HOME » NEWS » District » POLICE ARREST TWO GANGS OF THIEVES IN BENGALURU GVTV SNVS

ಹಗಲಲ್ಲಿ ಹಣ್ಣು ವ್ಯಾಪಾರ, ಇರುಳಲ್ಲಿ ಮನೆಗಳ್ಳತನ: ಎರಡು ಐನಾತಿ ಗ್ಯಾಂಗ್ ಬೆಂಗಳೂರು ಪೊಲೀಸರ ಬಲೆಗೆ

ದೂರದ ಊರುಗಳಿಂದ ಬೆಂಗಳೂರಿಗೆ ಬಂದು ಬೀದಿಬೀದಿ ಸುತ್ತುತ್ತಾ ಬೀಗ ಹಾಕಿದ ಮನೆಗಳನ್ನ ಪತ್ತೆ ಮಾಡಿ ಕಳ್ಳತನ ಮಾಡುತ್ತಿತ್ತು ಒಂದು ಗ್ಯಾಂಗ್; ಕಳ್ಳತನದ ಸುಳಿವು ಸಿಗಬಾರದೆಂದು ಕೈಗೆ ಗ್ಲೌಸ್ ತೊಟ್ಟು ಕೃತ್ಯ ಎಸಗುತ್ತಿದ್ದ ಮತ್ತೊಂದು ಗ್ಯಾಂಗನ್ನು ಪೊಲೀಸರು ಹಿಡಿದುಹಾಕಿದ್ದಾರೆ.

news18-kannada
Updated:April 10, 2021, 3:41 PM IST
ಹಗಲಲ್ಲಿ ಹಣ್ಣು ವ್ಯಾಪಾರ, ಇರುಳಲ್ಲಿ ಮನೆಗಳ್ಳತನ: ಎರಡು ಐನಾತಿ ಗ್ಯಾಂಗ್ ಬೆಂಗಳೂರು ಪೊಲೀಸರ ಬಲೆಗೆ
ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ
  • Share this:
ಬೆಂಗಳೂರು: ರಾಜಧಾನಿಯಲ್ಲಿ ಮನೆಗಳ್ಳತನ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಮನೆಗಳ್ಳರು ಕಳ್ಳತನ ಮಾಡೋಕೆ ಹೊಸ ಹೊಸ ಐಡಿಯಾ ಮಾಡೋದು ಮಾಮೂಲಿ.  ಹೈಫೈ ಲೈಫ್ ಗಾಗಿ ಮನೆಗಳ್ಳತನಕ್ಕೆ ಬರೋ ಕಳ್ಳರ ಪ್ಲಾನ್ ಡಿಫರೆಂಟ್ ಆಗೇ ಇರುತ್ತೆ. ಹೀಗೆ ದೂರದೂರಿನಿಂದ ಬಂದಿದ್ದ ಖತರ್ನಾಕ್ ಗ್ಯಾಂಗ್ ಮಾಡ್ತಿದ್ದ ಐನಾತಿ ಐಡಿಯಾಗೆ ಪೊಲೀಸರೇ ಶಾಕ್ ಆಗಿದ್ದಾರೆ. ಎಲ್ಲಿಯೂ ಸುಳಿವು ಸಿಗದಂತೆ ಅಚ್ಚುಕಟ್ಟಾಗಿ ಕಳ್ಳತನ ಮಾಡುತ್ತಿದ್ದ ಈ ಗ್ಯಾಂಗ್ ಸದಸ್ಯರನ್ನ ಸಂಜಯ್ ನಗರ ಠಾಣೆ ಪೊಲೀಸರು ಹೆಡೆಮುರಿಕಟ್ಟಿ ಜೈಲಿಗೆ ಹಾಕಿದ್ಧಾರೆ.

ಈ ಗ್ಯಾಂಗ್ ಸದಸ್ಯರು ಹಗಲಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಾ, ಬೀದಿ ಬೀದಿಯಲ್ಲಿ ಅಲೆಯುತ್ತಿರುತ್ತಾರೆ. ಆಗ ಎರಡು ಮೂರು ದಿನದಿಂದ ಬೀಗ ಹಾಕಿರುವ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ರು.. ಅಷ್ಟೇ, ರಾತ್ರಿ ಗ್ಯಾಂಗ್ ನ ಇತರೆ ಸದಸ್ಯರಿಗೆ ಕರೆ ಮಾಡಿ ವಿವರ ಕೊಡ್ತಿದ್ರು.. ಮನೆಯ ಬರುವ ಗ್ಯಾಂಗ್ ಬಾಗಿಲನ್ನು‌ ಕಬ್ಬಿಣ ಸಲಾಕೆಯಿಂದ ಮೀಟಿ ಮನೆಯ ಬಾಗಿಲನ್ನು ತೆರೆದು ಮನೆಗಳ್ಳತನ ಮಾಡುತ್ತಿದ್ದರು. ಆದರೀಗ ಈ ಗ್ಯಾಂಗ್ ಅನ್ನ ಸಂಜಯ್ ನಗರ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಣಿ ಅಲಿಯಾಸ್ ನಾಗಮಣಿ, ಆರುಮುಗಂ, ಪಾಂಡಿಯನ್ ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇವರಿಂದ 16 ಲಕ್ಷ ರೂ ಮೌಲ್ಯದ 316 ಗ್ರಾಂ ಚಿನ್ನಾಭರಣ ಮತ್ತು 200 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಇವರ ವಿರುದ್ಧ ತಮಿಳು‌ನಾಡಿನಲ್ಲಿ 79 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಪೊಲೀಸರ ವಶಕ್ಕೆ ಕೋಡಿಹಳ್ಳಿ ಚಂದ್ರಶೇಖರ್; ಇದು ದಮನ ನೀತಿ ಎಂದ ಹೋರಾಟಗಾರರು

ಮೊತ್ತೊಂದು ಗ್ಯಾಂಗ್ ಸಿಕ್ಕಿಬಿದ್ದದ್ದು ಹೀಗೆ:

ಇದೇ ವೇಳೆ ಮತ್ತೊಂದು ಚಾಲಾಕಿ ಗ್ಯಾಂಗ್​ನ ಜಾಡನ್ನು ಪತ್ತೆ ಹಚ್ಚಲು ಪೊಲೀಸರು ಸಫಲರಾಗಿದ್ಧಾರೆ. ಈ ಗ್ಯಾಂಗ್​ನವರು ಕಳ್ಳತನ ಮಾಡುವ ವೇಳೆ ಫಿಂಗರ್ ಪ್ರಿಂಟ್ ಸಿಗಬಾರದೆಂದು ಕೈಗೆ ಗ್ಲೌಸ್ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದರೆಂದು ತನಿಖೆಯ ವೇಳೆ ತಿಳಿದುಬಂದಿದೆ. ಪೊಲೀಸರಿಗೆ ಯಾವ ಸುಳಿವೂ ಸಿಗಬಾರದೆಂದು ಇವರು ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿರುತ್ತಾರೆ. ಇವರ ಕಳ್ಳತನದ ದೃಶ್ಯಗಳನ್ನ ಸೆರೆಯಾಗಿರುವ ಸಿಸಿಟಿವಿಯನ್ನು ನೋಡಿದ ಬಳಿಕ ಪೊಲೀಸರಿಗೆ ಇವರ ಚಾಲಾಕಿತನ ಗೊತ್ತಾಗುತ್ತದೆ. ಆ ಸಿಸಿಟಿವಿ ದೃಶ್ಯದಲ್ಲೇ ಪೊಲೀಸರಿಗೆ ಒಂದು ಸುಳಿವು ಕೂಡ ಸಿಗುತ್ತದೆ. ಸಿಸಿಟಿವಿಯಲ್ಲಿ‌ ಸೆರೆಯಾದ ದೃಶ್ಯದಲ್ಲಿ ಕಳ್ಳ ತನ್ನ ಮೊಬೈಲ್ ಬಳಸುತ್ತಾ ಇರುತ್ತಾನೆ. ಆ ಮೊಬೈಲ್ ಬ್ಲಿಂಕ್ ಆಗುತ್ತಿರುತ್ತದೆ. ಪೊಲೀಸರಿಗೆ ಅಷ್ಟೇ ಸಾಕಾಗಿತ್ತು. ಆ ಸ್ಥಳದ ಟವರ್ ಟಂಪ್ ತೆಗೆಸಿ ಕಳ್ಳನ ಜಾಡು ಹಿಡಿದುಬಿಡುತ್ತಾರೆ.

ನಂದಿನಿ ಲೇಔಟ್ ಪೊಲೀಸರು ಈ ಸ್ಮಾರ್ಟ್ ವರ್ಕ್ ಮಾಡಿ ಪ್ರೇಮ್ ಕುಮಾರ್ ಅಲಿಯಾಸ್ ಪ್ರೇಮ್ ಎಂಬಾತನನ್ನು ಬಂಧಿಸಿದ್ದಾರೆ. ಪ್ರೇಮ್ ನನ್ನು ಬಂಧಿಸಿರೋ ಪೊಲೀಸರು 14.5 ಲಕ್ಷ ರೂ ಮೌಲ್ಯದ 320 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈತನ ವಿರುದ್ಧ ಮಾರಿಕುಪ್ಪಂ, ವಿದ್ಯಾರಣ್ಯಪುರ, ರಾಮಮೂರ್ತಿ ನಗರ ಸೇರಿದಂತೆ 8 ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ರಾಮಮೂರ್ತಿನಗರ ಕಳ್ಳತನ ಪ್ರಕರಣದಲ್ಲಿ ಪ್ರೇಮ್ 2014 ರಿಂದ 2019 ವರೆಗೂ ಜೈಲುಶಿಕ್ಷೆ ಅನುಭವಿಸಿದ್ದ. ತಾನು ಬಿಡುಗಡೆಯಾದ ಬಳಿಕವೂ ಕಳ್ಳತನ ಮುಂದುವರೆಸಿ ಮರಳಿ ಜೈಲು ಸೇರಿದ್ದಾನೆ.ಸದ್ಯ ಎರಡು‌ ಮನೆಗಳ್ಳರ ಗ್ಯಾಂಗ್​ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಉತ್ತರ ವಿಭಾಗ ಪೊಲೀಸರು ಚಿನ್ನವನ್ನು ರಿಕವರಿ ಮಾಡಿದ್ದಾರೆ. ಕಳ್ಳ ಅದೆಷ್ಟೇ ಬುದ್ಧಿವಂತಿಕೆಯಿಂದ ಕಳ್ಳತನ ಮಾಡಿದರೂ ಸಿಗುವ ಸಣ್ಣ ಸುಳಿವು ಅವರನ್ನ ಜೈಲಿಗಟ್ಟುತ್ತೆ ಅನ್ನೋದಕ್ಕೆ ಈ ಗ್ಯಾಂಗ್​ಗಳು ಅರೆಸ್ಟ್ ಆಗಿರೋದೇ‌ ಸಾಕ್ಷಿಯಾಗಿದೆ.

ವರದಿ: ಗಂಗಾಧರ ವಾಗಟ
Published by: Vijayasarthy SN
First published: April 10, 2021, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories