ಬೆಳಗಾವಿಯ ರಾಯಬಾಗದ ನಿರಾಶ್ರಿತರ ಕಾಲೊನಿಯಲ್ಲಿ ಮೂಲಸೌಕರ್ಯವಿಲ್ಲದೆ ಜನರ ಪರದಾಟ, ಪ್ರತಿಭಟನೆ

2005ರ ಕೃಷ್ಣಾ ಪ್ರವಾಹದ ಸಂತ್ರಸ್ತರಿಗೆ ನಿರ್ಮಿಸಲಾದ ಬಡಾವಣೆಯಲ್ಲಿ 15 ವರ್ಷಗಳಾದರೂ ಮೂಲಸೌಕರ್ಯಗಳನ್ನ ಒದಗಿಸಿಲ್ಲ. ಈ ಹಿನ್ನೆಲೆಯಲ್ಲಿ ಜನರು ರಾಯಭಾಗ ತಾಲೂಕು ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಯಭಾಗದ ತಾಲೂಕಾಡಳಿತ ಕಚೇರಿ ಎದುರು ನಿರಾಶ್ರಿತರ ಪ್ರತಿಭಟನೆ

ರಾಯಭಾಗದ ತಾಲೂಕಾಡಳಿತ ಕಚೇರಿ ಎದುರು ನಿರಾಶ್ರಿತರ ಪ್ರತಿಭಟನೆ

  • Share this:
ಚಿಕ್ಕೋಡಿ(ಆ. 26): ಒಂದೆಡೆ ಕೇಂದ್ರ ಸರ್ಕಾರ ಇಡೀ ದೇಶದ ಪ್ರತಿ ಹಳ್ಳಿಗೂ ಕರೆಂಟ್ ಕೊಡುವುದರ ಮೂಲಕ ಕತ್ತಲೆ ಮುಕ್ತ ದೇಶ ಕಟ್ಟಲು ಮುಂದಾಗಿದೆ. ಆದ್ರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭಿರಡಿ ಗ್ರಾಮದ ಪಕ್ಕದಲ್ಲೇ ಇರುವ ನಿರಾಶ್ರಿತರ ಕಾಲೋನಿ ಮಾತ್ರ ವಿದ್ಯುತ್ ಭಾಗ್ಯದಿಂದ ವಂಚಿತವಾಗಿದೆ.

2005 ರಲ್ಲಿ ಕೃಷ್ಣಾ ನದಿಯಲ್ಲಿ ಬಂದ ಪ್ರವಾಹಕ್ಕೆ ನದಿ ತೀರದ ನೂರಾರು ಮನೆಗಳು ಪ್ರವಾಹಕ್ಕೆ ತುತ್ತಾಗಿದ್ದವು. ಅಂದಿನ ಸರ್ಕಾರ ಪ್ರವಾಹ ಪೀಡಿತರಿಗೆ ಸರ್ಕಾರದಿಂದಲೇ ಮನೆಗಳನ್ನ ನಿರ್ಮಾಣ ಮಾಡಿ ಅಲ್ಲಿ ಇರಲು ವ್ಯವಸ್ಥೆ ಕಲ್ಪಿಸಿದ ಬಳಿಕ ಇತ್ತ ತಿರುಗಿಯೂ ನೋಡಿಲ್ಲ. ಕೆಲ ಕುಟುಂಬಗಳು ಮೂಲಭೂತ ಸೌಕರ್ಯ ಕೊರತೆಯಿಂದ ಮನೆಗಳನ್ನ ಖಾಲಿ ಮಾಡಿ ಗ್ರಾಮದಲ್ಲಿ ಉಳಿದುಕೊಂಡಿದ್ದಾರೆ. ಆದ್ರೆ ಇನ್ನುಳಿದ ಜನ ಮಾತ್ರ ಪರ್ಯಾಯ ವ್ಯವಸ್ಥೆಯಿಲ್ಲದೆ ಕತ್ತಲಲ್ಲೆ ಜೀವನ ನಡೆಸುವುದನ್ನು ಮುಂದುವರಿಸಿದ್ದಾರೆ.

ಇಲ್ಲಿ ವಾಸಿಸುತ್ತಿರುವ ಜನರು ಕರೆಂಟ್ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಆಡಳಿತದಿಂದ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಬೇಸತ್ತ ಸಂತ್ರಸ್ತರು ನಿನ್ನೆ ತಡ ರಾತ್ರಿವರೆಗೂ ರಾಯಬಾಗ ತಹಶಿಲ್ದಾರ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ 2019ರಲ್ಲಿ ಬಂದ ಪ್ರವಾಹದ ಪರಿಹಾರವನ್ನೂ ಸರಿಯಾಗಿ ವಿತರಣೆ ಮಾಡಿಲ್ಲ. 2005 ರಲ್ಲಿ ಬಿದ್ದ ಮನೆಗಳ ಜನರಿಗೆ ವಾಸದ ಹಕ್ಕು ಪತ್ರಗಳನ್ನು ನೀಡಿಲ್ಲಾ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ವರ್ಷ ಕಳೆದರೂ ರೈತರಿಗೆ ಸಿಕ್ಕಿಲ್ಲ ಬೆಳೆ ವಿಮೆ ಪರಿಹಾರ; ಈ ವರ್ಷ ಕಂತು ಕಟ್ಟಲು ಹಿಂದೇಟು

ಚುನಾವಣೆ ಬಂದಾಗ ಮಾತ್ರ ಇಲ್ಲಿನ ಜನಪ್ರತಿನಿಧಿಗಳಿಗೆ ಸಮಸ್ಯೆ ಅರಿವಾಗುತ್ತದೆ. ವೋಟ್ ಕೆಳಲು ಬಂದಾಗ ಮಾತ್ರ ನನಗೆ ಮತ ಹಾಕಿ ನಿಮ್ಮ ಸಮಸ್ಯೆಯನ್ನ ಬಗೆಹರಿಸುತ್ತೇವೆಂದು ಹೇಳಿ ಬಳಿಕ ಇತ್ತ ಸುಳಿಯೋದೂ ಇಲ್ಲ. ಇನ್ನು ಈ ಕಾಲೋನಿಯಲ್ಲಿ ನೂರಾರು ವಿಧ್ಯಾರ್ಥಿಗಳು ಸಹ ಇದ್ದು ಅವರ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ. ಬ್ಯಾಟರಿ ಟಾರ್ಚ್ ಅಥವಾ ದೀಪದಲ್ಲೇ ವಿದ್ಯಾಭ್ಯಾಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಇಲ್ಲಿನ ರಸ್ತೆಗಳನ್ನ ನೋಡಿದರೆ, ಇದು ರಸ್ತೆಯಾ ಇಲ್ಲಾ ಗದ್ದೆಯಾ ಎಂದು ಅನುಮಾನ ಪಡುವಂತಿದೆ. ಮಳೆ ಬಂದರೆ ಇಡೀ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಾಡುತ್ತವೆ.ಒಟ್ಟಿನಲ್ಲಿ, ದಶಕಗಳೇ ಕಳೆದರೂ ಇಲ್ಲಿನ ಜನ ಮಾತ್ರ ಮೂಲಭೂತ ಸೌಕರ್ಯಕ್ಕೂ ಪರದಾಡುವಂತಾಗಿರುವುದು ದುರ್ದೈವ. ಇನ್ನೋಂದೆಡೆ ಸರ್ಕಾರವೇ ನಿರಾಶ್ರಿತರ ಕಾಲೋನಿ ಮಾಡಿ ಸರ್ಕಾರಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಫಲವಾಗಿದೆ. ಇನ್ನಾದರು ತಾಲೂಕಾಡಳಿತ ಎಚ್ಚೆತ್ತುಕೊಂಡು ಇಲ್ಲಿನ ಜನರಿಗೆ ನ್ಯಾಯ ಕೊಡಿಸಬೇಕಾಗಿದೆ.

ವರದಿ: ಲೋಹಿತ್ ಶಿರೋಳ
Published by:Vijayasarthy SN
First published: