ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ರೈತರು ಹೆಚ್ಚಾಗಿ ಮಳೆ ಆಶ್ರಯವನ್ನೇ ಅವಲಂಬಿಸಿದ್ದಾರೆ. ಶಿಕಾರಿಪುರ ರೈತರು ತಾಲೂಕಿನಲ್ಲಿ ಸೂಕ್ತ ಮಳೆಯಾಗದೇ ಹಲವು ಬಾರಿ ಬೆಳೆ ಕಳೆದುಕೊಂಡ ಉದಾಹರಣೆಗಳು ಹೆಚ್ಚಿವೆ. ಹೀಗಾಗಿ ಶಿಕಾರಿಪುರ ತಾಲೂಕಿಗೆ ನೀರಾವರಿ ಯೋಜನೆ ಕಲ್ಪಿಸಬೇಕು ಎಂಬುದು ರೈತರ ಒತ್ತಾಯವಾಗಿದೆ. ತಾಲೂಕಿನ ರೈತರ ಕಷ್ಟ ಮನಗಂಡಿದ್ದ ಯಡಿಯೂರಪ್ಪ ರೈತರ ಜಮೀನುಗಳಿಗೆ ನೀರೋದಗಿಸಲು, ಏತ ನೀರಾವರಿ ಯೋಜನೆಯನ್ನು ಮಂಜೂರು ಮಾಡಿದ್ದರು. ಉಡುಗಣಿ, ತಾಳಗುಂದ, ಹೊಸೂರು ಏತ ನೀರಾವರಿ ಯೋಜನೆ ಕಾಮಗಾರಿ ಈಗ ನಡೆಯುತ್ತಿದೆ. ಬೇಗ ಕಾಮಗಾರಿ ಮುಗಿಸಿ ಹೊಲ ಗದ್ದೆಗಳಿಗೆ ನೀರು ಹರಿಸಲಿ ಎಂಬುದು ರೈತರ ಒತ್ತಾಯ ಮತ್ತು ನಿರೀಕ್ಷೆಯಾಗಿದೆ.
ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ತಾಲೂಕು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ. ಅದರೂ ಹಲವು ವಿಚಾರದಲ್ಲಿ ಇಂದಿಗೂ ಶಿಕಾರಿಪುರ ತಾಲೂಕು ಹಿಂದೆ ಉಳಿದಿದೆ. ನೀರಾವರಿ ಯೋಜನೆಗಳು ಇಲ್ಲದೇ ಇಲ್ಲಿನ ರೈತರು ಸಂಕಷ್ಟಗಳನ್ನು ಅನುಭವಿಸುತ್ತಲೇ ಇದ್ದಾರೆ. ಶಿಕಾರಿಪುರ ತಾಲೂಕಿಗೆ ಹಲವು ಏತ ನೀರಾವರಿ ಯೋಜನೆಗಳನ್ನ ಜಾರಿಗೆ ತರಬೇಕು ಎಂಬುದು ರೈತರ ನಿರೀಕ್ಷೆಯಾಗಿದೆ. ರೈತರ ನಿರೀಕ್ಷೆ ನನಸು ಮಾಡಲು ಯಡಿಯೂರಪ್ಪ ಈಗ ಏತ ನೀರಾವರಿ ಯೋಜನೆಗಳಿಗೆ ಹಣ ನೀಡಿದ್ದಾರೆ. ಕಾಮಗಾರಿಗಳಿಗೆ ಚಾಲನೆ ಸಹ ಸಿಕ್ಕಿದೆ. ಅದೆಷ್ಟೋ ವರ್ಷಗಳ ಕ್ಷೇತ್ರದ ಜನರ ಕನಸು ಇದೀಗ ನನಸಿನತ್ತ ಸಾಗಿದೆ. ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹಾಗೂ ತೊಗರ್ಸಿ, ಈ ಭಾಗಗಳ ಅನೇಕ ಗ್ರಾಮಗಳು ಬರಪೀಡಿತ ಪ್ರದೇಶಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡಿವೆ. ಈ ಭಾಗದ ರೈತರ ಜಮೀನುಗಳಿಗೆ, ನೀರೊದಗಿಸಲು, ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಟ್ನಹಳ್ಳಿ ಬಳಿ ಜಾಕ್ ವೆಲ್ ನಿರ್ಮಿಸಿ, ಅಲ್ಲಿಂದ ನೀರನ್ನು ಪಂಪ್ ಮಾಡಿ ಶಿಕಾರಿಪುರ ತಾಲೂಕಿನ 186 ಕೆರೆಗಳಿಗೆ ಒಟ್ಟಾರೆ 1.5 ಟಿಎಂಸಿ ನೀರನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ. ಈ ಕೆರೆಗಳನ್ನು ತುಂಬಿಸಿ ಶಿಕಾರಿಪುರ ತಾಲೂಕಿನ 17 ಸಾವಿರ ಎಕರೆ ಜಮೀನಿಗೆ ನೀರು ಒದಗಿಸಲಾಗುತ್ತದೆ. ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು, ಇನ್ನು ಒಂದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ.
ಇದನ್ನೂ ಓದಿ: ಕಲಬುರ್ಗಿ ಕೋವಿಡ್ 19 ಆಸ್ಪತ್ರೆಯಲ್ಲಿ ಹಂದಿಗಳ ಬಿಂದಾಸ್ ಅಡ್ಡಾಟ ; ಜಿಲ್ಲಾಧಿಕಾರಿ ಶರತ್ ದಿಢೀರ್ ಭೇಟಿ
ಶಿಕಾರಿಪುರ ತಾಲೂಕಿನಲ್ಲಿ ಹೆಚ್ಚಾಗಿ ರೈತರು ಮಳೆ ಅಶ್ರಿತ ಕೃಷಿ ಮಾಡುತ್ತಿದ್ದಾರೆ. ಇಲ್ಲವೇ, ಹೊಲ ಗದ್ದೆಗಳಲ್ಲಿ ಬೋರ್ವೆಲ್ ಕೊರೆಯಿಸಿ ಕೃಷಿ ಮಾಡುತ್ತಾರೆ. ಅಂತರ್ಜಲ ಮಟ್ಟ ದಿನೇ ದಿನೇ ತಗ್ಗುತ್ತಿದ್ದು, ಬೋರ್ವೆಲ್ನಲ್ಲಿಯೂ ಪರಿಪೂರ್ಣವಾಗಿ ನೀರು ಸಿಗುತ್ತಿಲ್ಲ. ಇದರಿಂದಾಗಿ, ಪ್ರತಿ ವರ್ಷ ರೈತರು ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ. ಈ ಯೋಜನೆಯ ಮೂಲಕ ಕೆರೆಗಳಿಗೆ ನೀರು ತುಂಬಿಸಿದಲ್ಲಿ ಬೆಳೆಗಳಿಗೆ ಸಮರ್ಪಕವಾಗಿ ನೀರು ಸಿಗುವುದು ಮಾತ್ರವಲ್ಲದೆ ಅಂತರ್ಜಲದ ಪ್ರಮಾಣವೂ ಹೆಚ್ಚಾಗಲಿದೆ. ಯೋಜನೆ ಕಾಮಗಾರಿ ಆರಂಭವಾಗಿದೆ ಎಂಬುದು ತಿಳಿದ ರೈತರು ಯೋಜನೆ ಕಾಮಗಾರಿ ನೋಡಲು ತಂಡೋಪತಂಡವಾಗಿ ಕಾಮಗಾರಿ ಸ್ಥಳಕ್ಕೆ ಹೋಗುತ್ತಿದ್ದಾರೆ. ಶಿಕಾರಿಪುರ ತಾಲೂಕಿನ ರೈತರ ಅದೆಷ್ಟೋ ವರ್ಷಗಳ ಕನಸು ಈಗ ಈಡೇರುತ್ತಿದೆ ಎಂಬ ಭಾವನೆ ಅವರಲ್ಲಿದೆ. ಸರ್ಕಾರಿ ಕಾಮಗಾರಿಗಳು ಎಂದರೆ ಸ್ವಲ್ಪ ತಡವೇ. ಹೀಗಾಗಿ ರೈತರು ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಕಾಮಗಾರಿ ಆಗಬೇಕು ಎನ್ನುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ಕಾಮಗಾರಿ ಮುಗಿದು, ಮುಂದಿನ ಮಳೆಯಾಗದಲ್ಲಿ ನಮ್ಮ ಜಮೀನುಗಳಿಗೆ ತುಂಗಾಭದ್ರೆಯ ನೀರು ಹರಿಯಬೇಕು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.
ಉಡುಗಣಿ, ತಾಳಗುಂದ ಹಾಗೂ ಹೊಸೂರು ಏತ ನೀರಾವರಿ ಯೋಜನೆ ಶೀಘ್ರವೇ ಪೂರ್ಣಗೊಂಡರೆ, ಇಷ್ಟು ದಿನ ಸಂಕಷ್ಟದಲ್ಲೇ ಜೀವನ ದೂಡುತ್ತಿದ್ದ ಶಿಕಾರಿಪುರದ ರೈತರ ಮೊಗದಲ್ಲಿ ನಗು ಮೂಡುವ ದಿನಗಳು ಅದಷ್ಟು ಬೇಗ ಬರುವುದರಲ್ಲಿ ಅನುಮಾನವೇ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ