ವಿಜಯಪುರ(ಡಿ. 12): ಈ ಪರಿಸ್ಥಿತಿ ಯಾರಿಗೂ ಬರಬಾರದು. ಈ ಪರಿಸ್ಥಿತಿಯನ್ನು ನೋಡಿದರೆ ಜನಸಾಮಾನ್ಯರ ಗೋಳು ಅರ್ಥವಾಗುತ್ತದೆ. ಕಂಕುಳಲ್ಲಿ ಮಗುವನ್ನು ಹಿಡಿದು ಅಹೋರಾತ್ರಿ ಜಾಗರಣೆ ಮಾಡಿದ ತಾಯಿ. ಮಕ್ಕಳೊಂದಿಗೆ ನೆಲಕ್ಕೆ ಒರಗಿ ಮಲಗಿರುವ ತಾಯಿ. ಮಲಗದೆ ಕಣ್ಣು ಬಿಟ್ಟು ಕುಳಿತಿರುವ ಹಿರಿಯ ಜೀವಗಳು… ಈ ದೃಶ್ಯಗಳು ಕಂಡು ಬಂದಿದ್ದು, ಬಸವನಾಡು ವಿಜಯಪುರ ಬಸ್ ನಿಲ್ದಾಣದಲ್ಲಿ. ನಿನ್ನೆ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರೂ ವಿಜಯಪುರ ಜಿಲ್ಲೆಯಲ್ಲಿ ಶೇ. 70ರಷ್ಟು ಬಸ್ಸುಗಳು ಓಡಾಟ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿನ್ನೆ ರಾತ್ರಿ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ, ಆಗಿದ್ದೇ ಬೇರೆ. ರಾತ್ರಿಯಿಡೀ ಬೇರೆ ಜಿಲ್ಲೆಗಳಿಂದ ಬಂದ ಮೂರ್ನಾಲ್ಕು ಬಸ್ಸುಗಳನ್ನು ಬಿಟ್ಟರೆ ಇನ್ನಾವ ಬಸ್ಸುಗಳೂ ಇಲ್ಲಿಗೆ ಬಂದಿಲ್ಲ. ವಿಜಯಪುರ ಬಸ್ ನಿಲ್ದಾಣದಿಂದ ಮತ್ತು ವಿಜಯಪುರ ಜಿಲ್ಲೆಯ ಯಾವ ಡಿಪೋ ಗಳಿಂದಲೂ ಬಸ್ಸುಗಳು ಹೊರ ಬಂದಿಲ್ಲ. ಇದರಿಂದಾಗಿ ಪ್ರಯಾಣಿಕರು ಗೋಳು ಕೇಳುವವರಿಲ್ಲದಂತಾಗಿದೆ.
ಕಲಬುರಗಿಯಿಂದ ತಮ್ಮ ಕುಟುಂಬ ಸಮೇತ ಹಸುಗೂಸಿನೊಂದಿಗೆ ಬಂದಿದ್ದ ಮಹಿಳೆ ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗಬೇಕಿತ್ತು. ಆದರೆ, ಬಸ್ಸುಗಳಿಲ್ಲದೆ ರಾತ್ರಿಯಿಡೀ ಬಸ್ ನಿಲ್ದಾಣದಲ್ಲಿಯೇ ಕಳೆದಿದ್ದಾಳೆ. ಈಕೆಯ ಜೊತೆಗಿದ್ದವರು ಮಲಗಿದ್ದರೂ, ಈ ತಾಯಿ ಮಾತ್ರ ತನ್ನ ಹಸುಗೂಸಿಗಾಗಿ ರಾತ್ರಿಯಿಡೀ ಜಾಗರಣೆ ಮಾಡಿದ್ದು ಮಾತ್ರ ಬಸ್ ಬಂದ್ನಿಂದಾಗಿ ಪ್ರಯಾಣಿಕರು ಎದುರಿಸುತ್ತಿರುವ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿತ್ತು.
ಇದೇ ರೀತಿ ಮಹಿಳೆಯರು, ವೃದ್ಧರೂ ಕೂಡ ಬಸ್ಸುಗಳಿಲ್ಲದೆ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿಯೇ ರಾತ್ರಿಯಿಡೀ ಕಳೆದಿದ್ದಾರೆ. ವಿಜಯಪುರ ನಗರದವರಾದರೆ ಮನೆಗೆ ಹೋಗಬಹುದಾಗಿತ್ತು. ಆದರೆ, ತಾವು ಬೇರೆ ಊರಿನಿಂದ ಬಂದಿದ್ದು, ಈಗ ನಡುರಾತ್ರಿಯಲ್ಲಿ ವಿಜಯಪುರದಲ್ಲಿ ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿದ್ದಾಗಿ ಪ್ರಯಾಣಿಕರಾದ ಸುರೇಶ ಮತ್ತು ಆನಂದ ತಮ್ಮ ಗೋಳು ತೋಡಿಕೊಂಡಿದ್ದಾರೆ. ಅತ್ತ ಸ್ವಗ್ರಾಮಕ್ಕೂ ಹೋಗಲು ಸಾಧ್ಯವಿಲ್ಲ. ಇತ್ತ ನಿಗದಿತ ಸ್ಥಳಗಳಿಗೆ ಹೋಗಬೇಕೆಂದರೂ ಬಸ್ಸುಗಳಿಲ್ಲದೇ ಇಲ್ಲಿಯೇ ಕಾಲ ಕಳೆಯುವಂತಾಗಿದೆ. ನಮ್ಮ ಗೋಳು ಕೇಳೋರಾರು? ಬಸ್ ಸೇವೆಯಿದ್ದರೆ ಇಷ್ಟೋತ್ತಿಗೆ ಹುಬ್ಬಳ್ಳಿಗೆ ಹೋಗುತ್ತಿದ್ದೆವು. ಬೆಳಗಾವಿ ತಲುಪುತ್ತಿದ್ದೆವು. ಮಹಾರಾಷ್ಟ್ರದ ಸೋಲಾಪುರ, ಸಾಂಗಲಿ, ಮಿರಜ, ಕೊಲ್ಹಾಪುರಕ್ಕೆ ರೀಚ್ ಆಗುತ್ತಿದ್ದೇವು ಎಂದು ಒಬ್ಬೊಬ್ಬ ಪ್ರಯಾಣಿಕರು ಒಂದೊಂದು ಗೋಳಿನ ಕಥೆ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ಚುನಾವಣೆಗೆ ಪಕ್ಷಾಂತರ ಪರ್ವ; ಭಾರೀ ಸಂಖ್ಯೆಯಲ್ಲಿ ಜೆಡಿಎಸ್, ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ
ನಿನ್ನೆ ದಿನವಿಡೀ ವಿಜಯಪುರ ಈಶಾನ್ಯ ಸಾರಿಗೆ ಸಂಸ್ಥೆ ಬಸ್ಸುಗಳನ್ನು ಓಡಿಸಿತ್ತು. ಆದರೆ, ನಿನ್ನೆ ಮಧ್ಯರಾತ್ರಿಯಿಂದ ಬಸ್ ಸಂಚಾರ ಯಾಕೆ ಸ್ಥಗಿತಗೊಳಿಸಿದೆ ಎಂಬುದರ ಕುರಿತು ಮತ್ತು ಯಾವಾಗ ಬಸ್ ಸೇವೆ ಆರಂಭವಾಗುತ್ತೆ ಎಂಬುದರ ಬಗ್ಗೆಯೂ ಬಸ್ ನಿಲ್ದಾಣದ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇದು ಪ್ರಯಾಣಿಕರ ಗೋಳನ್ನು ಮತ್ತಷ್ಟು ಹೆಚ್ಚಿಸಿದೆ.
ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಬಸ್ ಸೇವೆಗಳ ಬಗ್ಗೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸ್ಪಷ್ಟ ಮಾಹಿತಿ ನೀಡದಿರುವುದು ಪ್ರಯಾಣಿಕರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ವಿಜಯಪುರದಿಂದ ಪ್ರತಿನಿತ್ಯ 621 ಮಾರ್ಗಗಳಲ್ಲಿ ಬಸ್ಸುಗಳು ಸಂಚರಿಸುತ್ತವೆ. 2400 ಜನ ಸಿಬ್ಬಂದಿ ವಿಜಯಪುರ ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ವಿಜಯಪುರ ನಗರದಲ್ಲಿ ಎರಡು ಬಸ್ ನಿಲ್ದಾಣಗಳಿದ್ದು, ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮತ್ತು ಸೆಟಲೈಟ್ ಬಸ್ ನಿಲ್ದಾಣಗಳು ನಿನ್ನೆ ಮಧ್ಯರಾತ್ರಿಯಿಂದಲೇ ಬಸ್ಸುಗಳಿಲ್ಲದೆ ಬಿಕೋ ಎನ್ನುತ್ತಿವೆ.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ