ಬಾಗಲಕೋಟೆ (ಜೂ16): ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರ ಮುಧೋಳದಲ್ಲಿ ಬಸ್ ನಿಲ್ದಾಣ ನಿರ್ಮಾಣದಲ್ಲೂ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನೂತನ ಬಸ್ ನಿಲ್ದಾಣ ಹೆಸರಲ್ಲಿ ರಾಜಕಾರಣ ನಡೆಯುತ್ತಿದೆ. ಈಗಾಗಲೇ ನಿರ್ಮಾಣವಾಗಿರುವ ಬಸ್ ನಿಲ್ದಾಣ ಉದ್ಘಾಟನೆಗೂ ಮುನ್ನವೇ ಇದೀಗ ಮತ್ತೊಂದು ಬಸ್ ನಿಲ್ದಾಣ ನಿರ್ಮಾಣಕ್ಕೆ ಜೂನ್ 17ರಂದು ಶಂಕುಸ್ಥಾಪನೆ ನಡೆಯಲಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್ ಬಿ ತಿಮ್ಮಾಪುರ ಅವಧಿಯಲ್ಲಿ ಮುಧೋಳದಲ್ಲಿ 2ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಆ ಬಸ್ ನಿಲ್ದಾಣ ಉದ್ಘಾಟನೆಗೆ ಮುನ್ನವೇ ನಿರ್ಮಾಣವಾಗಿರುವ ಬಸ್ ಶೆಲ್ಟರ್ ಮುಂದೆ ಡಿಸಿಎಂ ಗೋವಿಂದ ಕಾರಜೋಳ ಮತ್ತೊಂದು ಬಸ್ ಶೆಲ್ಟರ್, ಕಾಂಕ್ರೀಟೀಕರಣದ ಶಂಕುಸ್ಥಾಪನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಧೋಳದಲ್ಲಿ ಒಂದು ಬಸ್ ನಿಲ್ದಾಣ ನಿರ್ಮಾಣ, ಬಿಜೆಪಿ ಅಧಿಕಾರಕ್ಕೆ ಬಂದಾಗ ಮತ್ತೊಂದು ಬಸ್ ನಿಲ್ದಾಣ ನಿರ್ಮಾಣ ಎನ್ನುವಂತಾಗಿದೆ. ಆದರೆ ಸರಕಾರಿ ಅನುದಾನದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಎರೆಡೆರಡು ಬಸ್ ಶೆಲ್ಟರ್ ನಿರ್ಮಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದೀಗ ಮುಧೋಳದಲ್ಲಿ ಡಿಸಿಎಂ ಗೋವಿಂದ ಕಾರಜೋಳ 5ಕೋಟಿ ವೆಚ್ಚದಲ್ಲಿ ಮತ್ತೊಂದು ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆಗೆ ಮುಂದಾಗಿದ್ದಾರೆ. ಜೂನ್ 17ರಂದು ಮುಧೋಳದಲ್ಲಿ ಬಸ್ ನಿಲ್ದಾಣ ಶಂಕುಸ್ಥಾಪನೆಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಹಾಗೂ ಕ್ಷೇತ್ರದ ಶಾಸಕ , ಡಿಸಿಎಂ ಗೋವಿಂದ ಕಾರಜೋಳ ಸಾಕ್ಷಿಯಾಗಲಿದ್ದಾರೆ.
ಇದನ್ನು ಓದಿ: ವಕ್ಫ್ ಆಸ್ತಿ ದುರ್ಬಳಕೆ: ಮುಂದಿನ ಅಧಿವೇಶನದಲ್ಲಿ ಲೋಕಾಯುಕ್ತ ಮಧ್ಯಂತರ ವರದಿ ಮಂಡನೆ
ಈಗಾಗಲೇ ನಿರ್ಮಾಣವಾಗಿರುವ ಬಸ್ ಶೆಲ್ಟರ್ ಗ್ರಾಮೀಣ ಭಾಗದ ಕಡೆಗೆ ಸಂಚರಿಸುವ ಬಸ್ ನಿಲ್ದಾಣವಾಗಿ, ನೂತನವಾಗಿ ನಿರ್ಮಿಸಲಾಗುವ ಬಸ್ ಶೆಲ್ಟರ್ ಜಿಲ್ಲೆ, ತಾಲೂಕು ಕೇಂದ್ರ ಸಂಪರ್ಕಿಸುವ ಬಸ್ ನಿಲ್ದಾಣಕ್ಕೆಂದು ಬಳಸಲಾಗುತ್ತೇ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು. ಆದರೆ ಮುಧೋಳದಲ್ಲಿ ಒಂದೇ ಬಸ್ ನಿಲ್ದಾಣ ಸಾಕಾಗಿತ್ತು. ಆದರೆ ರಾಜಕೀಯ ಜಿದ್ದಾಜಿದ್ದಿಗೆ ಒಂದೇ ಜಾಗದಲ್ಲೇ ಎರೆಡೆರಡು ಬಸ್ ಶೆಲ್ಟರ್ ನಿರ್ಮಿಸುತ್ತಿರುವುದು ವಿಪರ್ಯಾಸವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ