ನು ಗುತ್ತಿಗೆದಾರರು ಪೂರೈಕೆ ಮಾಡುತ್ತಾರೆ. ಜಿಲ್ಲೆಯಲ್ಲಿ  ಪ್ರತಿ ತಿಂಗಳು ನೀಡುವ 20 ಕೆಜಿ ಆಹಾರದಲ್ಲಿ 14 ರಿಂದ 15 ಕೆಜಿ ಮಾತ್ರ ಪೂರೈಕೆಯಾಗುತ್ತಿದೆ. ಉಳಿದ ಐದಾರು ಕೆಜಿ ಆಹಾರ ಧಾನ್ಯಗಳ ಗೋಲ್ ಮಾಲ್ ನಡೆಯುತ್ತದೆ ಎಂಬ ಆರೋಪವಿದೆ. ಇದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೊತ್ತಿದ್ದರೂ ಅವರು ಚಕಾರ ಎತ್ತುವಂತಿಲ್ಲ. ಏಕೆಂದರೆ ಈ ಬಡಪಾಯಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಡಿಮೆ ತೂಕ ಮತ್ತು ಕಳಪೆ ಆಹಾರದ ಬಗ್ಗೆ ಧ್ವನಿ ಎತ್ತಿದರೆ ಅವರ ಕೆಲಸಕ್ಕೆ ಕುತ್ತು ಬರುತ್ತದೆ ಎಂಬ ಭಯದಲ್ಲಿ ಅವರು ಕೆಲಸ ಮಾಡುವಂತಾಗಿದೆ ಎಂಬ ದೂರುಗಳೂ ಆಗಾಗ ಕೇಳಿ ಬರುತ್ತಿವೆ.  ಈ ನಿಟ್ಟಿನಲ್ಲಿ ಸರಕಾರ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
First published: June 19, 2020, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading