news18-kannada Updated:December 3, 2020, 9:29 PM IST
ಗುಂಡನ ಪಲ್ಲೆ ಬಳಿ ನಡೆದಿರುವ ಗಣಿಗಾರಿಕೆ
ಬಾಗಲಕೋಟೆ(ಡಿಸೆಂಬರ್. 03) : ಬಾಗಲಕೋಟೆ ಜಿಲ್ಲೆಯ ಗುಂಡನಪಲ್ಲೆ, ಬೇವಿನಮಟ್ಟಿ,ಮಲ್ಲಾಪೂರ ಗ್ರಾಮದ ಬಳಿ 34 ಎಕರೆ ಜಮೀನಿನಲ್ಲಿ ಡೊಲೋ ಮೈಟ್ ಗಣಿಗಾರಿಕೆಗೆ ಅನುಮತಿ ಕೊಡುವ ವಿಚಾರದಲ್ಲಿ ಗ್ರಾಮಸ್ಥರಲ್ಲಿ ರಾಜಕೀಯ ಮೇಲಾಟದಿಂದಾಗಿ ಪರ ವಿರೋಧ ವ್ಯಕ್ತವಾಗಿದೆ. ಕಳೆದ 20 ವರ್ಷಗಳ ಹಿಂದೆ ಗುಂಡನಪಲ್ಲೆ, ಮಲ್ಲಾಪೂರ, ಬೇವಿನಮಟ್ಟಿ ಗ್ರಾಮದ ಬಳಿ ಈಗಾಗಲೇ 12 ಎಕರೆ ಸರ್ಕಾರಿ ಜಾಗದಲ್ಲಿ ಡೊಲೋಮೈಟ್ ಗಣಿಗಾರಿಕೆಗೆ ನಡೆಯುತ್ತಿದೆ. ಇದೀಗ ಮತ್ತೆ 34 ಎಕರೆ ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆಗೆ ಅನುಮತಿ ಕೊಡುವುದಕ್ಕೆ ಸರ್ಕಾರ, ಜಿಲ್ಲಾಡಳಿತ ಮುಂದಾಗಿದೆ. ಆದರೆ, ಈಗ ಗ್ರಾಮಸ್ಥರಲ್ಲೆ ಗಣಿಗಾರಿಕೆ ಅನುಮತಿ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿ, ಒಂದು ಗುಂಪು ಗಣಿಗಾರಿಕೆಗೆ ಅನುಮತಿ ಕೊಡಿ, ಇನ್ನೊಂದು ಗುಂಪು ಕೊಡಬೇಡಿ ಎಂದು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದರಿಂದ ಜಿಲ್ಲಾಡಳಿತ ಇಕ್ಕಟ್ಟಿನಲ್ಲಿದೆ. ಇದರಿಂದ ಗಣಿಗಾರಿಕೆ ಅನುಮತಿ ವಿಚಾರದಲ್ಲಿ ರಾಜಕೀಯ ಒತ್ತಾಸೆಯಿಂದ ಗ್ರಾಮಸ್ಥರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಾದ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗುಂಡನಪಲ್ಲೆ, ನಿಂಗಾಪುರ, ಚಿನಿವಾಲಕೊಪ್ಪ ಗ್ರಾಮಸ್ಥರನ್ನು ಬಾಗಲಕೋಟೆ ನಗರದಿಂದ ಎಂಟು ಕಿ.ಮೀ. ದೂರದಲ್ಲಿರುವ ಪ್ರದೇಶದಲ್ಲಿ ಸ್ಥಳಾಂತರ ಮಾಡಿದ್ದರು. ಇಲ್ಲಿಗೆ ಬರುತ್ತಲೇ ಈ ಪ್ರದೇಶದ ಸ್ವಲ್ಪ ದೂರದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು.ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿತ, ಧೂಳು, ಮನೆ ಗೋಡೆ ಬಿರುಕಿನಂತ ಸಮಸ್ಯೆ ಉಂಟಾಗುತ್ತಿದೆ ಎಂದು ಅನುಮತಿ ಕೊಡಬೇಡಿ ಎಂದು ಒಂದು ಗುಂಪು ವಿರೋಧಿಸುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮೇಲಾಟದಿಂದಾಗಿ ಗ್ರಾಮಸ್ಥರಲ್ಲಿ ಒಡಕು ಉಂಟಾಗಿ ಮತ್ತೊಂದು ಗುಂಪು ಗಣಿಗಾರಿಕೆಗೆ ಅನುಮತಿ ಕೊಡಿ ಎನ್ನುತ್ತಿದ್ದಾರೆ.
ಕಾಂಗ್ರೆಸ್ ಬೆಂಬಲಿತರ ಗುಂಪು ಗಣಿಗಾರಿಕೆಗೆ ಅನುಮತಿ ಕೊಡಬೇಡಿ ಎಂದಿದ್ದರೆ, ಬಿಜೆಪಿ ಬೆಂಬಲಿತ ಗುಂಪು ಅನುಮತಿ ಕೊಡಿ ಎನ್ನುತ್ತಿದ್ದಾರೆ. ಇದೀಗ ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡನಪಲ್ಲೆ, ಬೇವಿನಮಟ್ಟಿ ಮಲ್ಲಾಪೂರ ಗ್ರಾಮಕ್ಕೆ ಹೊಂದಿಕೊಂಡಂತೆ 34 ಎಕರೆ ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಕಂಪನಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅನುಮತಿ ಪ್ರಸ್ತಾವನೆ ಕಳುಹಿಸುವ ಮುನ್ನ ಬಾಡಿಗೆ ರೈತರೊಂದಿಗೆ ಸಭೆ ನಡೆಸಿದ್ದಾರೆ ಎಂದು ಗಣಿಗಾರಿಕೆಗೆ ವಿರೋಧಿಸುವ ಗುಂಪಿನದ್ದಗಾದ್ದರೆ. ಅನುಮತಿ ಕೊಡಿ ಎನ್ನುವ ಗುಂಪು ಗ್ರಾಮಸ್ಥರ, ರೈತರ ಸಭೆ ನಡೆಸಿದ್ದಾರೆ ಎನ್ನುತ್ತಿದ್ದಾರೆ.
ಇದನ್ನೂ ಓದಿ :
ರಾಜಧಾನಿಯಲ್ಲಿ ಅನಧಿಕೃತ ನೀರಿನ ಬಳಕೆ ಹೆಚ್ಚಳ ; ಎರಡೇ ತಿಂಗಳಲ್ಲಿ ಎಷ್ಟು ಅನಧಿಕೃತ ಕನೆಕ್ಷನ್ ಸಿಕ್ಕಿವೆ ಗೊತ್ತಾ?
ಇನ್ನು ಶಿವಾನಂದ ಹಾಗೂ ಸಂತೋಷ ಮೆಳ್ಳಿಗೇರಿ ಮಾಲೀಕತ್ವದ ಮೇ.ಸೋನಾ ಮಿನರಲ್ಸ್ ನವರು ಸರ್ವೆ ನಂಬರ್ 282, 277 ಮತ್ತು 276ರಲ್ಲಿ 34 ಎಕರೆಯಲ್ಲಿ ಗಣಿಗಾರಿಕೆಗೆ ತಯಾರಿ ಮಾಡಿಕೊಂಡಿದೆ. ಕಂಪನಿ, ರಾಜಕೀಯ ಮೇಲಾಟದಿಂದ ರೈತರು ಗ್ರಾಮಸ್ಥರಲ್ಲಿ ಭಿನ್ನಾಭಿಪ್ರಾಯ ಉಂಟು ಮಾಡಿ ಅನುಮತಿ ಪಡೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಜನವಸತಿ ಪ್ರದೇಶದ ಕೂಗಳತೆಯಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಒಂದು ವೇಳೆ ಕೊಟ್ಟಲ್ಲಿ ಮುಂದೆ ಉಗ್ರ ಹೋರಾಟ ಮಾಡೋದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಗಣಿಗಾರಿಕೆ ಪರವಾನಗಿ ಕೊಡುವ ವಿಚಾರದಲ್ಲಿ ಗ್ರಾಮಸ್ಥರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಪರ, ವಿರೋಧ ವ್ಯಕ್ತವಾಗಿದೆ.
Published by:
G Hareeshkumar
First published:
December 3, 2020, 9:27 PM IST