ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ನಾಗರಾಜ್ ಸೇರಿ ಇಬ್ಬರ ಬಂಧನ

ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣದ ಆರೋಪಿಗಳಾದ ನಾಗರಾಜ್ ಮತ್ತು ಗಣೇಶ್

ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣದ ಆರೋಪಿಗಳಾದ ನಾಗರಾಜ್ ಮತ್ತು ಗಣೇಶ್

ಗುಡಿಬಂಡೆ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟ ಘಟನೆಯ ಪ್ರಮುಖ ಆರೋಪಿ ನಾಗರಾಜ್​ನನ್ನು ತಮಿಳುನಾಡಿನ ಹೊಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸ್ಫೋಟಕ ಸರಬರಾಜು ಮಾಡಿದ್ದ ಗಣೇಶ್ ಎಂಬಾತನನ್ನೂ ಅರೆಸ್ಟ್ ಮಾಡಲಾಗಿದೆ.

  • Share this:

ಬೆಂಗಳೂರು(ಫೆ. 25): ಚಿಕ್ಕಬಳ್ಳಾಪುರದ ಗುಡಿಬಂಡೆಯ ಹಿರೇನಾಗವಲ್ಲಿ ಬಳಿಯಲ್ಲಿ ಸಂಭವಿಸಿದ್ದ ಜಿಲೆಟಿನ್ ಸ್ಫೋಟ ಪ್ರಕರಣ ಸಂಬಂಧ ಪೊಲೀಸರು ಇಂದು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಎ1 ಆರೋಪಿ ನಾಗರಾಜ್ ಹಾಗೂ ಎ8 ಆರೋಪಿ ಗಣೇಶ್ ಬಂಧಿತರಾಗಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 7 ಮಂದಿಯನ್ನ ಅರೆಸ್ಟ್ ಮಾಡಲಾಗಿದೆ. ಪ್ರಮುಖ ಆರೋಪಿ ನಾಗರಾಜ್ ತಮಿಳುನಾಡಿನ ಹೊಸೂರಿನಲ್ಲಿ ತಲೆಮರೆಸಿಕೊಂಡಿದ್ದರು. ಎಸ್​ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯ ಜಾಡು ಹಿಡಿಯಲು ಯಶಸ್ವಿಯಾಗಿದ್ದಾರೆ. ಆರೋಪಿ ನಾಗರಾಜ್ ಸ್ಫೋಟಗೊಂಡ ಕಲ್ಲು ಕ್ವಾರಿಯ ಮಾಲೀಕನಾಗಿದ್ದ. ಆತ ದಕ್ಷಿಣ ರೈಲ್ವೆ ಸಲಹಾ ಸಮಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡನೂ ಹೌದು ಎನ್ನಲಾಗಿದೆ. ಎಂಟನೇ ಆರೋಪಿ ಗಣೇಶ್ ಜಿಲೆಟಿನ್ ಸ್ಫೋಟಕಗಳನ್ನ ಸರಬರಾಜು ಮಾಡಿದ ಆರೋಪ ಇದೆ.


ಇದೇ ವೇಳೆ, ಆರೋಗ್ಯ ಸಚಿವ ಹಾಗೂ ಘಟನಾ ಸ್ಥಳದ ಕ್ಷೇತ್ರದವರೇ ಆದ ಡಾ. ಕೆ ಸುಧಾಕರ್ ಅವರು ಈ ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ಧಾರೆ. ನಂದಿಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಪ್ರಕರನದಲ್ಲಿ ತಮ್ಮ ಮಾವನ ಮಕ್ಕಳು ಯಾರೂ ಇಲ್ಲ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಎಲ್ಲರ ಮೇಲೆಯೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ಬೈಕ್​ಗೆ ಕಾರು ಡಿಕ್ಕಿ: ಇಬ್ಬರು ಫೂಡ್ ಡೆಲಿವರಿ ಹುಡುಗರ ಸಾವು


ಘಟನೆಯಲ್ಲಿ ನಿರ್ಲಕ್ಷ್ಯ ವಹಿಸಿದ ಇಬ್ಬರು ಪೊಲೀಸರು ಅಮಾನತು ಮಾಡಲಾಗಿದೆ. ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದರೂ ಕ್ರಮ ಕೈಗೊಳ್ಳುತ್ತೇವೆ. ಪೊಲೀಸರ ನಿರಂತರ ದಾಳಿಯಿಂದ ಕ್ರಷರ್ ಮಾಲೀಕರಿಗೆ ಭಯ ಬಂದಿದೆ. ಎ1 ಆರೋಪಿ ಸೇರಿದಂತೆ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ನಮ್ಮ ಪೊಲೀಸರು ಎಲ್ಲವನ್ನೂ ಮಟ್ಟಹಾಕುತ್ತಾರೆ ಎಂದು ಆರೋಗ್ಯ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಇನ್ನು, ಕಳೆದ ವಾರ ಸಂಭವಿಸಿದ ಘಟನೆಯಲ್ಲಿ ಸ್ಫೋಟವಾಗಿದ್ದು ಹಳೆಯ ಜಿಲೆಟಿನ್ ವಸ್ತುಗಳಾಗಿವೆ. ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟಕ್ಕಾಗಿ ಸರ್ಕಾರ ಎಲೆಕ್ಟ್ರಾನಿಕ್ ಡಿಟೋನೇಟರ್ಸ್ ಬಳಕೆಗೆ ಅನುಮತಿ ನೀಡಿದರೂ ಗಣಿ ಮಾಲೀಕರು ಹಳೆಯ ಜಿಲೆಟಿನ್ ಕಡ್ಡಿಗಳನ್ನ ಬಳಕೆ ಮಾಡುತ್ತಿದ್ದಾರೆ. ಎಲೆಕ್ಟ್ರಾನಿಕ್ ಡಿಟೋನೇಟರ್ಸ್ ಬಳಕೆಯಿಂದ ಕಲ್ಲು ತೆಗೆಯಲು ಸಾಧ್ಯವಿಲ್ಲ. ಅದರ ಬೆಲೆ ಅಧಿಕ, ಲಾಭ ಕಡಿಮೆ. ಆದರೆ, ಹಳೆಯ ಜಿಲೆಟಿನ್ ಸ್ಫೋಟಕದಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಇರುವುದರಿಂದ ಅವುಗಳನ್ನೇ ಎಲ್ಲರೂ ಬಳಸುತ್ತಿದ್ದಾರೆ. ಹಿರೇನಾಗವಲ್ಲಿಯಲ್ಲಿ ಸ್ಫೋಟಕ್ಕೆ ಬಳಕೆಯಾಗಿದ್ದ ಜಿಲೆಟಿನ್ ವಸ್ತುಗಳನ್ನ ಆಂಧ್ರ ಪ್ರದೇಶ, ತಮಿಳುನಾಡಿನಿಂದ ಅಕ್ರಮವಾಗಿ ತರಲಾಗಿತ್ತು. ಆ ರಾಜ್ಯಗಳಲ್ಲಿ ಈಗಲೂ ಗಣಿಗಾರಿಕೆಗೆ ಇವೇ ಜಿಲೆಟಿನ್ ಸಾಮಗ್ರಿಗಳನ್ನೇ ಬಳಕೆ ಮಾಡಲಾಗುತ್ತಿದೆ. ಕೇಪು, ಮದ್ದು, ತೊಟಾಯಿ, ಪೆಡ್ಲು, ಉಪ್ಪು, ಮದ್ದುಬತ್ತಿ ಬಳಸುತ್ತಿದ್ದಾರೆ. ಇದರಿಮದ ಕಡಿಮೆ ವೆಚ್ಚಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ತೆಗೆಯಲು ಸಾಧ್ಯ ಎನ್ನಲಾಗುತ್ತಿದೆ.


ಇದನ್ನೂ ಓದಿ: ಧಾರವಾಡ: 12 ಜನರನ್ನು ಬಲಿ ಪಡೆದ ರಸ್ತೆ 'ಸರಿ ಇದೆ' ಎಂದು ಸುಪ್ರೀಂಕೋರ್ಟ್​​​​ಗೆ 'ತಪ್ಪು ವರದಿ' ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ


ಚಿಕ್ಕಬಳ್ಳಾಪುರದ ಗುಡಿಬಂಡೆ ಅರಣ್ಯ ಪ್ರದೇಶದ ಹಿರೇನಾಗವಲ್ಲಿ ಬಳಿಯ ಕಲ್ಲು ಕ್ವಾರಿ ಸಮೀಪದಲ್ಲಿ ಕಳೆದ ವಾರ ಸಂಭವಿಸಿದ ಜಿಲೆಟಿನ್ ಸ್ಫೋಟದಲ್ಲಿ ಆರು ಮಂದಿ ದುರ್ಮರಣವಪ್ಪಿದ್ದರು. ಕಳೆದ ತಿಂಗಳಷ್ಟೇ ಶಿವಮೊಗ್ಗದ ಹುಣಸೋಡು ಬಳಿಯೂ ಇಂಥದ್ದೇ ಘಟನೆಯಾಗಿ ಹಲವು ಸಾವನ್ನಪ್ಪಿದ್ದರು.


ವರದಿ: ನವೀನ್ ಕುಮಾರ್

First published: