ವಿಜಯಪುರ (ಸೆಪ್ಟೆಂಬರ್ 24); ನಿದ್ರೆಯ ಮಂಪರಿನಲ್ಲಿದ್ದ ವಿಜಯಪುರ ಜೈಲು ಸಿಬ್ಬಂದಿ ಹಾಗೂ ಕೈದಿಗಳಿಗೆ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗ್ರವಾಲ ಮತ್ತು ತಂಡ ಇಂದು ಬೆಳಗ್ ಬೆಳಗ್ಗೆಯೇ ಭರ್ಜರಿ ಶಾಕ್ ನೀಡಿದೆ. ಇಂದು ಬೆಳ್ಳಂಬೆಳಿಗ್ಗೆ ವಿಜಯಪುರ ಕೇಂದ್ರ ಕಾರಾಗೃಹದ ಮೇಳೆ ಧಾಳಿ ನಡೆಸಿರುವ ಪೊಲೀಸರ ತಂಡ ನಾನಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಪೊಲೀಸರ ಧಾಳಿ ಮಾತ್ರ ಕಾರಾಗೃಹದ ಸಿಬ್ಬಂದಿ ಮತ್ತು ಕೈದಿಗಳು ಬೆಚ್ಚಿ ಬೀಳುವಂತೆ ಮಾಡಿದೆ. ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಪದೇ ಪದೇ ಆರೋಪಗಳು ಕೇಳಿ ಬರುತ್ತಲೇ ಇವೆ. ಪೊಲೀಸರೂ ಸಹ ಆಗಾಗ ಧಾಳಿ ನಡೆಸುತ್ತಲೇ ಇರುತ್ತಾರೆ. ಆದರೆ, ಇಂದು ಬೆಳ್ಳಂಬೆಳಿಗ್ಗೆ ನಡೆಸಿದ ಧಾಳಿ ಮಾತ್ರ ಅಲ್ಲಿದ್ದ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.
ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ಇಡೀ ಜೈಲನ್ನೇ ಜಾಲಾಡಿದ್ದಾರೆ. ಈ ಧಾಳಿಯ ಸಂದರ್ಭದಲ್ಲಿ ಪೊಲೀಸರಿಗೆ ಮೂರು ಮೊಬೈಲ್ ಮತ್ತು ಸಿಮ್ ಕಾರ್ಡ್, ಒಂದು ಹೆಚ್ಚುವರಿ ಸಿಮ್ ಕಾರ್ಡ್, ಮೊಬೈಲ್ ಚಾರ್ಜರ್ ಗಳು, ಬ್ಯಾಟರಿಗಳು, ಇಯರ್ ಫೋನ್, ತಂಬಾಕು ಮತ್ತು ಸಿಗರೇಟು ಪಾಕೀಟುಗಳು ಸಿಕ್ಕಿದ್ದು ಅವುಗಳನ್ನು ಜಪ್ತಿ ಮಾಡಲಾಗಿದೆ ಎನ್ನಲಾಗುತ್ತಿದೆ.
ಇಂದು ಬೆಳಿಗ್ಗೆ 6.15ಕ್ಕೆ ಧಾಳಿ ನಡೆಸಿದ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಮತ್ತು ತಂಡ ಬೆ. 8 ಗಂಟೆಯವರೆಗೆ ಎಲ್ಲ ಬ್ಯಾರಕ್ ಗಳನ್ನು ಜಾಲಾಡಿದೆ. ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಆಗಾಗ ದೂರುಗಳು ಕೇಳಿ ಬರುತ್ತಲೇ ಇದ್ದವು. ಅಲ್ಲದೇ, ಪೊಲೀಸರೂ ಕೂಡ ಆಗಾಗ ತಪಾಸಣೆ ನಡೆಸುತ್ತಲೇ ಬಂದಿದ್ದಾರೆ.
ಇಂದೂ ಕೂಡ ರೊಟೀನ್ ಚೆಕ್ ನಡೆಸಲು ನಿರ್ಧರಿಸಿದ ಪೊಲೀಸರು ಭಾರಿ ಸಿಬ್ಬಂದಿಯೊಂದಿಗೆ ಬಂದು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜೈಲಿನಲ್ಲಿರುವ ಸಿಬ್ಬಂದಿ ಕಾನೂನು ಬಾಹಿರವಾಗಿ ಇಟ್ಟುಕೊಂಡಿದ್ದ ತಂಬಾಕು, ಸಿಗರೇಟುಗಳನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಈ ಧಾಳಿ ನಡೆದಿದೆ.
ಈ ಧಾಳಿಯಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಸಿಪಿಐಗಳಾದ ಬಸವರಾಜ ಮುಕರ್ತಿಹಾಳ, ರವೀಂದ್ರ ನಾಯ್ಕೋಡಿ, ಸುನಿಲ ಕಾಂಬಳೆ, ಮಹಾಂತೇಶ ಧಾಮಣ್ಣವರ, ಸಿ. ಬಿ. ಬಾಗೇವಾಡಿ, ಸೇರಿದಂತೆ ಏಳು ಜನ ಸಿಪಿಐಗಳು, 7 ಜನ ಪಿಎಸ್ಐ ಮತ್ತು 57 ಜನ ಪೊಲೀಸ್ ಸಿಬ್ಬಂದಿ ಏಕಕಾಲಕ್ಕೆ ಧಾಳಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ