ಅಜ್ಜಂಪುರದಲ್ಲಿ ಕಿವಿ ಚುಚ್ಚಿಸಲು ಹೋದಾಗ ಮಗು ನಾಪತ್ತೆ; 4 ದಿನದ ಬಳಿಕ ಮತ್ತೆ ತಾಯಿ ಮಡಿಲಿಗೆ

ದೂರದ ಸಂಬಂಧಿಗಳೇ ಮಗುವನ್ನ ಅಪಹರಿಸಿದ್ದು ತಿಳಿದುಬಂದಿದೆ. ಪೊಲೀಸರು ಹುಡುಕಾಡುತ್ತಿರುವುದು ಗೊತ್ತಾದ ಬಳಿಕ ದುಷ್ಕರ್ಮಿಗಳು ಮಗುವನ್ನು ಚಿಕ್ಕಮಗಳೂರಿನ ಯಾದಪುರದ ದೇವಸ್ಥಾನವೊಂದರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

news18-kannada
Updated:September 17, 2020, 7:58 AM IST
ಅಜ್ಜಂಪುರದಲ್ಲಿ ಕಿವಿ ಚುಚ್ಚಿಸಲು ಹೋದಾಗ ಮಗು ನಾಪತ್ತೆ; 4 ದಿನದ ಬಳಿಕ ಮತ್ತೆ ತಾಯಿ ಮಡಿಲಿಗೆ
ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ನಾಪತ್ತೆಯಾಗಿ 4 ದಿನದ ಬಳಿಕ ತಾಯಿ ಮಡಿಲು ಸೇರಿದ ಮಗು
  • Share this:
ಚಿಕ್ಕಮಗಳೂರು: ಒಂಬತ್ತು ತಿಂಗಳ ಮಗುವಿಗೆ ಕಿವಿ ಚುಚ್ಚಿಸಲು ಕರೆದುಕೊಂಡು ಹೋದ ವೇಳೆಯಲ್ಲೇ ಹೊಂಚು ಹಾಕಿ ಕಾಯುತ್ತಿದ್ದ ದುಷ್ಟರು ಆ ಕಂದಮ್ಮನನ್ನ ಅಪಹರಿಸಿದ್ದರು ಮಾಡಿದ್ದರು. ಮಗು ನಾಪತ್ತೆಯಾಗಿ ತಮ್ಮ ಕೈ ತಪ್ಪೇ ಹೋಯ್ತು ಎಂದು ಹೆತ್ತಮ್ಮ ಕಣ್ಣೀರಿಡುತ್ತಿರುವಾಗಲೇ ಪೊಲೀಸರು ಜೋಪಾನವಾಗಿ ಕಂದಮ್ಮನನ್ನ ತಾಯಿಯ ಮಡಿಲು ಸೇರಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ನಡೆದಿದೆ. 

ಅಜ್ಜಂಪುರ ತಾಲೂಕಿನ ಬಿ. ಹೊಸೂರ್ ಗ್ರಾಮದ ಪ್ರೇಮಾ-ರಾಜು ದಂಪತಿಯ ಮಗು ಪ್ರೀತಂಗೆ 9 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 12 ರಂದು ಕಿವಿ ಚುಚ್ಚಿಸುವ ಕಾರ್ಯವನ್ನ ಕುಟುಂಬದವರು ಹಮ್ಮಿಕೊಂಡಿದ್ದರು. ಹೀಗಾಗಿ ಜ್ಯುವೆಲ್ಲರಿ ಶಾಪ್​ಗೆ ಹೋಗಿ ಮಗುವಿನ ಕಿವಿ ಚುಚ್ಚಿಸೋಣ ಅಂತಾ ಮಗುವಿನ ತಾಯಿ, ಅಜ್ಜಿ ಮನೆಯಲ್ಲಿ ಪೂಜೆ ಮಾಡಿ ಅಜ್ಜಂಪುರಕ್ಕೆ ಬಂದಿದ್ದರು. ಅಜ್ಜಂಪುರದ ಜ್ಯುವೆಲ್ಲರಿ ಶಾಪ್​ನಲ್ಲಿ ಮಗುವಿನ ಕಿವಿ ಚುಚ್ಚಿಸಿ ಆದ ನಂತರ, ತಾಯಿ ರೆಸ್ಟ್ ರೂಮ್​ಗೆ ಹೋಗಿ ಬರುವಷ್ಟರಲ್ಲೇ ಇದೇ ಕುಟುಂಬದ ದೂರದ ಸಂಬಂಧಿಗಳಾದ ಆನಂದ್ ಹಾಗೂ ಪ್ರದೀಪ್ ಮಗುವನ್ನ ಎತ್ತುಕೊಂಡು ಪರಾರಿ ಆಗಿದ್ದಾರೆ. ಆಗ ಮಗು ಕಾಣದೆ ಹೆತ್ತಮ್ಮ, ಅಜ್ಜಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಡಿಸಿಎಂ ಸ್ಥಾನಕ್ಕಾಗಿ ದೇವರ ಮೊರೆ ಹೋದ ಸಚಿವ ಬಿ. ಶ್ರೀರಾಮುಲು - ಗಡೇ ದುರ್ಗಾದೇವಿಗೆ ವಿಶೇಷ ಪೂಜೆ

ನಂತರ ಎಲ್ಲಾ ಕಡೆ ಹುಡುಕಾಡಿದ ಕುಟುಂಬದವರು ಕೊನೆಗೆ ಮೊನ್ನೆ ಸೆ. 15ರಂದು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ದೂರು ದಾಖಲಿಸುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅಜ್ಜಂಪುರ ಪೊಲೀಸರು, ಆನಂದ್ ಊರು ಸೇರಿದಂತೆ ಚಿತ್ರದುರ್ಗಕ್ಕೂ ಹೋಗಿ ಹುಡುಕಾಟ ನಡೆಸುತ್ತಾರೆ. ಕೊನೆಗೆ ಪೊಲೀಸರು ಹುಡುಕಾಟ ನಡೆಸುತ್ತಿರುವುದನ್ನು ತಿಳಿದ ಆನಂದ್ ಹಾಗೂ ಪ್ರದೀಪ್ ಆ ಮಗುವನ್ನ ಯಾದಪುರದ ದೇವಾಸ್ಥಾನದ ಸಮೀಪ ಬಿಟ್ಟು ಕಾಲ್ಕಿತ್ತಿದ್ದಾರೆ. ಸದ್ಯ ಸುರಕ್ಷಿತವಾಗಿ ಮಗುವನ್ನ ಹೆತ್ತಮನ ಮಡಿಲಿಗೆ ಸೇರಿಸಿರುವ ಪೊಲೀಸರು, ಪರಾರಿಯಾಗಿರೋ ಮಕ್ಕಳ ಕಳ್ಳರಿಗೆ ಬಲೆ ಬೀಸಿದ್ದಾರೆ. ಕೈ ತಪ್ಪೇ ಹೋಯ್ತು ನನ್ನ ಕಂದಮ್ಮ ಅಂತಾ ಕಣ್ಣೀರಿಟ್ಟಿದ್ದ ತಾಯಿ, ಇದೀಗ ಕಂದನನ್ನ ತಬ್ಬಿಕೊಂಡು ಆನಂದ ಬಾಷ್ಪ ಸುರಿಸುತ್ತಿದ್ದಾಳೆ.

ವರದಿ: ವೀರೇಶ್ ಹೆಚ್ ಜಿ 
Published by: Vijayasarthy SN
First published: September 17, 2020, 7:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading