ಚಾಮರಾಜನಗರ(ಜುಲೈ.09): ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ದೇವಾಲಯಗಳನ್ನು ಮತ್ತೆ ಬಂದ್ ಮಾಡಬೇಕೆಂಬ ಕೂಗು ಕೇಳಿ ಬರತೊಡಗಿದೆ. ಇತಿಹಾಸ ಪ್ರಸಿದ್ದ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ದೇಗುಲವನ್ನು ಬಂದ್ ಮಾಡುವಂತೆ ಮಹದೇಶ್ವರಬೆಟ್ಟ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ನಿತ್ಯ ಸಾವಿರಾರು ಮಂದಿ ಭಕ್ತರು ಬರುತ್ತಿದ್ದಾರೆ ಇದರಿಂದ ಕೊರೋನಾ ಹರಡುವ ಭೀತಿ ಎದುರಾಗಿದೆ ಹಾಗಾಗಿ ಕೊರೋನಾ ಕಡಿಮೆ ಆಗುವವರೆಗೂ ಮಹದೇಶ್ವರ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಸಂಪೂರ್ಣ ಬಂದ್ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಇಲ್ಲಿನ ಸಾಲೂರು ಮಠದ ರಸ್ತೆಯಿಂದ ಹೊರಟ ಹೊರಟ ನೂರಾರು ಮಂದಿ, ಮಾಸ್ಕ್ ಧರಿಸಿ ಸಾಮಾಜಿಕ ಅಂತರದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೊಳ್ಳೇಗಾಲ ಗೇಟ್ ಮುಂದೆ ಧರಣಿ ನಡೆಸಿದರು. ಬೆಟ್ಟಕ್ಕೆ ಬರುವ ಭಕ್ತರು ಅಂಗಡಿ ಮುಂಗಟ್ಟುಗಳು, ಹೊಟೇಲ್ ಗಳಿಗೆ ಸುತ್ತಾಡುತ್ತಾರೆ ಇದರಿಂದ ಸ್ಥಳೀಯವಾಗಿ ಕೊರೊನಾ ಹರಡುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಕೋವಿಡ್-19 ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆ ಆದಾಗ ಮಾರ್ಚ್ 20 ರಿಂದ ಮಹದೇಶ್ವರ ದೇಗುಲವನ್ನು ಬಂದ್ ಮಾಡಲಾಗಿತ್ತು. ನಂತರ ಲಾಕ್ ಡೌನ್ ಸಡಿಲಿಕೆ ಆದ ನಂತರ ಜೂನ್ 8 ರಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ದೇಗುಲವನ್ನು ತೆರೆಯಲಾಗಿತ್ತು. ದೇವಸ್ಥಾನ ಪುನ: ಆರಂಭವಾದ ನಂತರ ರಾಜ್ಯದ ಬೇರೆ ಪ್ರತಿ ದಿನ ಮೂರು ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಬರತೊಡಗಿದ್ದಾರೆ. ಇದರಿಂದ ಕೊರೋನಾ ಸೋಂಕು ತಗುಲುವ ಸಾಧ್ಯತೆಗಳಿರುವುದರಿಂದ ಸಧ್ಯಕ್ಕೆ ಭಕ್ತರ ಪ್ರವೇಶ ನಿಷೇಧಿಸಿ ದೇಗುಲವನ್ನು ಬಂದ್ ಮಾಡಬೇಕೆಂದು ಆಗ್ರಹಿಸಿದರು. ಬೆಟ್ಟಕ್ಕೆ ಬರುವ ಭಕ್ತರನ್ನು ತಾಳಬೆಟ್ಟದಲ್ಲೇ ತಡೆದು ವಾಪಸ್ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ : ಮೈಸೂರಿನಲ್ಲಿ ಪೋಷಕರು ಪ್ರೀತಿ ಒಪ್ಪದಿದ್ದಕ್ಕೆ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಲೆಮಹದೇಶ್ವರಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಗ್ರಾಮಸ್ಥರ ಬೇಡಿಕೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು, ಜಿಲ್ಲಾಧಿಕಾರಿಗಳು ಕೈಗೊಳ್ಳುವ ನಿರ್ಣಯ ಪಾಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ