• Home
  • »
  • News
  • »
  • district
  • »
  • ಬೀಗರ ಔತಣಕೂಟದಲ್ಲಿ ಬಾಡೂಟ ಸವಿದ ಜನರು ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲು

ಬೀಗರ ಔತಣಕೂಟದಲ್ಲಿ ಬಾಡೂಟ ಸವಿದ ಜನರು ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲು

ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿರುವ ಜನರು.

ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿರುವ ಜನರು.

ಘಟನೆಗೆ ಕಾರಣ ತಿಳಿಯಲು ಈಗಾಗಲೇ ಅಧಿಕಾರಿಗಳು ನೀರಿನ ಮಾದರಿಯ ಜೊತೆಗೆ ಆಸ್ಪತ್ರೆಗೆ ದಾಖಲಾಗಿರುವ ಕೆಲವರ ರಕ್ತದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿದ್ದಾರೆ. ಏನೇ ಆದರೂ ಮದುವೆ ಮನೆಯಲ್ಲಿ ಸಂತೋಷದ ಬದಲಾಗಿ ಈಗ ಆತಂಕ ಮನೆಮಾಡಿದೆ. ಈ ಘಟನೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ರಾಜು ತಿಳಿಸಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮುಂದೆ ಓದಿ ...
  • Share this:

ರಾಮನಗರ (ಚನ್ನಪಟ್ಟಣ): ಬೀಗರ ಔತಣಕೂಟದಲ್ಲಿ ಮಾಂಸದೂಟ ತಿಂದ ಜನರು ವಾಂತಿ-ಭೇದಿಯಿಂದ ನರಳಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮೋಳೆದೊಡ್ಡಿ ಗ್ರಾಮದಲ್ಲಿ ನಡೆದಿದೆ.


ಕಳೆದ ಭಾನುವಾರ ಮುತ್ತುರಾಜ್-ರೋಹಿಣಿ ಎಂಬುವವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೊತೆಗೆ ಇವರಿಬ್ಬರು ಸಹ ಸಂಬಂಧಿಕರು, ಒಂದೇ ಗ್ರಾಮದವರು. ಊರ ಜನರಿಗೆ ಬಾಡೂಟ ಹಾಕಿಸಲು ಎರಡೂ ಮನೆಯವರು ನಿರ್ಧರಿಸಿ, ನಿನ್ನೆ ಗ್ರಾಮದಲ್ಲಿಯೇ ಜೋರು ಬಾಡೂಟ ಏರ್ಪಡಿಸಿದ್ದರು. ಬೀಗರ ಊಟದಲ್ಲಿ ಸರಿಸುಮಾರು 700ರಿಂದ 800 ಜನರು ಊಟ ಮಾಡಿದ್ದರು. ಆದರೆ ಯಾಕೋ, ಏನೋ ಗೊತ್ತಿಲ್ಲ ಬಾಡೂಟ ಸವಿದ ಬಹುತೇಕ ಜನರಿಗೆ ಮಧ್ಯೆರಾತ್ರಿಯಿಂದಲೇ ವಾಂತಿ-ಭೇದಿ ಪ್ರಾರಂಭವಾಗಿದೆ. ಸುಮಾರು 200-ರಿಂದ 300 ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಕೆಲವರು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದರೆ, ಇನ್ನು ಕೆಲವರು ಖಾಸಗಿ ಆಸ್ಪತ್ರೆಗೂ ದಾಖಲಾಗಿದ್ದಾರೆ.


ಇದನ್ನು ಓದಿ: ಒಂದರ ಹಿಂದೆ ಒಂದೊಂದಾಗಿ ಬರುತ್ತಿರುವ ಸೈಕ್ಲೋನ್; ಮುಸುಕಿನ ಜೋಳ ರೈತರು ಕಂಗಾಲು


ಇನ್ನು ಬೀಗರೂಟದಲ್ಲಿ ಊಟ ಮಾಡಿದ್ದ ಗಂಡು ಮುತ್ತುರಾಜ್‌ಗೆ ಅಷ್ಟೇನೂ ಆರೋಗ್ಯದಲ್ಲಿ ವ್ಯತ್ಯಾಸವಾಗಿಲ್ಲ, ಆದರೆ ಮದುವೆ ಹೆಣ್ಣು ರೋಹಿಣಿಗೆ ಸ್ವಲ್ಪ ಸುಸ್ತು, ವಾಂತಿ ಕಾಣಿಸಿಕೊಂಡಿದ್ದು, ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಇದೇ ಸಮಾರಂಭದಲ್ಲಿ ಊಟ ಮಾಡಿದ್ದ ಗ್ರಾಮದ ಕೆಲವರಿಗೆ ಯಾವುದೇ ತೊಂದರೆಯಾಗಿಲ್ಲ. ನಾವು ಕೂಡ ಇದೇ ಸಮಾರಂಭದಲ್ಲಿ ಊಟ ಮಾಡಿದ್ದೇವೆ. ಆದರೆ ನಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾಗಿಲ್ಲ ಎಂದು ಗ್ರಾಮದ ಬಿಳಿಯಪ್ಪ ಎಂಬುವರು ಅಭಿಪ್ರಾಯಪಟ್ಟಿದ್ದಾರೆ.


ಒಟ್ಟಾರೆ ಮಧ್ಯರಾತ್ರಿಯಿಂದಲೇ ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆ ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಬೆಳ್ಳಂಬೆಳಗ್ಗೆ ವೈದ್ಯರ ತಂಡ ಗ್ರಾಮದ ಜನರಿಗೆ ಚಿಕಿತ್ಸೆ ನೀಡಿದರು. ನಂತರ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆ ಹಾಗೂ ಇತರೆ ಖಾಸಗಿ ಆಸ್ಪತ್ರೆಗಳಿಗೆ ಜನ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಕಾರಣ ತಿಳಿಯಲು ಈಗಾಗಲೇ ಅಧಿಕಾರಿಗಳು ನೀರಿನ ಮಾದರಿಯ ಜೊತೆಗೆ ಆಸ್ಪತ್ರೆಗೆ ದಾಖಲಾಗಿರುವ ಕೆಲವರ ರಕ್ತದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿದ್ದಾರೆ. ಏನೇ ಆದರೂ ಮದುವೆ ಮನೆಯಲ್ಲಿ ಸಂತೋಷದ ಬದಲಾಗಿ ಈಗ ಆತಂಕ ಮನೆಮಾಡಿದೆ. ಈ ಘಟನೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ರಾಜು ತಿಳಿಸಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


ವರದಿ : ಎ.ಟಿ.ವೆಂಕಟೇಶ್

Published by:HR Ramesh
First published: