ಚನ್ನಪಟ್ಟಣ (ಏಪ್ರಿಲ್ 05): ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಹಿನ್ನೆಲೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಹನುಮಪುರದೊಡ್ಡಿ ಗ್ರಾಮಸ್ಥರು ಇಂದು ರಾಜ್ಯ ಹೆದ್ದಾರಿಯಲ್ಲಿ ಶವವಿಟ್ಟು ಆಕ್ರೋಶವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಸ್ಮಶಾನಕ್ಕಾಗಿ 1.20 ಎಕರೆ ಭೂಮಿಯನ್ನ ಮೀಸಲಿಡಲಾಗಿತ್ತು. ಆದರೆ ಈಗ ಆ ಜಾಗವನ್ನ ಗ್ರಾಮದ ಗೋಪಾಲ್ ಎಂಬುವರಿಗೆ ರಿಜಿಸ್ಟರ್ ಮಾಡಿದ್ದಾರೆ. ಈಗ ಅವರು ನಮ್ಮ ಭೂಮಿಯಲ್ಲಿ ಶವಸಂಸ್ಕಾರ ಮಾಡಬೇಡಿ ಎನ್ನುತ್ತಿದ್ದಾರೆ. ಇದೇ ವಿಚಾರವಾಗಿ ಕಳೆದ ದಿನ ಹನುಮಪುರದೊಡ್ಡಿ ಗ್ರಾಮದಲ್ಲಿ ಓರ್ವರೂ ಸಾವನ್ನಪ್ಪಿದರು. ಅವರನ್ನ ಶವಸಂಸ್ಕಾರ ಮಾಡಲು ಬಿಡದ ಕಾರಣ ಗ್ರಾಮಸ್ಥರೆಲ್ಲ ಸೇರಿ ಚನ್ನಪಟ್ಟಣ ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಪೊಲೀಸರು ಚನ್ನಪಟ್ಟಣದ ಮಾರ್ಗಮಧ್ಯೆ ತಿಟ್ಟಮಾರನಹಳ್ಳಿ ಗ್ರಾಮದ ಬಳಿಯೇ ಗ್ರಾಮಸ್ಥರನ್ನ ತಡೆದು ನಿಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ತಹಶೀಲ್ದಾರ್ ಸ್ಥಳಕ್ಕೆ ಬಂದರೂ ಸಹ ಅವರ ಮೇಲೂ ಗ್ರಾಮದ ಜನರು ಮುಗಿಬಿದ್ದರು. ನಂತರ ಪೊಲೀಸರು, ತಹಶೀಲ್ದಾರ್ ಮನವೊಲಿಸಿ ಅಂತ್ಯಸಂಸ್ಕಾರ ಮಾಡಲು ಸೂಚನೆ ನೀಡುದರು. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆಂದು ಭರವಸೆ ನೀಡಿದ ಗ್ರಾಮದ ಜನರು ಹೋರಾಟ ಕೈಬಿಟ್ಟರು. ಆದರೆ ಈ ಬಗ್ಗೆ ತಹಶೀಲ್ದಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ತಹಶೀಲ್ದಾರ್ ವಿರುದ್ಧ ಗ್ರಾಮದ ಜನರು ಆಕ್ರೋಶ;
ಹನುಮಪುರದೊಡ್ಡಿ ಗ್ರಾಮದ ಜನರು ಸ್ಮಶಾನಕ್ಕಾಗಿ ಹೋರಾಟ ಮಾಡಿದ್ದು, ಇದಕ್ಕೆ ನೇರ ಕಾರಣ ಇಲ್ಲಿ ಕಾರ್ಯನಿರ್ವಹಿಸಿರುವ ತಹಶೀಲ್ದಾರ್ಗಳೇ ಎಂದು ಜನರು ಗಂಭೀರವಾಗಿ ಆರೋಪಿಸಿದ್ದಾರೆ. ಈಗಾಗಲೇ ಚನ್ನಪಟ್ಟಣದ ಹತ್ತಾರೂ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗವಿಲ್ಲದೇ ಜನರು ಕಂಗಾಲಾಗಿದ್ದಾರೆ. ಯಾರಾದರೂ ಸಾವನ್ನಪ್ಪಿದ ಸಂದರ್ಭದಲ್ಲಿ ಇಂತಹ ಹೋರಾಟಗಳು ನಡೆಯುತ್ತವೆ. ನಂತರ ದಿನಗಳಲ್ಲಿ ಈ ವಿಚಾರವಾಗಿ ಯಾರು ಸಹ ಧ್ವನಿ ಎತ್ತುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಇನ್ನು ಚನ್ನಪಟ್ಟಣದ ಹತ್ತಾರೂ ಗ್ರಾಮದಲ್ಲಿ ಈಗಲೂ ಸಹ ಸ್ಮಶಾನಗಳು ಇಲ್ಲದೇ ತಮ್ಮ ತಮ್ಮ ಜಮೀನುಗಳಲ್ಲಿ ಶವಸಂಸ್ಕಾರ ಮಾಡಿಕೊಳ್ಳುತ್ತಾರೆ. ಜಮೀನು ಇಲ್ಲದವರು ಹಳ್ಳ, ಹಾಗೂ ಯಾರದ್ದೋ ಜಾಗದಲ್ಲಿ ಸಂಸ್ಕಾರ ಮಾಡ್ತಾರೆ. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮವಹಿಸಬೇಕು, ಆದಷ್ಟು ಬೇಗ ಸ್ಮಶಾನಕ್ಕೆ ಜಾಗ ಗುರುತಿಸಬೇಕೆಂಬ ಕೂಗು ಕೇಳಿಬಂದಿದೆ. ಇನ್ನು ಕೆಲ ವರ್ಷಗಳ ಹಿಂದೆ ರಾಮನಗರ ವಿಧಾನಸಭಾ ಕ್ಷೇತ್ರದ ಪಾದರಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿರಲಿಲ್ಲ.
(ವರದಿ : ಎ.ಟಿ.ವೆಂಕಟೇಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ