• Home
  • »
  • News
  • »
  • district
  • »
  • ಬಿಡಿಸಿಸಿ ಬ್ಯಾಂಕ್ ಚುನಾವಣೆ ಬೆನ್ನ ಹಿಂದೆಯೇ ಮಾಜಿ ಸಚಿವರ ನಡುವೆ ವಾಕ್ಸಮರ ; ನಿರಾಣಿ, ಪಾಟೀಲ್ ಕೆಸರೆರಚಾಟ

ಬಿಡಿಸಿಸಿ ಬ್ಯಾಂಕ್ ಚುನಾವಣೆ ಬೆನ್ನ ಹಿಂದೆಯೇ ಮಾಜಿ ಸಚಿವರ ನಡುವೆ ವಾಕ್ಸಮರ ; ನಿರಾಣಿ, ಪಾಟೀಲ್ ಕೆಸರೆರಚಾಟ

ಮಾಜಿ ಸಚಿವರಾದ ಎಸ್ ಆರ್ ಪಾಟೀಲ್ ಹಾಗೂ ಮುರುಗೇಶ್ ನಿರಾಣಿ

ಮಾಜಿ ಸಚಿವರಾದ ಎಸ್ ಆರ್ ಪಾಟೀಲ್ ಹಾಗೂ ಮುರುಗೇಶ್ ನಿರಾಣಿ

ಎಸ್ ಆರ್ ಪಾಟೀಲ್ ವಿರುದ್ಧ  ಪ್ರತಿಸ್ಪರ್ಧಿಯಾಗಿ ಈರಣ್ಣ ಗಿಡ್ಡಪ್ಪಗೋಳ್ ಅಭ್ಯರ್ಥಿ ಕಣಕ್ಕೆ ಇಳಿಸಿ, ನಾನೇ ಅಭ್ಯರ್ಥಿ ಎಂದು ಮುರುಗೇಶ್ ನಿರಾಣಿ ಪ್ರಚಾರ ಮಾಡಿ ಎಸ್ ಆರ್ ಪಾಟೀಲ್ ಸೋಲಿಸಲು ಪ್ರಯತ್ನಿಸಿದರು ಎನ್ನುವ ವಿಚಾರ ಮಾತಿನ ಕೆಸರೆರಚಾಟಕ್ಕೆ ವೇದಿಕೆಯಾಗಿದೆ

  • Share this:

ಬಾಗಲಕೋಟೆ(ನವೆಂಬರ್. 23): ಬಾಗಲಕೋಟೆ ಜಿಲ್ಲೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಬೆನ್ನಲ್ಲೇ ಮಾಜಿ ಸಚಿವರುಗಳ ಮಧ್ಯೆ ವಾಕ್ಸಮರ ಶುರುವಾಗಿದೆ. ಸಕ್ಕರೆ ನಾಯಕರಾದ ಮುರುಗೇಶ್ ನಿರಾಣಿ ಹಾಗೂ ಎಸ್ ಆರ್ ಪಾಟೀಲ್ ಮಾತಿನ ಕೆಸರೆರಚಾಟ ಜೋರಾಗಿದ್ದು, ಸವಾಲು, ಪ್ರತಿಸವಾಲಿಗೆ ವೇದಿಕೆಯಾಗುತ್ತಿದೆ. ಇದೀಗ ಎಸ್ ಆರ್ ಪಾಟೀಲ್ ಬೆನ್ನಿಗೆ ಬೀಳಗಿ ಕಾಂಗ್ರೆಸ್ಸಿಗರು ನಿಂತು, ಮುರುಗೇಶ್ ನಿರಾಣಿ ವಿರುದ್ಧ ವಾಕ್ಸಮರ ಮುಂದುವರೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಸಕ್ಕರೆ ನಾಯಕರ ಜುಗಲ್ ಬಂದಿಯಿಂದ ಕಹಿ ಸತ್ಯ ಹೊರಬರತೊಡಗಿವೆ. ಬಹಳ ವರ್ಷಗಳಿಂದ ಮುರುಗೇಶ್ ನಿರಾಣಿ ಹಾಗೂ ಎಸ್ ಆರ್ ಪಾಟೀಲ್ ಮಧ್ಯೆ ರಾಜಕೀಯ ಸೌಹಾರ್ದತೆಯಿತ್ತು. ಸಹಕಾರಿ ಕ್ಷೇತ್ರದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಬೆನ್ನಲ್ಲೇ ವಾಕ್ಸಮರದಿಂದ ಬಾಂಧವ್ಯ ಹಳಸಿದೆ ಎನ್ನುವುದು ಗುಟ್ಟಾಗಿರದ ಮಾತು. ಬಾಗಲಕೋಟೆ ಜಿಲ್ಲೆಯ ರಾಜಕೀಯ ದಿಗ್ಗಜರ ಮಧ್ಯೆ ಹೊರ ನೋಟಕ್ಕೆ ಬಿರುಕು, ಮನಸ್ತಾಪ ರಾಜಕೀಯ ಮೇಲಾಟದಲ್ಲಿ ಅಡಗಿದ ಕಹಿ ಸತ್ಯ ಹೊರಬರತೊಡಗಿವೆ.


ಬೀಳಗಿ ಪಿಕೆಪಿಎಸ್ ಕ್ಷೇತ್ರದಿಂದ ಎಸ್ ಆರ್ ಪಾಟೀಲ್ ಅವಿರೋಧ ಆಯ್ಕೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅಡ್ಡಿಯಾಗಿ ಎಸ್ ಆರ್ ಪಾಟೀಲ್ ವಿರುದ್ಧ  ಪ್ರತಿಸ್ಪರ್ಧಿಯಾಗಿ ಈರಣ್ಣ ಗಿಡ್ಡಪ್ಪಗೋಳ್ ಅಭ್ಯರ್ಥಿ ಕಣಕ್ಕೆ ಇಳಿಸಿ, ನಾನೇ ಅಭ್ಯರ್ಥಿ ಎಂದು ಮುರುಗೇಶ್ ನಿರಾಣಿ ಪ್ರಚಾರ ಮಾಡಿ ಎಸ್ ಆರ್ ಪಾಟೀಲ್ ಸೋಲಿಸಲು ಪ್ರಯತ್ನಿಸಿದರು ಎನ್ನುವ ವಿಚಾರ ಮಾತಿನ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.


ಕಳೆದ ಮೂರು ದಿನಗಳ ಹಿಂದೆ ಬಾಡಗಂಡಿ ಗ್ರಾಮದಲ್ಲಿ ಪಿಕೆಪಿಎಸ್ ದಿಂದ ಸನ್ಮಾನ ಕಾರ್ಯಕ್ರಮದಲ್ಲಿ ಎಸ್ ಆರ್ ಪಾಟೀಲ್, ನಾನು ಸಕ್ಕರೆ ಕಾರ್ಖಾನೆ ರೈತರಿಗೆ ಒಪ್ಪಿಸುತ್ತೇನೆ, ಮುರುಗೇಶ್ ನಿರಾಣಿ ಸಕ್ಕರೆ ಕಾರ್ಖಾನೆ ರೈತರಿಗೆ ಒಪ್ಪಿಸಲಿ ಎಂದು ಸವಾಲೆಸೆದಿದ್ದರು. ಆ ಬಳಿಕ ಎಸ್ ಆರ್ ಪಾಟೀಲ್ ಸವಾಲಿಗೆ ಬೀಳಗಿ ಶಾಸಕ ಮಾಜಿ ಸಚಿವ ಮುರುಗೇಶ್ ನಿರಾಣಿ ಪ್ರತಿಸವಾಲಿಸೆದು, ಹಿಂಬಾಗಿಲಿನಿಂದ ರಾಜಕಾರಣ ಮಾಡುವರು, ತಾಕತ್ತಿದ್ದರೆ ವಿಧಾನ ಸಭೆ, ಲೋಕಸಭೆಗೆ ಇಲ್ಲ ಕೊನೆ ಪಕ್ಷ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬರಲಿ ಎಂದಿದ್ದರು.


ಇದನ್ನೂ ಓದಿ : ಓಡಿ ಹೋಗಿ ಯುವಕ-ಯುವತಿ ಮದುವೆ ; ಠಾಣೆಗೆ ಕರೆತಂದು ಪೊಲೀಸರಿಂದ ಯುವಕನ ಪೋಷಕರ ಥಳಿತ


ಕಾರ್ಖಾನೆ ರೈತರಿಗೆ ಒಪ್ಪಿಸುತ್ತೇನೆ ಎನ್ನುವ ಬೊಗಳೆ ಮಾತು ಬಿಟ್ಟು 600ಕೋಟಿ ಬೀಳಗಿ ಶುಗರ್ಸ್ ಕಾರ್ಖಾನೆ ಸಾಲ ಮುಕ್ತಗೊಳಿಸಲಿ ಎಂದು ಎಸ್ ಆರ್ ಪಾಟೀಲ್ ಗೆ ಮುರುಗೇಶ್ ನಿರಾಣಿ ಪ್ರತಿ ಸವಾಲು ಹಾಕಿದ್ದರು. ಮುರುಗೇಶ್ ನಿರಾಣಿ ಸವಾಲಿನ ಬೆನ್ನಲ್ಲೇ ಬೀಳಗಿ ಮಾಜಿ ಶಾಸಕ ಜೆ ಟಿ ಪಾಟೀಲ್ ಹಾಗೂ ಕಾಂಗ್ರೆಸ್ಸಿಗರು ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.


ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ ಟಿ, ಪಾಟೀಲ್, ಬಸವಪ್ರಭು ಸರನಾಡಗೌಡ, ಸತ್ಯಪ್ಪ ಮೇಲ್ನಾಡ್, ಹನುಮಂತ ಕಾಖಂಡಕಿ ಸೇರಿದಂತೆ ಕಾಂಗ್ರೆಸ್ಸಿಗರು ಮುರುಗೇಶ್ ನಿರಾಣಿಗೆ ತಿರುಗೇಟು ನೀಡಿದ್ದಾರೆ. ನಿರಾಣಿ ಕ್ಷೇತ್ರದಲ್ಲಿ 1 ಲಕ್ಷ ಎಕರೆ ನೀರಾವರಿ ಮಾಡಿದ್ದೇನೆಂದಿದ್ದಾರೆ, ಅದನ್ನು ಮೊದಲು ದಾಖಲೆ ಸಮೇತ ಸ್ಪಷ್ಟಪಡಿಸಲಿ ಎಂದರು.


ಇನ್ನು ಎಸ್.ಆರ್.ಪಾಟೀಲ್ ಹಿಂಬಾಗಿಲಿಂದ ಬಂದವರಲ್ಲ, ಬದಲಾಗಿ ಅವರು ಸಹ ವಿಧಾನಪರಿಷತ್ ಸದಸ್ಯರನ್ನಾಗಿ ಸ್ಥಳೀಯ ಸಂಸ್ಥೆಗಳ ಸದಸ್ಯರು  ಮತದಾನದ ಮೂಲಕವೇ ಆಯ್ಕೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಅಲ್ಲದೆ ತಮ್ಮ ಸಹೋದರ ಹನಮಂತ ನಿರಾಣಿ ಸಹ ಹೀಗೆ ಆಯ್ಕೆಯಾದವರು ಅವರನ್ನೂ ಹಿಂಬಾಗಿಲಿಂದ ಬಂದವರಂತೆ ಕರೆಯುತ್ತಾರೆಯೇ ಎಂದು ಪ್ರಶ್ನಿಸಿದರು.


ಇದನ್ನೂ ಓದಿ : ಸಚಿವ ಸ್ಥಾನ ಉಳಿಸಿಕೊಳ್ಳಲು ದೇವರ ಮೊರೆ ಹೋದ ಸಚಿವ ಪ್ರಭು ಚವ್ಹಾಣ : ಗಡೇ ದುರ್ಗಾದೇವಿಗೆ ವಿಶೇಷ ಪೂಜೆ


ಇನ್ನು ಈ ಹಿಂದೆ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಸೇರಿದ ಬಾದಾಮಿ  ಸಕ್ಕರೆ ಕಾರ್ಖಾನೆಗೆ  ಕಳಪೆ ಮಟ್ಟದ ವಸ್ತುಗಳನ್ನ ನೀಡಿ ನಿರಾಣಿ ಮೋಸ ಮಾಡಿದಂತವರು. ಹೀಗಾಗಿ ಇಂತವರನ್ನು ನಂಬಲೂ ಸಾಧ್ಯವಿಲ್ಲ. ಬಾದಾಮಿ ಸಕ್ಕರೆ ಕಾರ್ಖಾನೆ ಖರೀದಿಸಿ ಇದೀಗ ಮಾಲೀಕರಾಗಿದ್ದಾರೆ. ಚಿಮ್ಮನಕಟ್ಟಿ ಉದ್ಯಮಿಯಾಗಿ ಬೆಳೆಯದಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಹುನ್ನಾರ ನಡೆಯಿತು ಎನ್ನುವುದು ಕಹಿಸತ್ಯ ಹೊರ ಬಂದಂತಾಗಿದೆ. ಇಂತವರು ನಮ್ಮ ಪಕ್ಷದ ಹಿರಿಯ ಮುಖಂಡ ಎಸ್.ಆರ್.ಪಾಟೀಲ್ ವಿರುದ್ದ ಮಾತನಾಡಲು ಯೋಗ್ಯರಲ್ಲ, ಮುರುಗೇಶ್ ನಿರಾಣಿ ಸುಳ್ಳಿನ ಸರದಾರ, ಹಿಂದು ದೇವತೆಗಳಿಗೆ ಅಪಮಾನ ಮಾಡಿದವರು, ರಾಜಕೀಯದಲ್ಲಿ ಕುಟುಂಬಸ್ಥರೇ ಬೆಳೆಯಬೇಕೆಂದು, ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡದವರು, ಶಾಸಕರ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೆ ಸ್ಪರ್ಧಿಸಲಿ ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತರಿಂದ ಸೋಲಿಸಲಿದ್ದೇವೆ ಎಂದು ತಿರುಗೇಟು ನೀಡಿದರು.


ಮಾಜಿ ಸಚಿವರಿಬ್ಬರ ಮಧ್ಯೆ ಸಹಕಾರಿ ಕ್ಷೇತ್ರದ ಬಿಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದು  ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾಲವೇ ಉತ್ತರಿಸಲಿದೆ.

Published by:G Hareeshkumar
First published: