16 ಕೋಟಿಯ ಔಷಧಕ್ಕೆ ಹಣ ಸಿಗದೇ ಮಗು ಸಾವು, ಅದಕ್ಕಾಗಿ ಕೂಡಿಸಿಟ್ಟ ಹಣವನ್ನೆಲ್ಲಾ ರೋಗಿಗಳಿಗೆ ಹಂಚುತ್ತಿರುವ ಪೋಷಕರು

ತಮ್ಮ ಮಗುವಿನ ಚಿಕಿತ್ಸೆಗೆ ಇವರಿಗೆ 16 ಕೋಟಿ ರೂಪಾಯಿ ಬೇಕಿತ್ತು. ಅಷ್ಟು ಹಣ ಹೊಂದಿಸುವುದರೊಳಗೆ ಕಂದ ಜೀವಚೆಲ್ಲಿತ್ತು. ಅದುವರಗೆ ಜೋಡಿಸಿಟ್ಟ 38 ಲಕ್ಷ ರೂಪಾಯಿಗಳನ್ನು ಮಗುವಿನ ತಂದೆ ತಾಯಿ ಬೇರೆ ರೋಗಿಗಳ ಚಿಕಿತ್ಸೆಗೆ ನೀಡುತ್ತಿದ್ದಾರೆ, ಆ ಮೂಲಕ ತಮ್ಮ ಮಗುವನ್ನು ನೆನೆಯುತ್ತಿದ್ದಾರೆ.

ಎಸ್​ಎಂಎ ಇಂದ ಬಳಲುತ್ತಿದ್ದ ಮಗು

ಎಸ್​ಎಂಎ ಇಂದ ಬಳಲುತ್ತಿದ್ದ ಮಗು

  • Share this:
ಉಡುಪಿ: ಎಲ್ಲರಂತೆ ಆಡಿ ಬೆಳೆಯಬೇಕಾದ ಹಸುಗೂಸೊಂದು Spinal Muscular Dystropy (SMA) ಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿದೆ. ಮಗುವನ್ನ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಪೋಷಕರು ಸಾರ್ವಜನಿಕರಿಂದ ಸಂಗ್ರಹವಾದ ಹಣವನ್ನ ಮಗುವಿನ ಹೆಸರಲ್ಲಿ ಜನೋಪಕಾರ್ಯಕ್ಕೆ ವಿನಿಯೋಗ ಮಾಡುವ ಮೂಲಕ  ಕಂದಮ್ಮನ ಹೆಸರು ಅಜರಾಮರಗೊಳಿಸಿದ್ದಾರೆ.‌ ಈ ಬಗ್ಗೆ ಮನಮಿಡಿಯುವ ವರದಿ‌ ಇಲ್ಲಿದೆ.ಉಸಿರು ನಿಂತ ಬಳಿಕವೂ ಹೆಸರು ಉಳೀಬೇಕು ಅಂದರೆ ಒಳ್ಳೆಯ ಕೆಲಸ ಮಾಡಿರಬೇಕು. ಇಲ್ಲಿ ಐದು ತಿಂಗಳ ಕಂದಮ್ಮನ ಉಸಿರು ಶಾಶ್ವತವಾಗಿ ನಿಂತಿದ್ದರೂ ಹೆತ್ತವರ ಔದಾರ್ಯ ಮಗುವಿನ ಹೆಸರನ್ನು ಶಾಶ್ವತವಾಗಿಸಿದೆ. ತನ್ನ ಕಂದನನ್ನು ಉಳಿಸುವ ಹೋರಾಟದಲ್ಲಿ ಒಟ್ಟಾದ ಹಣವನ್ನು ಸ್ವಲ್ಪವೂ ಇಟ್ಟುಕೊಳ್ಳದೇ, ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸಿದ ಈ ಹೆತ್ತವರ ಸಾಮಾಜಿಕ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

ಹೌದು,  ಒಂದು ತಿಂಗಳ ಹಿಂದೆ ಉಡುಪಿ ಜಿಲ್ಲೆಯ ಪುಟ್ಟ ಮಗುವೊಂದಕ್ಕೆ ಜಗತ್ತಿನ ಅಪರೂಪದ ಕಾಯಿಲೆ ಸ್ಪೈನಲ್ ಮಸ್ಕುಲರ್ ಆಟ್ರೋಫಿ (ಎಸ್ಎಂಎ) ಅಂದರೆ, ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆ ವಕ್ಕರಿಸಿತ್ತು.‌ ಈ ಕಾಯಿಲೆ ಗುಣಮುಖವಾಗಿ ಮಗು ಬದುಕಬೇಕಂದ್ರೆ ಇಂಜೆಕ್ಷನ್‌ಗೆ 16 ಕೋಟಿ ಹಣದ ಅವಶ್ಯಕತೆ ಇತ್ತು. ಹೀಗಾಗಿ ತಮ್ಮ ಮಗುವನ್ನ ಉಳಿಸಲು ಸಹಾಯ ಹಸ್ತ ಚಾಚಿದ್ರು ಪೋಷಕರು.‌ ಮಗುವಿನ ಪೋಷಕರ ನೋವನ್ನ ಅರಿತ ಸಮಾಜ ಸೇವಕರು, ಸಾಮಾಜಿಕ ಸಂಸ್ಥೆಗಳು ಸಾಮಾಜಿಕ ಜಾಲತಾಣ ಮೂಲಕ ಮಗು ಉಳಿಸಿ ಅಭಿಯಾನ ಮಾಡಿದ್ರು. ಪ್ರತಿಫಲವಾಗಿ ದಾನಿಗಳಿಂದ ಹಣವೂ ಹರಿದುಬಂತು. ಫೋಷಕರು ಕೂಡ ಇನ್ನಷ್ಟು ಸಹಾಯ ಸಾರ್ವಜನಿಕರಿಂದ ಸಿಗಬಹುದು, ನಮ್ಮ ಮಗುವಿಗೆ ಪುನರ್ಜನ್ಮ ಸಿಗುತ್ತೆ ಅಂತ ನಿರೀಕ್ಷೆ ಕೂಡ ಹುಟ್ಟಿಕೊಂಡಿತು.

ಹೀಗೆ ದಿನಕಳೆದಂತೆ ಉಸಿರಾಡಬೇಕಾಗಿದ್ದ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಿ ಅದೊಂದು ದಿನ ಹೆತ್ತವರ ಕೈಯಲ್ಲೇ ಕೊನೆಯುಸಿರೆಳೆದಿದೆ. ಮಗುವಿನ ನಗುವಿನ ನಿರೀಕ್ಷೆಯಲ್ಲಿದ್ದ ಪೋಷಕರ ಮನಸ್ಸೇ ಒಡೆದುಹೋಯಿತು. ಮಗುವನ್ನ ಉಳಿಸಲು ಆಸ್ಪತ್ರೆಗೆ ‌ಓಡಿದ್ರು ಪ್ರಯೋಜನವಾಗಿಲ್ಲ, ಲಕ್ಷಾಂತರ ಹೃದಯವಂತರ ಆಶೀರ್ವಾದ ಫಲಿಸಲಿಲ್ಲ ಮಗು ಮಿತಾನ್ಶ್ ಇಹಲೋಕ ತ್ಯಜಿಸಿತು.ಹೌದು, ಎಳೆಯ ಕಂದನ ಜೀವ ಉಳಿಸಲು ಹಲವು ಹೃದಯವಂತರು ಕೂಡ ಸಹಾಯ ಕೂಡ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಮಗುವಿಗೆ ಲಕ್ಷಾಂತರ ಜನರ ಪ್ರಾರ್ಥನೆ ಸಾಕಾರಗೊಳ್ಳದೆ ಕೊನೆಯುಸಿರೆಳೆದಿದೆ. ಆದರೆ ಮಗುವಿಗಾಗಿ ದಾನಿಗಳು ಲಕ್ಷಾಂತರ ರೂ ಹಣ ದೇಣಿಗೆ ನೀಡಿದ್ದರು. ಮಗುವಿನ ಮರಣದ ನಂತರ ಈ ಹಣ ಎಲ್ಲಿಗೆ ಹೋಯ್ತು, ಏನು ಮಾಡಿದ್ರು ಎಂದು ಜನ ಕೇಳೋದು ಸಹಜ.

ಇದನ್ನೂ ಓದಿ: Varamahalakshmi 2021: ಇಂದು ವರಮಹಾಲಕ್ಷ್ಮಿ ಹಬ್ಬ, ಪೂಜಾ ವಿಧಾನಗಳೇನು? ವ್ರತ ಆಚರಿಸುವ ಬಗೆ ಹೇಗೆ?

ಒಂದಷ್ಟು ಅಪಪ್ರಚಾರ ಕೂಡ ಆಯ್ತು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಐದು ತಿಂಗಳ ಮಗು ಮಿಥಾನ್ಶ್ ತಂದೆ ಸಂದೀಪ್ ದೇವಾಡಿಗ ತನ್ನ ಬಳಿ ಸ್ವಲ್ಪವೂ ಉಳಿಸಿಕೊಳ್ಳದೇ ಎಲ್ಲವನ್ನೂ ತನಗೆ ಸಮಾಜ ಏನು ಹಣ ನೀಡಿತ್ತೋ ಅದೇ ಸಮಾಜದ ಒಳಿತಿಗಾಗಿ ಹಣವನ್ನು ವಿನಿಯೋಗಿಸಿದ್ದಾರೆ. ಒಟ್ಟಾದ 38 ಲಕ್ಷ ಹಣದಲ್ಲಿ ಮಲ್ಪೆಯಲ್ಲಿ ಜೀವರಕ್ಷಕರೊಬ್ಬರಿಗೆ ಅಗತ್ಯವಿದ್ದ ಆಂಬ್ಯುಲೆನ್ಸ್ ನೀಡಲಾಯಿತು. ಇನ್ನು 18 ಜನ ಅನಾರೋಗ್ಯ ಪೀಡಿತ ಬಡವರ ಚಿಕಿತ್ಸೆಯ ವೆಚ್ಚಕ್ಕೆ ಅಂತ ದೇಣಿಗೆಯ ಹಣವನ್ನು ವಿನಿಯೋಗಿಸಲಾಯಿತು.

ಸತ್ಯದ ತುಳುವೆರ್ ಸಂಘಟನೆ ಮೂಲಕ ಒಟ್ಟಾದ ಹಣವನ್ನು ಈ ರೀತಿಯಲ್ಲಿ ಉತ್ತಮ ಕಾರ್ಯಕ್ಕೆ ಸದುಪಯೋಗ ಮಾಡಿದ ಸಂದೀಪ್ ದೇವಾಡಿಗ ಅವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.ಮಲ್ಪೆಯಲ್ಲಿ ಇದರ ಹಸ್ತಾಂತರ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.ತನ್ನ ಕರುಳ ಬಳ್ಳಿಯನ್ನು ಉಳಿಸಿಕೊಳ್ಳಲಾಗದಿದ್ದರೂ ಕಂದಮ್ಮನ ಜೀವ ರಕ್ಷಿಸುವ ಹೋರಾಟದಲ್ಲಿ ಜೊತೆಗಿದ್ದ ಸಮಾಜವನ್ನು ಮರೆಯದೇ, ಒಟ್ಟುಗೂಡಿದ ಹಣವನ್ನು ಈ ರೀತಿಯಲ್ಲಿ ವಿನಿಯೋಗ ಮಾಡಿದ್ದು ಮಾದರಿ ಕೆಲಸವೇ ಸರಿ.
Published by:Soumya KN
First published: