ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಪ್ರಕರಣ ಸಂಬಂಧ ಅಪ್ರಾಪ್ತೆ ಯುವತಿ ವಿಚಾರಣೆ ಹಾಗೂ ಸಮನ್ಸ್ ನೀಡುವ ನೆಪದಲ್ಲಿ ಪೊಲೀಸ್ ಸಿಬ್ಬಂದಿಯೋರ್ವ (Police Constable) ಅತ್ಯಾಚಾರ ನಡೆಸಿ (Rape) ಗರ್ಭದಾನ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯ (Kadaba Police Station) ಕಾನ್ಸ್ಟೇಬಲ್ ಮೇಲೆ ರೇಪ್ ಮತ್ತು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಕಡಬ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಶಿವರಾಜ್ ವಿರುದ್ದ ಪ್ರಕರಣ ಸಂಬಂಧ ಅದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಯುವತಿಯ ತಂದೆ ದೂರು ನೀಡಿದ್ದು ತನ್ನ ಮಗಳನ್ನು ಬಲತ್ಕಾರ ಮಾಡಿ ಅತ್ಯಾಚಾರ ಎಸಗಿ ಇದೀಗ ಗರ್ಭವತಿಯಾಗಲು ಕಾರಣನಾಗಿದ್ದು, ಗರ್ಭಪಾತ ನಡೆಸುವ ಸಲುವಾಗಿ ಯುವತಿಯನ್ನು ಮಂಗಳೂರಿನಲ್ಲಿ ಅಜ್ಞಾತ ಸ್ಥಳದಲ್ಲಿರಿಸಿದ್ದಾನೆ. ಅಲ್ಲದೆ ಗರ್ಭಪಾತ ಮಾಡಿಸಲು ಹಣವನ್ನು ಕೂಡ ಪೋಲಿಸ್ ಸಿಬ್ಬಂದಿ ಶಿವರಾಜ್ ನೀಡಿದ್ದಾನೆ ಎಂದು ಯುವತಿಯ ತಂದೆ ದೂರಿನಲ್ಲಿ ದಾಖಲಿಸಿದ್ದಾರೆ.
ಈ ವಿಚಾರವಾಗಿ ಇಂದು ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅವರು,
ಸಮನ್ಸ್ ನೀಡುವ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಪೊಲೀಸ್ ಪೇದೆಯನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ವಿಚಾರಣೆಯಲ್ಲಿ ಆರೋಪಿ ಶಿವರಾಜ್ ತಪ್ಪಿತಸ್ಥ ಎಂದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಶಿವರಾಜ್ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಯುವತಿ ಹಾಗೂ ಆಕೆಯ ತಾಯಿಯನ್ನು ಪತ್ತೆ ಹಚ್ಚಲಾಗಿದೆ. ಇಬ್ಬರಿಗೂ ಮೆಡಿಕಲ್ ಚೆಕ್ ಅಪ್ ಮಾಡಿಸಲಾಗುತ್ತದೆ. ಆರೋಪಿ ಕಾನ್ಸ್ಟೇಬಲ್ ಶಿವರಾಜ್ ವಿರುದ್ಧ ರೇಪ್ ಮತ್ತು ಫೋಕ್ಸೋ ಅಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಮೇಲೆ ವಿರುದ್ಧ ಇನ್ನೊಂದು ಆರೋಪ
ಆರೋಪಿ ಶಿವರಾಜ್ ಅತ್ಯಾಚಾರ ಎಸಗಿದ ಯುವತಿಯ ತಂಗಿಯನ್ನೂ ಬಲೆಗೆ ಹಾಕಲು ಯತ್ನಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಯುವತಿಯ ತಂಗಿಯನ್ನು ಪ್ರೀತಿಯ ನಾಟಕ ಮಾಡಿ ಬಲೆಗೆ ಬೀಳಿಸಲು ಯತ್ನಿಸಿದ್ದ ಆರೋಪಿಗೆ ಕಾನೂನಿನ ಪ್ರಕಾರ ತಕ್ಕ ಶಿಕ್ಷೆ ಆಗಬೇಕು ಎಂದು ಮಹಿಳಾ ಪರ ಸಂಘಟನೆಗಳಿಂದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಯುವತಿಗೆ ಒತ್ತಡಪೂರ್ವಕ ಗರ್ಭಪಾತ ಮಾಡಿಸಿದ ಶಿವರಾಜ್ ಮೇಲೆ ಗರ್ಭಪಾತಕ್ಕೆ ಒತ್ತಡ ಹೇರಿದ ಕೇಸನ್ನೂ ಹಾಕಬೇಕೆಂದು ಇದೇ ವೇಳೆ ಮಹಿಳಾಪರ ಹೋರಾಟಗಾರ್ತಿ ಪುಲಸ್ಯಾ ರೈ ಒತ್ತಾಯಿಸಿದ್ದಾರೆ.
ಇದನ್ನು ಓದಿ: Crime News: ಸಮನ್ಸ್ ನೀಡುವ ನೆಪದಲ್ಲಿ ಯುವತಿಯ ಅತ್ಯಾಚಾರ ಮಾಡಿದ ಪೊಲೀಸ್ ಅಧಿಕಾರಿ
ಏನಿದು ಘಟನೆ?
ಯುವತಿಯ ತಂದೆ ಹಾಗೂ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಮಗಳು ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯಾಗಿದ್ದು, ಪ್ರಕರಣ ಆರು ತಿಂಗಳ ಹಿಂದೆ ಮುಗಿದಿದೆ ಅಷ್ಟೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಶಿವರಾಜ್ ಎಂಬಾತ ಯಾವುದೋ ದಾಖಲೆ, ಸಮನ್ಸ್ ನೀಡುವ ವಿಚಾರಕ್ಕೆ ಮನೆಗೆ ಬರುತ್ತಿದ್ದು ಪರಿಚಯವಾಗಿದ್ದ ಎನ್ನಲಾಗಿದೆ. ಇತ್ತೀಚೆಗೆ ಆರೋಗ್ಯದಲ್ಲಿ ಏರು ಪೇರಾಗಿ ಮಗಳು ಗರ್ಭಿಣಿ ಆಗಿರುವುದು ತಿಳಿದು ಬಂದು ಮಗಳನ್ನು ವಿಚಾರಿಸಿದಾಗ ಕಡಬ ಪೋಲಿಸ್ ಶಿವರಾಜ್ ಎಂಬಾತ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆದುದರಿಂದ ನನಗೆ ಐದೂವರೆ ತಿಂಗಳು ಆಗಿದೆ ಎಂದು ಸತ್ಯ ಬಾಯಿಬಿಟ್ಟಿದ್ದಳು. ಇದೇ ವೇಳೆ ನಾನು ಶಿವರಾಜ್ ನನ್ನು ಸಂಪರ್ಕ ಮಾಡಿ ನನ್ನ ಮಗಳನ್ನು ಮದುವೆಯಾಗು ಎಂದು ಹೇಳಿದ್ದೆ. ಆ ವೇಳೆ ನಾನು ಮದುವೆಯಾಗುವುದಿಲ್ಲ, ಗರ್ಭಿಣಿ ಆಗಿದ್ದರೆ ಅದನ್ನು ಅಬಾರ್ಷನ್ ಮಾಡಿಸುತ್ತೇನೆ. ಅದಕ್ಕೆ ತಗಲುವ ಖರ್ಚು ಕೊಡುತ್ತೇನೆ ಎಂದು ಹೇಳಿದ. ಇದಕ್ಕೆ ನಾನು ನೀನು ಖರ್ಚು ಕೊಡುವುದು ಬೇಡ, ಅಬಾರ್ಷನ್ ಮಾಡಿಸುವುದೂ ಬೇಡ ಎಂದು ಹೇಳಿದ್ದೆ. ಈ ಬಳಿಕ ನಾನು ತುಂಬಾ ಅಘಾತಕ್ಕೊಳಗಾಗಿದ್ದೆ ಎಂದು ಸಂತ್ರಸ್ತ ಯುವತಿ ತಂದೆ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ