ಹುಬ್ಬಳ್ಳಿ: ಬಿಟ್ ಕಾಯಿನ್ ಹಗರಣದ (Bitcoin Scam) ಬಿಸಿ ಕಡಿಮೆಯಾಗುತ್ತಿಲ್ಲ. ಆಡಳಿತಾರೂಢ ಬಿಜೆಪಿ (BJP Government) ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರ ಮುಂದುವರಿದೇ ಇದೆ. ಈ ನಡುವೆ ಬಿ.ಎಸ್. ಯಡಿಯೂರಪ್ಪ (BS Yediyurappa) ಬಿಟ್ ಕಾಯಿನ್ ಕುರಿತು ಹುಬ್ಬಳ್ಳಿಯಲ್ಲಿ ನೀಡಿರುವ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾದವರ ಮೇಲೆ ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಳ್ತಾರೆ ಎಂದಿದ್ದಾರೆ. ಆ ಮೂಲಕ ಯಡಿಯೂರಪ್ಪ ಮುಂದಿನ ದಿನಗಳಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳ ಮುನ್ಸೂಚನೆ ನೀಡಿದ್ದಾರೆ ಎಂಬ ಚರ್ಚೆ ಆರಂಭಗೊಂಡಿದೆ.
ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಮತ್ತು ದಾಖಲೆ ಇದ್ದರೆ ಕೊಡಲಿ. ಯಾವುದೇ ಪಕ್ಷದವರು ಕೊಟ್ಟರೂ ನಿಶ್ಚಿತವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿ ಕ್ರಮ ಕೈಗೊಳ್ತಾರೆ ಅನ್ನೋ ನಿಗೂಢ ಮಾತು ಚರ್ಚೆಗೆ ಗ್ರಾಸವಾಗಿದೆ. ಬಿಟ್ ಕಾಯಿನ್ ಹಗರಣ ತನಿಖೆ ನಡೆದಿದೆ ಎಂದು ಆಡಳಿತಾರೂಢ ಬಿಜೆಪಿ ಹೇಳುತ್ತಿದೆ. ಒಂದು ವೇಳೆ ಯಾರಾದರೂ ತಪ್ಪಿತಸ್ಥರು ಅಂತ ಕಂಡು ಬಂದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕಾದವರು ಅಧಿಕಾರಿಗಳು ಮತ್ತು ನ್ಯಾಯಾಲಯ. ಇದು ಹೀಗಿರಬೇಕಾದ್ರೆ ಮೋದಿ ಕ್ರಮ ಕೈಗೊಳ್ತಾರೆ ಎಂದು ಬಿ.ಎಸ್.ವೈ. ಹೇಳಿರೋದು, ಸರ್ಕಾರದಲ್ಲಿದ್ದವರೊಬ್ಬರ ತಲೆದಂಡವಾಗುತ್ತದೆ ಅನ್ನೋದರ ಮುನ್ಸೂಚನೆಯಾ ಅನ್ನೋ ಚರ್ಚೆ ಆರಂಭಗೊಂಡಿದೆ.
ಕಾಂಗ್ರೆಸ್ ನಲ್ಲಿ ಬಡಿದಾಟ
ಕಾಂಗ್ರೆಸ್ ನಲ್ಲಿ ಎರಡು ಬಣಗಳು ಇರುವುದು ಜಗಜ್ಜಾಹೀರಾಗಿದೆ. ಕಾಂಗ್ರೆಸ್ ನಲ್ಲಿ ಬಡಿದಾಟ ಆರಂಭಗೊಂಡಿದೆ. ಅದರಲ್ಲೇನೂ ಮುಚ್ಚು ಮರೆಯಿಲ್ಲ. ಕಾಂಗ್ರೆಸ್ ಬಡಿದಾಟದ ಬಗ್ಗೆ ಟೀಕೆ ಟಿಪ್ಪಣಿ ಮಾಡೋಕೆ ಹೋಗಲ್ಲ. ವಿರೋಧ ಪಕ್ಷದವರ ವಿರುದ್ಧ ಹೇಳಿಕೆ ನೀಡುವುದಿಲ್ಲ. ಬೆಳೆ ಹಾನಿಯ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಅಧಿಕಾರಿಗಳಿ ಸಮೀಕ್ಷೆ ಮಾಡಲು ಸೂಚಿಸಿದ್ದಾರೆ. ಎಲ್ಲಿ ಬೆಳೆ ನಾಶವಾಗಿದೆಯೋ ಪರಿಹಾರ ಕೊಡೋಕೆ ಕ್ರಮ ಕೈಗೊಳ್ಳುತ್ತರೆ ಎಂದರು.
ಎಲ್ಲರೂ ಸೇರಿ ಜನ ಸ್ವರಾಜ್ ಯಾತ್ರೆ
ಜನ ಸ್ವರಾಜ್ ಯಾತ್ರೆ ಹಿನ್ನೆಲೆಯಲ್ಲಿ 8 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿರುವೆವು. ನಾನು, ನಳಿನ್ ಕುಮಾರ್ ಕಟೀಲ್, ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಾಲ್ಕು ವಿಭಾಗಗಳಲ್ಲಿ ಏಕ ಕಾಲಕ್ಕೆ ಜನ ಸ್ವರಾಜ್ ಯಾತ್ರೆ ನಡೆಯುತ್ತಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಉದ್ದೇಶ ಹೊಂದಲಾಗಿದೆ. ವಿಧಾನ ಪರಿಷತ್ ನಲ್ಲಿ ಬಹುಮತ ಸಾಧಿಸುವ ಪ್ರಯತ್ನ ಮಾಡುತ್ತಿದ್ದು, ಖಂಡಿತ ಯಶಸ್ವಿಯಾಗುತ್ತೇವೆ ಎಂದು ಬಿ.ಎಸ್. ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ನಮ್ಮ ಕಾಲದ ಅವಧಿಯನ್ನೂ ಸೇರಿಸಿಯೇ ನ್ಯಾಯಾಂಗ ತನಿಖೆಗೆ ಕೊಡಿ; Siddaramaiah ಆಗ್ರಹ
ಈ ಚಿತ್ರದಲ್ಲಿ ಇರುವ ವ್ಯಕ್ತಿಗಳನ್ನು ಗುರುತಿಸಿ ಎಂದಿದ್ದ ಬಿಜೆಪಿ
ಬಿಟ್ ಕಾಯಿನ್ ಹಗರಣ ಸಂಬಂಧ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವಿನ ಆರೋಪ -ಪ್ರತ್ಯಾರೋಪಗಳು ತಾರಕಕ್ಕೆ ಏರಿವೆ. ಈ ವಿಷಯವಾಗಿ ಇಂದು ಬಿಜೆಪಿ ರಾಕೇಶ್ ಸಿದ್ದರಾಮಯ್ಯ ಹಲವು ಗೆಳಯರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿತ್ತು. ಈ ಫೋಟೋದಲ್ಲಿ ಹ್ಯಾಕರ್ ಶ್ರೀಕಿಗೆ ಪರಿಚಯವಿದ್ದ ಕೆಲವು ಗೆಳೆಯರು ಇದ್ದರು. ಈ ಚಿತ್ರದಲ್ಲಿರುವ ವ್ಯಕ್ತಿ ಗಳನ್ನು ಗುರುತಿಸಿ ಎಂದು ದಿವಂಗತ ರಾಕೇಶ್ ಸಿದ್ದರಾಮಯ್ಯ ಇರುವ ಫೋಟೋ ವನ್ನು ಬಿಜೆಪಿ ಟ್ವಿಟರ್ನಲ್ಲಿ ಹರಿಬಿಟ್ಟಿತು. ರಾಕೇಶ್ ಜೊತೆಯಲ್ಲಿ ಶ್ರೀಕಿಗೆ ಪರಿಚಯವಿರುವ ಹೇಮಂತ ಮುದ್ದಪ್ಪ ಮತ್ತು ಸುನೀಲ್ ಹೆಗಡೆ ಇದ್ದರು. ಈಗ ಈ ಫೋಟೋವನ್ನು ಇಟ್ಟುಕೊಂಡು ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದೆ.
ವರದಿ - ಶಿವರಾಮ ಅಸುಂಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ