ರಾಜಕೀಯ ಮೇಲಾಟಕ್ಕೆ ಕಾರಣವಾದ ಪುತ್ತೂರು ಶಾಸಕರ ಇಂದಿರಾ ಕ್ಯಾಂಟೀನ್ ತಪಾಸಣೆ

ಇಂದಿರಾ ಕ್ಯಾಂಟೀನ್ ಗೆ ದಾಳಿ ನಡೆಸುವ ಮೂಲಕ ಬಡವನ ಅನ್ನ ಕಸಿಯುವ ಕೆಲಸದಲ್ಲಿ ಪುತ್ತೂರು ಬಿಜೆಪಿ ಶಾಸಕರು ನಿರತರಾಗಿದ್ದಾರೆ ಎನ್ನುವ ಆರೋಪವನ್ನೂ ಮಾಜಿ ಶಾಸಕಿ ಶಾಕುಂತಲಾ ಶೆಟ್ಟಿ ಅವರು ಮಾಡಿದ್ದಾರೆ.

ಇಂದಿರಾ ಕ್ಯಾಂಟೀನ್.

ಇಂದಿರಾ ಕ್ಯಾಂಟೀನ್.

  • Share this:
ಪುತ್ತೂರು: ಪುತ್ತೂರು ಶಾಸಕ ಸಂಜೀವ ಮಠಂದೂರು ಇಂದಿರಾ ಕ್ಯಾಂಟೀನ್ ನಲ್ಲಿ ನಡೆಯುತ್ತಿದ್ದ ಅವ್ಯವಹಾರದ ಕುರಿತು ಪರಿಶೀಲನೆ ನಡೆಸಿದ ವಿಚಾರದಲ್ಲಿ ಇದೀಗ ರಾಜಕೀಯ ಮೇಲಾಟ ಆರಂಭವಾಗಿದೆ. ಪುತ್ತೂರಿನ ಇಂದಿರಾ ಕ್ಯಾಂಟೀನ್ ನಲ್ಲಿ ಪ್ರತೀ ದಿನವೂ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಉಚಿತ ಆಹಾರ ನೀಡಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದ ಬಳಿಕ, ಇಂದಿರಾ ಕ್ಯಾಂಟೀನ್ ನಲ್ಲಿ ಸರಿಯಾದ ದಾಖಲೆ ಇಲ್ಲದೆ  ಆಹಾರ ವಿತರಿಸಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಶಾಸಕ ಸಂಜೀವ್ ಮಠಂದೂರು ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.

ಇಂದಿರಾ ಕ್ಯಾಂಟೀನ್ ಮೇಲೆ ದಾಳಿ ನಡೆಸುವ ಮೂಲಕ ಬಡವನ ಅನ್ನ ಕಸಿಯುವ ಕೆಲಸದಲ್ಲಿ ಶಾಸಕರು ನಿರತರಾಗಿದ್ದಾರೆ ಎನ್ನುವ ಆರೋಪವನ್ನೂ ಶಕುಂತಲಾ ಶೆಟ್ಟಿ ಅವರು ಮಾಡಿದ್ದಾರೆ. ರಾಜಕೀಯಕ್ಕಾಗಿ ಇಂದಿರಾ ಕ್ಯಾಂಟೀನ್ ಮೇಲೆ ದಾಳಿ ಮಾಡಿದ್ದಾರೆ ಎಂದಿದ್ದಾರೆ. ಈ ನಡುವೆ ಇದೀಗ ಪುತ್ತೂರು ಬಿಜೆಪಿಯ ನಾಯಕರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮೇಲೆ ಮುಗಿ ಬಿದ್ದಿದ್ದಾರೆ. ಶಕುಂತಲಾ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿಯ ವಿವಿಧ ಮೋರ್ಚಾಗಳ ಮುಖಂಡರು ಪುತ್ತೂರು ಶಾಸಕರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಸಮಾಜದಲ್ಲಿನ ಸಣ್ಣ ತಪ್ಪುಗಳನ್ನು ಹುಡುಕುವ ಜನಪ್ರತಿನಿಧಿ ಯಾವತ್ತೂ ಪರಿಪೂರ್ಣ. ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಲೋಪ ಸರಿಪಡಿಸುವ ಕೆಲಸ ಮಾಡಿದರೇ ಹೊರತು ಎಲ್ಲೂ ಕೂಡಾ ಅನ್ನಕ್ಕೆ ಕನ್ನ ಹಾಕುವ ಕೆಲಸ ಮಾಡಿಲ್ಲ ಎಂದು ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಆರ್.ಸಿ. ನಾರಾಯಣ ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್ ವಿಷಯವನ್ನು ದೊಡ್ಡದು ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ರಾಜಕಾರಣ ಮಾಡುವುದನ್ನು ಬಿಟ್ಟು ಕೋವಿಡ್ ಸಂದರ್ಭದಲ್ಲಿ ಹಗಲಿರುಳು ವಿವಿಧೆಡೆ ಭೇಟಿ ನೀಡಿ ಕೊರೋನಾ ತಡೆಗಟ್ಟುವಲ್ಲಿ ಪ್ರಯತ್ನಿಸುವ ಶಾಸಕ ಸಂಜೀವ ಮಠಂದೂರು ಅವರ ಕಾರ್ಯವನ್ನು ಅಭಿನಂದಿಸಲಿ ಎಂದು ಹೇಳಿದರು.

ಇದನ್ನು ಓದಿ: Yaas Cyclone: ಯಾಸ್ ಚಂಡಮಾರುತದ ಬಗ್ಗೆ ಪ್ರಧಾನಿ ಮೋದಿ ಜತೆಗೆ ಪರಿಶೀಲನಾ ಸಭೆ ಸಿಎಂ ಮಮತಾ ಬ್ಯಾನರ್ಜಿ ಗೈರು!

ಕಳೆದ ಚುನಾವಣೆಯಲ್ಲಿ ಮತದಾರರನ್ನು ಗಣನೆಗೆ ತೆಗೆದುಕೊಂಡು ಜಿಲ್ಲೆಗೆ, ರಾಜ್ಯಕ್ಕೆ ಮಾಹಿತಿ ನೀಡಿರುವ ಶಾಸಕರು ಜನರ ವಿಶ್ವಾಸಾರ್ಹಕ್ಕೆ ಒಳಗಾಗಿದ್ದು, ಕಳೆದ ಗ್ರಾಪಂ ಚುನಾವಣೆಯಲ್ಲಿ ತಾಲೂಕಿನ 31 ಗ್ರಾಪಂಗಳಲ್ಲಿ 25 ಗ್ರಾಪಂ ಬಿಜೆಪಿ ಪಾಲಾಗಿದೆ. ಈ ಮೂಲಕ ಗ್ರಾಮಾಂತರದಲ್ಲಿ ಕಾಂಗ್ರೆಸ್ ಬಲ ಕಳೆದುಕೊಂಡಿದ್ದು, ಮಾಜಿ ಶಾಸಕಿ ಕಾಂಗ್ರೆಸ್ ಪಕ್ಷದಲ್ಲಿ ನೂರಕ್ಕೆ ನೂರು ಪ್ರತಿಶತ ನಾಲಾಯಕು ಎಂಬುದನ್ನು ಮತದಾರರು ಸ್ಪಷ್ಟಪಡಿಸಿದ್ದಾರೆ ಎಂದು ಟೀಕಿಸಿದರು.

ರಾಜ ಧರ್ಮದಲ್ಲಿ ನಡೆಯುವ ಮಾಜಿ ಶಾಸಕಿಯವರು ಬಿಜೆಪಿಯಲ್ಲಿ ಇದ್ದು ಪಕ್ಷಕ್ಕೆ ಕಾಟ ಕೊಟ್ಟು ಹೊರಗೆ ಹೋದವರು. ತನ್ನ ಶಾಸಕತ್ವದ ಅವಧಿಯಲ್ಲಿ ಪುತ್ತೂರಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕಿರುವ ಶಾಸಕರಿದ್ದರೆ ಅದು ಶಕುಂತಳಾ ಶೆಟ್ಟಿಯವರು. ಮಾಜಿ ಶಾಸಕಿ ಅವರು ತಪ್ಪು ಹೇಳಿಕೆಗಳನ್ನು ನೋಡಿದರೆ ವಯೋ ಸಹಜ ವ್ಯತ್ಯಾಸಗಳು ಅವರಿಗಿದೆ ಎಂಬುದು ಕಂಡುಬರುತ್ತಿದೆ. ಇನ್ನಾದರೂ ಟೂಲ್‌ಕಿಟ್ ಸಂಸ್ಕೃತಿಯನ್ನು ಬಿಟ್ಟು ಮಾಜಿ ಶಾಸಕರು ನೇರ ದಿಟ್ಟ ಶಾಸಕ ಸಂಜೀವ ಮಠಂದೂರು ಅವರ ಕೆಲಸ ಕಾರ್ಯಗಳಿಗೆ ಅಭಿನಂದನೆ ಸಲ್ಲಿಸುವ ಕೆಲಸ ಮಾಡಲಿ ಎಂದು ಹೇಳಿದರು. ಈ ನಡುವೆ ಮಾಜಿ‌ ಶಾಸಕಿ ಪರವಾಗಿಯೂ ಕೆಲ‌ ಕಾಂಗ್ರೆಸ್ ಮುಖಂಡರು ನಿಂತಿದ್ದು ,ಇಂದಿರಾ‌ ಕ್ಯಾಂಟೀನ್ ವಿಚಾರ ಪುತ್ತೂರಿನಲ್ಲಿ ಕೊರೋನಾ ಕ್ಕಿಂತಲೂ ಹೆಚ್ಚು ಮಹತ್ವ ಪಡೆದುಕೊಂಡಾತಾಗಿದೆ.
Published by:HR Ramesh
First published: