ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಅಕ್ಕಿ ಅಕ್ರಮ ಹೊಸದೇನಲ್ಲ. ಆಗಾಗ ದಾಳಿ ನಡೆಯುತ್ತಲೇ ಇರುತ್ತೆ. ಅಕ್ಕಿ ಕಳ್ಳರು ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈ ಬಾರಿ ಅಕ್ಕಿ ಕಳ್ಳಕೋರರಿಗೆ ದಾಳ ಉರುಳಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ಕಿ ಅಕ್ರಮಕ್ಕೆ ಕಡಿವಾಣ ಹಾಕುವುದು ತಡವಾಗುವ ವಿಷಯವೇ ಅಲ್ಲ. ಆದರೆ ಅಕ್ರಮಕ್ಕೆ ಕಡಿವಾಣ ಹಾಕಿದರೆ ಬೊಕ್ಕಣ ತುಂಬಲ್ಲವೆಂದು ಆಗಾಗ ಹುಲಿಯಂತೆ ದಾಳಿ ಮಾಡಿ ಇಲಿಯಂತೆ ಒಂದಿಷ್ಟು ಅಕ್ಕಿ ಚೀಲ ಹಿಡಿದು ಬಿಲ್ಡಪ್ ಕೊಡುತ್ತಾರೆ ಆಹಾರ ಇಲಾಖೆಯ ಅಧಿಕಾರಿಗಳು. ಹೀಗೇ ಮಾಡಿದರೆ ಮಾತ್ರ ಅಕ್ಕಿ ಅಕ್ರಮ ವ್ಯಾಪಾರಿಗಳು ತಿಂಗಳಿಗೊಮ್ಮೆ ಯೋಗಕ್ಷೇಮ ವಿಚಾರಿಸುತ್ತಾರೆ. ಹಾಗಾಗಿ ಈ ಅಕ್ರಮದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಸಹ ಪಾಲುದಾರರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಭತ್ತದ ಕಣಜ ಗಂಗಾವತಿ ಸೋನಾ ಮಸೂರಿ ಅಕ್ಕಿಗೆ ಫೇಮಸ್. ಮೊದಲು ಸಿಕ್ಕಾಪಟ್ಟೆ ಅಕ್ಕಿ ಗಿರಣಿಗಳಿದ್ದವು. ಅಂದಾಜಿನ ಪ್ರಕಾರ 2010ರಲ್ಲಿ 130ಕ್ಕೂ ಅಧಿಕ ಅಕ್ಕಿ ಗಿರಣಿಗಳಿದ್ದವು. 2020ರಲ್ಲಿ ಕೇವಲ 30-40 ಅಕ್ಕಿ ಗಿರಣಿಗಳು ಮಾತ್ರ ಉಳಿದುಕೊಂಡಿವೆ.
ಸೋನಾ ಮಸೂರಿಯಾಗಿ ರೂಪಾಂತರವಾಗುತ್ತೆ ಪಿಡಿಎಸ್ ಅಕ್ಕಿ?
ಜಿಲ್ಲೆಯಲ್ಲಿ ಅಕ್ಕಿ ಸಂಗ್ರಹದ ಪ್ರಮುಖ ಕೇಂದ್ರ ಗಂಗಾವತಿ. ಇಲ್ಲಿನ ಎಪಿಎಂಸಿಯಲ್ಲಿ ಹಲವು ಟ್ರೇಡಿಂಗ್ ಕಂಪನಿಗಳಿವೆ. ಇಲ್ಲೆಲ್ಲ ಪಡಿತರ ಅಕ್ಕಿ ಸಂಗ್ರಹಿಸಲಾಗುತ್ತೆ. ಸಂಗ್ರಹಿಸಿದ ಪಡಿತರ ಅಕ್ಕಿಯನ್ನು ನೈಸಾಗುವಂತೆ ಪಾಲಿಶ್ ಮಾಡಿ 12-15 ರೂ.ಗಳಂತೆ (ಪ್ರತಿ ಕೆಜಿಗೆ) ಖರೀದಿಸಿದ ಪಿಡಿಎಸ್ ಅಕ್ಕಿಯನ್ನು ಸೋನಾ ಮಸೂರಿ ಅಕ್ಕಿ ಎಂದು ಪ್ರತಿ ಕೆಜಿಗೆ 75-85 ರೂ.ಗಳಂತೆ ಮಾರಾಟ ಮಾಡಲಾಗುತ್ತೆ. ಪಡಿತರ ಅಕ್ಕಿಯನ್ನೇ ಬಳಸುವ ಕೆಲ ಶ್ರೀಮಂತರು ಸೋನಾ ಮಸೂರಿ ಅಕ್ಕಿ ಬಳಸುತ್ತೇವೆ ಎಂದು ಬೀಗುತ್ತಾರಷ್ಟೇ.
ಇದನ್ನು ಓದಿ: ಅಕ್ಕಿ ದೋಖಾ ಭಾಗ-1; ರೈಸ್ ಮಿಲ್ಗಳಲ್ಲಿ ಟನ್ಗಟ್ಟಲೇ ಸಿಕ್ತು ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ
ಇತ್ತೀಚೆಗೆ ಅಕ್ಕಿ ಅಕ್ರಮ ದಂಧೆಕೋರರು ಪಡಿತರ ಅಕ್ಕಿ ಜೊತೆ ಚುರುಮುರಿ ಭಟ್ಟಿಗಳ (ಮಂಡಾಳ ಭಟ್ಟಿ) ತ್ಯಾಜ್ಯ ಸೇರಿಸಿ ಪಾಲಿಶ್ ಮಾಡುತ್ತಿರುವ ಬಗ್ಗೆ ಅನುಮಾನಗಳು ತನಿಖೆ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ.
ಗಂಗಾವತಿ ಅಕ್ಕಿ ಎಂದಾಕ್ಷಣ ಚನ್ನಾಗಿರುತ್ತೆ ಎಂಬ ನಂಬಿಕೆ ಇತ್ತು. ಆದರೆ ಈ ಪ್ರಕರಣದಿಂದ ನಮ್ಮ ನಂಬಿಕೆ ಹುಸಿಯಾಗಿದೆ. ರೇಷನ್ ಅಕ್ಕಿಯನ್ನೇ ಊಟಕ್ಕೆ ಬಳಸುವುದು ಸಾವಿರ ಪಾಲು ಉತ್ತಮ ಅನಿಸುತ್ತೆ ಎಂದು ಸ್ಥಳೀಯ ಜಗದೀಶ್ ಹೇಳುತ್ತಾರೆ.
ವಿಶೇಷ ವರದಿ; ಬಸವರಾಜ ಕರುಗಲ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ