ಯಾದಗಿರಿ: ಹಳ್ಳಿ ಜನರಿಗೆ ಬಣ್ಣ ಬಣ್ಣದ ಮಾತು ಹೇಳಿ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಲಕ್ಷಾಂತರ ರೂ ಪಂಗನಾಮ ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ. ಖದೀಮರ ಗ್ಯಾಂಗ್ ಕಾರು, ಬೈಕ್, ಬಂಗಾರ ಸಿಗುತ್ತದೆ ಎಂದು ಮುಗ್ಧ ಜನರನ್ನು ನಂಬಿಸಿ ವಂಚಿಸಿ ಕಾಲ್ಕಿತ್ತಿದ್ದಾರೆ. ನ್ಯಾಯಕ್ಕಾಗಿ ಮೋಸಹೋದವರು ಈಗ ಅಲೆದಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಸುಮಾರು 1999 ಜನರಿಗೆ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಪಂಗನಾಮ ಹಾಕಿ ಖದೀಮರು ಪರಾರಿಯಾಗಿದ್ದಾರೆ.
ಯಾದಗಿರಿ ನಗರದಲ್ಲಿ ಕಳೆದ ಜನವರಿ ತಿಂಗಳಲ್ಲಿ ಕೆ ಎಸ್ ಎಸ್ ಎಂಟಪ್ರೈಸಸ್ ಹೆಸರಿನಲ್ಲಿ ಕಚೇರಿ ಆರಂಭ ಮಾಡಲಾಗಿದೆ. ಎಂಟಪ್ರೈಸಸ್ ನ ಮ್ಯಾನೇಜರ್ ಮಲ್ಲಿಕಾರ್ಜುನ, ನೌಕರ ಮಲ್ಲಿಕಾರ್ಜುನ ಹಾಗೂ ಇನ್ನಿತರ ಹಲವಾರು ಮಂದಿ ಇರುವ ಈ ತಂಡ ಜನರಿಗೆ ಮೋಸ ಮಾಡುವ ಕೆಲಸ ಮಾಡತೊಡಗಿದೆ. ಬಹುತೇಕವಾಗಿ ನಗರದ ಜನರನ್ನು ಹೊರತು ಪಡಿಸಿ ಮುಗ್ದ ಹಳ್ಳಿ ಜನರೇ ಇವರ ಟಾರ್ಗೆಟ್ ಆಗಿದೆ. ನಿಮಗೆ ಕಾರ್, ಬೈಕ್, ಬಂಗಾರ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳು ಲಕ್ಕಿ ಸ್ಕೀಮ್ ನಲ್ಲಿ ಸಿಗುತ್ತವೆ. ಬಹುಮಾನ ಗೆದ್ದರೆ ಸ್ಕೀಮ್ನ ಕಂತಿನ ಹಣ ಪಾವತಿ ಮಾಡುವುದು ಅವಶ್ಯವಿಲ್ಲ. ನಿಮಗೆ ಕಾರು ಸಿಗುತ್ತದೆ ಎಂದು ಹಳ್ಳಿ ಜನರಿಗೆ ಇವರು ಪುಸಲಾಯಿಸಿದ್ದಾರೆ. ಯಾದಗಿರಿ ಜಿಲ್ಲೆಯ ಬಂದಳ್ಳಿ, ಯರಗೋಳ, ಹತ್ತಿಕುಣಿ, ಓರುಂಚಾ ಹಾಗೂ ಮೊದಲಾದ ಹಳ್ಳಿಗಳಿಗೆ ತೆರಳಿ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಜನರನ್ನು ನಂಬಿಸಿ ಹಣ ಕಟ್ಟಿಕೊಂಡು ಮೋಸ ಮಾಡಿದ್ದಾರೆ.
ಈ ಕುರಿತು ಎಸ್ಪಿ ವೇದಮೂರ್ತಿ ಅವರು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿ, ಕೆ ಎಸ್ ಎಸ್ ಎಂಟಪ್ರೈಸಸ್ ಹೆಸರಿನಲ್ಲಿ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಹಣ ಪಡೆದು ಮೋಸ ಮಾಡಲಾಗಿದೆ ಎಂದು ಮೋಸಹೋದವರು ದೂರು ನೀಡಿದ್ದು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಜನರು ಮೋಸ ಹೋಗದೆ ಎಚ್ಚರದಿಂದ ಇರಬೇಕೆಂದರು.
ಇದನ್ನೂ ಓದಿ: Criminal Reforms - ದೇಶದ ಅಪರಾಧ ಕಾನೂನು ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ: ಅಮಿತ್ ಶಾ
ಲಕ್ಕಿ ಸ್ಕೀಮ್ ನಲ್ಲಿ ಮೊದಲಿಗೆ ಸದಸ್ಯರಾಗಲು 100 ರೂ ಹಾಗೂ 8 ಕಂತುಗಳ ಲಕ್ಕಿ ಸ್ಕೀಮ್ ಆರಂಭ ಮಾಡಲಾಗಿದೆ. ಪ್ರತಿ ಕಂತಿನ ಹಣ 399 ರೂ ಪಾವತಿ ಮಾಡಿಸಿಕೊಳ್ಳಲಾಗಿದೆ. ಸುಮಾರು 1999 ಜನರು ಸದಸ್ಯತ್ವ ಪಡೆದು ಲಕ್ಕಿ ಸ್ಕೀಮ್ ನಲ್ಲಿ ಹಣ ಪಾವತಿ ಮಾಡಿದ್ದಾರೆ. ಸುಮಾರು 6 ರಿಂದ 7 ಕಂತುಗಳ ಹಣವನ್ನ ಜನರು ಪಾವತಿ ಮಾಡಿದ್ದಾರೆ. ಕಂತುಗಳು ಮುಗಿಯುವ ಹಂತ ಬಂದರೂ ಸದಸ್ಯರಿಗೆ ಮಾತ್ರ ಯಾವುದೇ ಲಕ್ ಹತ್ತಿಲ್ಲ. ಯಾರೂ ಬಹುಮಾನ ವಿಜೇತರಾಗಿಲ್ಲ. ಕೇಳಿದರೆ ಕೊನೆಯಲ್ಲಿ ಕಾರು ಬಹುಮಾನ ಗೆಲ್ಲುತ್ತೀರಿ ಎಂದು ಹೇಳಿದ ಆಸಾಮಿಗಳು, ಕೊನೆಯ ಕಂತು ಮುಗಿಯುವ ಹಂತದಲ್ಲಿಯೇ ಎಸ್ಕೇಪ್ ಆಗಿದ್ದಾರೆ.
ನಕಲಿ ಎಂಟಪ್ರೈಸಸ್ ಆರಂಭ ಮಾಡಿ ಜನರಿಗೆ ಸ್ಕೀಮ್ ಹೆಸರಿನಲ್ಲಿ ಪಂಗನಾಮ ಹಾಕಲಾಗಿದೆ. ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಾ ಬಹುಮಾನ ಬರುತ್ತದೆ ಎಂದು ಕನಸು ಹೊತ್ತು ಸ್ಕೀಮ್ ಹಾಕಿದವರು ಈಗ ಕೈಯಲ್ಲಿ ಹಣವಿಲ್ಲದೇ ಕಂಗಲಾಗಿದ್ದಾರೆ. ಸುಮಾರು 50 ಲಕ್ಷಕ್ಕೂ ಹೆಚ್ಚು ಹಣದಷ್ಟು ಮೊತ್ತವನ್ನು ಜನರಿಗೆ ಮೋಸ ಮಾಡಿ ಪರಾರಿಯಾಗಿದ್ದಾರೆ. ನಮಗೆ ನ್ಯಾಯ ಒದಗಿಸಬೇಕು ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು ಎಂದು ವಂಚನೆಗೊಳಗಾದ ಜನರು ಎಸ್ಪಿ ವೇದಮೂರ್ತಿ ಅವರಿಗೆ ಮೊರೆ ಹೋಗಿ ದೂರು ಸಲ್ಲಿಸಿದ್ದಾರೆ. ಆದರೆ, ರಾಜ್ಯದಲ್ಲಿ ಇಂಥ ಅನೇಕ ಹಣಕಾಸು ವಂಚನೆ ಪ್ರಕರಣಗಳು ಬೆಳಕಿಗೆ ಬಂದರೂ ಎಚ್ಚೆತ್ತುಕೊಳ್ಳದ ಜನರು ಇಂತಹ ನಕಲಿ ಸ್ಕೀಮ್ ಬಗ್ಗೆ ಯಾವಾಗಲೂ ಸಂಶಯದ ಕಣ್ಣಿಟ್ಟುಕೊಳ್ಳುವುದು ಒಳ್ಳೆಯದು.
ವರದಿ: ನಾಗಪ್ಪ ಮಾಲಿಪಾಟೀಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ