ಚಾಮರಾಜನಗರ(ಸೆ. 10): ಹುಲಿ ಉಗುರುಗಳನ್ನು ಮಾರಾಟ ಮಾಡಲು ಕೊಂಡಯ್ಯೊತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಸಿಐಡಿ ಅರಣ್ಯ ಸಂಚಾರಿ ದಳ ಪೊಲೀಸರು, ಎರಡು ಹುಲಿ ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಳ್ಳೇಗಾಲದ ನಾರಾಯಣಿ ಹಾಗು ನಯೀಮ್ ಪಾಷಾ ಎಂಬುವರು ಹುಲಿ ಉಗುರು ಮಾರಾಟ ಮಾಡಲು ಆಟೋದಲ್ಲಿ ತೆರಳುತ್ತಿದ್ದರು. ಆದರೆ ಅಣಗಳ್ಳಿ ಬಳಿ ಎದುರಿನಿಂದ ಬರುತ್ತಿದ್ದ ಸಿಐಡಿ ಅರಣ್ಯ ಸಂಚಾರಿ ದಳದ ಜೀಪ್ ಕಂಡೊಡನೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಆಟೋ ನಿಲ್ಲಿಸಿ ವಿಚಾರಣೆ ನಡೆಸಿದಾಗ ಹುಲಿ ಉಗುರು ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ನಾರಾಯಣಿ ಹಾಗು ನಯೀಮ್ ಪಾಷಾ ಹೇಳಿಕೆ ನೀಡಿದ್ದಾರೆ. ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೆ ಗುರಿಪಡಿಸಿದಾಗ, ಕೊರಳಿಗೆ ಹಾಕಿಕೊಳ್ಳಲು ಡಾಲರ್ ಮಾಡಿಸಿಕೊಳ್ಳಲು ಮೂರು ತಿಂಗಳ ಹಿಂದೆ ವ್ಯಕ್ತಿಯೊಬ್ಬನಿಂದ ಎರಡು ಹುಲಿ ಉಗುರುಗಳನ್ನು 20 ಸಾವಿರ ರೂಪಾಯಿಗೆ ಖರೀದಿಸಿದ್ದಾಗಿ ಆರೋಪಿ ನಾರಾಯಣಿ ತಿಳಿಸಿದ್ದಾನೆ. ಆದರೆ ಈಗ ಹಣಕಾಸಿನ ತೊಂದರೆ ಇದ್ದುದ್ದರಿಂದ ಅವುಗಳನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಆದರೆ ಹುಲಿ ಉಗುರುಗಳನ್ನು ತಾವು ಯಾರಿಂದ ಖರೀದಿಸಿದ್ದೆವು ಹಾಗು ಯಾರಿಗೆ ಮಾರಾಟ ಮಾಡುತ್ತಿದ್ದೆವು ಎಂಬುದರ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಖಚಿತ ಮಾಹಿತಿ ನೀಡಿಲ್ಲ ಎಂದು ಅರಣ್ಯ ಸಂಚಾರಿ ದಳದ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Charmadi Ghat: ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಯುವಕರಿಂದ ಚಾರ್ಮಾಡಿ ಉಳಿಸಿ ಅಭಿಯಾನ
ಕೆಲದಿನಗಳ ಹಿಂದಷ್ಟೇ ಮಲೆಮಹದೇಶ್ವರ ವನ್ಯ ಜೀವಿ ವಿಭಾಗದ ಅರಣ್ಯಾಧಿಕಾರಿಗಳು ನಾಲ್ವರು ಬೇಟೆಗಾರರನ್ನು ಬಂಧಿಸಿ ಹುಲಿ ಸೇರಿದಂತೆ ಬೇರೆ ಬೇರೆ ಪ್ರಾಣಿಗಳ ಚರ್ಮ, ಮೂಳೆ, ಉಗುರುಗಳನ್ನು ವಶಪಡಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಅರಣ್ಯಸಂಚಾರಿದಳ ಪೊಲೀಸರು ಇಬ್ಬರನ್ನು ಬಂಧಿಸಿ ಎರಡು ಹುಲಿ ಉಗುರುಗಳನ್ನು ವಶಪಡಿಸಿಕೊಂಡಿರುವುದನ್ನು ಅವಲೋಕಿಸಿದಾಗ ಚಾಮರಾಜನಗರ ಜಿಲ್ಲೆಯ ಅರಣ್ಯಗಳಲ್ಲಿ ಹುಲಿ ಹಂತಕರ ಜಾಲ ಸಕ್ರಿಯವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ವರದಿ: ಎಸ್.ಎಂ. ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ