25 ವರ್ಷಗಳ ಹಿಂದೆ ಧಾರವಾಡದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಉತ್ತರಾಖಂಡ್​ನಲ್ಲಿ ಪತ್ತೆ; ಕೆಂಚಪ್ಪನ ರಕ್ಷಿಸಿದ ಯೋಧರು

ಕಳೆದ 25 ವರ್ಷಗಳಿಂದ ಉತ್ತರಾಖಂಡ್​ನಲ್ಲಿ ಸಿಲುಕಿ ತವರಿಗೆ ಮರಳಲಾಗದೆ ನರಕಯಾತನೆ ಅನುಭವಿಸುತ್ತಿದ್ದ ಧಾರವಾಡದ ಕೆಂಚಪ್ಪ ಅವರನ್ನ ಕನ್ನಡಿಗ ಸೈನಿಕರು ರಕ್ಷಣೆ ಮಾಡಿ ಅವರ ಕುಟುಂಬಕ್ಕೆ ಸೇರಿಸಿದ್ದಾರೆ.

ಉತ್ತರಾಖಂಡ್​ನಲ್ಲಿ ಸಿಲುಕಿದ್ದ ಕೆಂಚಪ್ಪನನ್ನು ರಕ್ಷಿಸಿದ ಗದಗ್​ನ ಯೋಧರು

ಉತ್ತರಾಖಂಡ್​ನಲ್ಲಿ ಸಿಲುಕಿದ್ದ ಕೆಂಚಪ್ಪನನ್ನು ರಕ್ಷಿಸಿದ ಗದಗ್​ನ ಯೋಧರು

  • Share this:
ಗದಗ: ದೂರದ ಉತ್ತರಾಖಂಡ್ ರಾಜ್ಯದಲ್ಲಿ ಸಿಲುಕಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದ ಕನ್ನಡಿಗ ಕೆಂಚಪ್ಪ ಮತ್ತೆ ತಾಯಿ ನಾಡಿಗೆ ಮರಳುವ ಕನಸು ಕೂಡಾ ಕಾಣದಂತಹ ಪರಿಸ್ಥಿತಿಯಲ್ಲಿದ್ದರು. ಆದ್ರೆ, ಕನ್ನಡಿಗ ಯೋಧರು ಆತನನ್ನು ಕಾಪಾಡಿ, ಮರಳಿ ತಾಯಿನಾಡಿಗೆ ಕರೆದುಕೊಂಡು ಬಂದಿದ್ದಾರೆ. ಯೋಧರ ಸಮಾಜಮುಖಿ ಕೆಲಸದಿಂದ ಅವರು ತಮ್ಮವರನ್ನು ಸೇರಿಕೊಂಡಿದ್ದಾರೆ. ಕೆಂಚಪ್ಪನಿಗೆ ತಾಯಿನಾಡಿಗೆ ಬಂದ ಸಂತಸವಾದರೆ, ಇನ್ನೊಂದೆಡೆ ವೀರ ಯೋಧರಿಗೆ ಮುಪ್ಪಿನ ವಯಸ್ಸಿನ ಹಿರಿಯ ಜೀವನ್ನು ಸಂಬಂಧಿಕರ ಹತ್ತಿರ ಸೇರಿಸಿರುವ ಸಂತೃಪ್ತಿ ಸಿಕ್ಕಿದೆ.

ಗದಗ ನಗರದ ನಿವಾಸಿಯಾದ ಶರಣಬಸವ ರಾಗಾಪೂರ ಎನ್ನುವವರು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಉತ್ತರಾಖಂಡದಲ್ಲಿ ಸೇವೆ ಸಲ್ಲಿಸುವಾಗ ಚಾಲ್ತಿ ಎನ್ನುವ ಪುಟ್ಟ ಊರಿನ ಹೋಟೆಲ್​ವೊಂದರಲ್ಲಿ ಕನ್ನಡಿಗ ಕೆಂಚಪ್ಪ ವಡ್ಡರ್ ಎನ್ನುವ ಹಿರಿಯ ಜೀವ ಕಣ್ಣಿಗೆ ಬಿಳುತ್ತಾರೆ. ಕೆಂಚಪ್ಪ ಅವರನ್ನು ವಿಚಾರಣೆ ಮಾಡಿದಾಗ, ಅವರು ಕನ್ನಡಿಗರಾಗಿದ್ದು, ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಎಂಬುದು ಗೊತ್ತಾಗುತ್ತದೆ. ಹೊಟೇಲ್ ಮಾಲೀಕರು‌ ಕಿರುಕುಳ ನೀಡುತ್ತಿರುವ ವಿಷಯವೂ ಗೊತ್ತಾಗುತ್ತದೆ. ಅಗ ಊರಿಗೆ ಹೋಗೋಣ ಎಂದು ಆ ವೃದ್ಧನನ್ನು ಕೇಳುತ್ತಾರೆ. ಆದ್ರೆ ಮೊದಲು ಹೋಟೆಲ್ ಮಾಲೀಕರಿಗೆ ಹೆದರಿ ಬರಲು ಕೆಂಚಪ್ಪ ನಿರಾಕರಣೆ ಮಾಡುತ್ತಾರೆ.

ಇದನ್ನೂ ಓದಿ: ಟಿವಿ, ಬೈಕ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಎಂದ ಸಚಿವ ಉಮೇಶ್ ಕತ್ತಿ; ಸಾರ್ವಜನಿಕರ ಆಕ್ರೋಶ

ಬಳಿಕ ಶರಣಬಸವ ಅವರು ತಮ್ಮ ಸಹೋದ್ಯೋಗಿ ರಿಯಾಜ್ ಜೊತೆ ರಜೆಗೆ ಕರ್ನಾಟಕಕ್ಕೆ ಹೊರಡುವ ಮುನ್ನ ಕೆಂಚಪ್ಪರನ್ನ ಹೋಟೆಲ್​ನಲ್ಲಿ ಮತ್ತೆ ಭೇಟಿಯಾಗುತ್ತಾರೆ. ನಾವು ಕರ್ನಾಟಕಕ್ಕೆ ಹೊರಟ್ಟಿದ್ದೇವೆ, ಹೋಗೋಣ ಎಂದು ಹೇಳುತ್ತಾರೆ. ಆದರೆ, ಹೊಟೆಲ್ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಾರೆ. ತಾವು ಯೋಧರೆಂದು ಪರಿಚಯ ತಿಳಿಸಿದ ಇವರು, ಈ ಅಜ್ಜ ತಮ್ಮ ಊರಿನವರಾಗಿದ್ದು, ಅವರನ್ನ ಕರೆದುಕೊಂಡು ಹೋಗುತ್ತೇವೆ ಅಂತಾ ಹೇಳಿ, ಆ ಹಿರಿಜೀವವನ್ನ ಬಂಧನದಿಂದ ಮುಕ್ತಿಗೊಳಿಸುತ್ತಾರೆ. ಮುಂದೆ ಕೆಂಚಪ್ಪನ ಮಾಹಿತಿ ಪಡೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡ್ತಾರೆ.

ಉತ್ತರಾಖಂಡದಿಂದ ಗದಗನ ಬೆಟಗೇರಿಯಲ್ಲಿರುವ ತಮ್ಮ ಮನೆಗೆ ಆ ವೃದ್ಧ ಕೆಂಚಪ್ಪರನ್ನ ಶರಣಬಸವ ರಾಗಾಪೂರ ಕರೆದುಕೊಂಡು ಬರುತ್ತಾರೆ. ಅದೇ ವೇಳೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ನೋಡಿದ ಧಾರವಾಡ ಜಿಲ್ಲೆಯ ಕಲಘಟಗಿಯ ಕೆಂಚಪ್ಪನ ಸಂಬಂಧಿಕರು ಗದಗ ನಗರಕ್ಕೆ ಓಡೋಡಿ ಬರ್ತಾರೆ. ಆಗ ಕೆಂಚಪ್ಪನನ್ನು ನೋಡಿ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇರಲಿಲ್ಲ. ಶರಣಬಸವ ಹಾಗೂ ರಿಯಾಜ್ ಅವರಿಗೆ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸುತ್ತಾರೆ. ಕೆಂಚಪ್ಪನನ್ನು ಅವರ ಸಂಬಂಧಿಕರ ಜೊತೆಗೆ ಯೋಧರು‌ ಕಳಿಸಿಕೊಟ್ಟಿದ್ದಾರೆ. ಮುಪ್ಪಿನ ವಯಸ್ಸಿನಲ್ಲಿ ಅವರ ಸಂಬಂಧಿಕರ ಹತ್ತಿರ ಕಳಿಸಿಕೊಟ್ಟಿರುವುದು ಸಂತಸ ತಂದಿದೆ ಅಂತಾರೆ ಯೋಧ ಶರಣಬಸವ ರಾಗಾಪೂರ.

ಇದನ್ನೂ ಓದಿ: Bangalore Crime | ಆಸ್ತಿಗಾಗಿ ಅಪ್ಪನನ್ನೇ ಕೊಲ್ಲಲು ಸುಪಾರಿ ನೀಡಿದ ಮಗ; ಕೊನೆಗೂ ಸೆರೆ ಸಿಕ್ಕ ಹಂತಕರು

ಆದರೆ, ಕೆಂಚಪ್ಪ ದೂರದ ಉತ್ತರಾಖಂಡ್ ರಾಜ್ಯಕ್ಕೆ ಹೋಗಿ ಸಿಲುಕಿದ್ದು ಹೇಗೆ, ಮರಳಿ ಬಾರಲು ಯಾಕೆ ಸಾಧ್ಯವಾಗಲಿಲ್ಲ ಎಂಬ ವಿಚಾರ ಗೊತ್ತಾಗಬೇಕಿದೆ. ಒಟ್ಟಾರೆಯಾಗಿ ಕಳೆದ 25 ವರ್ಷಗಳಿಂದ ಕಲಘಟಗಿಯಿಂದ ನಾಪತ್ತೆಯಾಗಿದ್ದ ಈ ಹಿರಿಯ ಜೀವ ಮತ್ತೆ ಅವರ ಕುಟುಂಬವನ್ನು ಸೇರಿಕೊಂಡಿದ್ದಾನೆ. ಮುಪ್ಪಿನ ವಯಸ್ಸಿನಲ್ಲಿ ಅನಾಥವಾಗಿದ್ದ ವಯೋವೃದ್ಧರನ್ನ ಕುಟುಂಬಕ್ಕೆ ಸೇರಿಸಿದ ಗದಗ್​ನ ಯೋಧರ ಕಾರ್ಯ ಪ್ರಶಂಸನೀಯ.

ವರದಿ: ಸಂತೋಷ ಕೊಣ್ಣೂರು
Published by:Vijayasarthy SN
First published: