news18-kannada Updated:January 5, 2021, 6:46 PM IST
ಮಾಜಿ ಸಚಿವ ಎಂ.ಬಿ.ಪಾಟೀಲ್
ವಿಜಯಪುರ (ಜ. 05); ಈಗ ಕೊರೋನಾ ಲಸಿಕೆ ಅಗತ್ಯವಾಗಿದೆ ನಿಜ. ಆದರೆ, ಈ ಲಸಿಕೆ ಬಗ್ಗೆ ಸಂಪೂರ್ಣ ಪರೀಕ್ಷೆ ನಡೆಸದೇ ಜನರ ಮೇಲೆ ಪ್ರಯೋಗ ಸರಿಯಲ್ಲ ಎಂದು ಮಾಜಿ ಸಚಿವ ಮತ್ತು ಬಬಲೇಶ್ವರ ಹಾಲಿ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುದಲ್ಲಿ ಮಾತನಾಡಿದ ಅವರು, ಯಾವುದೇ ವ್ಯಾಕ್ಸಿನ್ ಮಾನ್ಯತೆ ನೀಡಬೇಕಾದರೆ 3ನೇ ಹಂತದ ಪ್ರಯೋಗ ಅವಶ್ಯವಾಗಿದೆ. ಈಗ ಲಸಿಕೆ ತುರ್ತು ಅವಶ್ಯಕವಿದೆ ನಿಜ. ಹಾಗಂತ ಸಂಪೂರ್ಣ ಪರೀಕ್ಷೆಯಾಗದೇ ಜನರ ಮೇಲೆ ಇದನ್ನು ಪ್ರಯೋಗ ಮಾಡುವಂತಿಲ್ಲ. ಆತ್ಮನಿರ್ಭಾರ್ ಹೆಸರಿನಲ್ಲಿ ಜನರ ಮೇಲೆ ಕೊರೋನಾ ಲಸಿಕೆ ಪ್ರಯೋಗ ಸರಿಯಲ್ಲ. ಮೊದಲು ಲಸಿಕೆ ಎಲ್ಲ ಪರೀಕ್ಷೆಗಳು ಪೂರ್ಣವಾಗಲಿ ಎಂದು ತಿಳಿಸಿದರು.
ಈ ಲಸಿಕೆ ಸಮರ್ಥಿಸುವವರು ರಷ್ಯಾ ಅಧ್ಯಕ್ಷ ಪುಟಿನ್ ಮಾದರಿಯಲ್ಲಿ ಮೊದಲು ಲಸಿಕೆ ಬಳಸಲಿ. ಆತ್ಮನಿರ್ಭಾರ್ ಎಂದು ಪ್ರತಿಪಾದಿಸುವವರು ಮೊದಲು ಲಸಿಕೆ ಹಾಕಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳದೆ ಎಂ.ಬಿ. ಪಾಟೀಲ ಸಲಹೆ ನೀಡಿದರು.
ಕೊರೋನಾ ಲಸಿಕೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಇದರಲ್ಲಿ ರಾಜಕೀಯ ಬೆರೆಸುವುದೂ ಸರಿಯಲ್ಲ. ಈಗ ಶಾಲೆ ಮತ್ತು ಕಾಲೇಜುಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಮತ್ತು ಪೋಷಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಕೊರೋನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಂಡು ಮುಂದಡಿ ಇಡಬೇಕಾಗಿದೆ ಎಂದು ಅವರು ತಿಳಿಸಿದರು.
ಬ್ರಿಟನ್ ರೂಪಾಂತರ ಕೊರೋನಾ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಯಬೇಕಿದೆ. ಬ್ರಿಟನ್ ಕೊರೋನಾ ಈಗ ಬೆಂಗಳೂರು ಮತ್ತು ಕೇರಳಕ್ಕೂ ಕಾಲಿಟ್ಟಿದೆ. ಸರಕಾರ ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಹಳೆಯ ಕೊರೋನಾ ಮಕ್ಕಳ ಮೇಲೆ ಅಷ್ಟೊಂದು ಪರಿಣಾಮ ಬೀರಿರಲಿಲ್ಲ. ಆದರೆ, ಬ್ರಿಟನ್ ಕೊರೋನಾ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಇದನ್ನು ಓದಿ: ಗಂಡನಿಗೆ ವಿಚ್ಛೇದನ ನೀಡಿ ಪ್ರೇಯಸಿಯನ್ನು ಮದುವೆಯಾಗಲು ಸಹಕರಿಸಿದ ಹೆಂಡತಿ!
ಬೆಳಗಾವಿ ಬೈ ಎಲೆಕ್ಷನ್ ವಿಚಾರ
ಇದೇ ವೇಳೆ ಬೆಳಗಾವಿ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರತಿ ಪ್ರತಿಕ್ರಿಯೆ ನೀಡಿದ ಅವರ, ಸಮಿತಿ ಈಗಾಗಲೇ ಕೆಪಿಸಿಸಿಗೆ ಪಟ್ಟಿಯನ್ನು ಕಳುಹಿಸಿಕೊಟ್ಟಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷರು ಅದನ್ನು ಎಐಸಿಸಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಕೆಪಿಸಿಸಿ ವತಿಯಿಂದ ಎಐಸಿಸಿಗೆ ಪಟ್ಟಿ ಕಳುಹಿಸಿದ ಮೇಲೆ ಅಲ್ಲಿ ಅಂತಿಮ ಆಯ್ಕೆ ನಡೆಯಲಿದೆ. ಈ ಪಟ್ಟಿಯಲ್ಲಿ ಯಾರ ಹೆಸರು ಇದೆ ಮತ್ತು ಎಷ್ಟು ಜನರ ಹೆಸರು ಇದೆ ಎಂಬುದರ ಕುರಿತು ಮಾಹಿತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Published by:
HR Ramesh
First published:
January 5, 2021, 6:46 PM IST