ರಾಯಚೂರು : ಸಾಮಾನ್ಯವಾಗಿ ತಂದೆ, ತಾಯಿ, ಪೂಜ್ಯರು ಹಾಗೂ ಹಿರಿಯರ, ಪತ್ನಿ, ಪತಿಯ ಮೂರ್ತಿ ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ರಾಯಚೂರು ಜಿಲ್ಲೆಯ ದೇವಸಗೂರಿನಲ್ಲಿ ತಂದೆ - ತಾಯಿ ತಮ್ಮ ಮಗನ ಮೂರ್ತಿ ತಯಾರಿಸಿ ಈ ಮೂರ್ತಿಗೆ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣವೇ ಸರಿ..! ದೇವಸಗೂರಿನಲ್ಲಿ ಮೂರ್ತಿ ಕೆತ್ತನೆ ಮಾಡುವ ವೀರಣ್ಣ ಶಿಲ್ಪಿಯವರ ಕೆಲಸವೇ ಶಿಲ್ಪಗಳ ತಯಾರಿಕೆ. ಅವರಿಗೆ ತಮ್ಮ ಮಕ್ಕಳ ಮೇಲೆ ಅಪಾರವಾದ ಪ್ರೀತಿ. ಆದ್ರೆ, ತಮ್ಮ ಪ್ರೀತಿ ಪಾತ್ರನಾದ ಮಗ ಕಾಯಿಲೆಯಿಂದ ಸಾವನ್ನಪ್ಪಿದ್ದ. ಆದರೆ, ಭೌತಿಕವಾಗಿ ಮಗ ನಮ್ಮೊಂದಿಗಿಲ್ಲದಿರಬಹುದು, ಮಾನಸಿಕವಾಗಿ ಆತ ನಮ್ಮೊಂದಿಗೆ ಇರುತ್ತಾನೆ ಎಂದು ತಿಳಿದುಕೊಂಡ ತಂದೆ, ತಮ್ಮ ಮಗನನ್ನೇ ಹೋಲುವ ಮೂರ್ತಿ ತಯಾರಿಸಿದ್ದಾರೆ.
ಮಗ ಸಾವನ್ನಪ್ಪುವಾಗ 19 ವರ್ಷ ವಯಸ್ಸಿನವನಿದ್ದ. ಇದೀಗ ಅದೇ ವಯಸ್ಸಿನ, ಥೇಟ್ ತಮ್ಮ ಮಗನಂತೆಯೇ ಕಾಣುವ, ಅದೇ ಎತ್ತರ, ಆಕಾರದ ಮೂರ್ತಿಯನ್ನು ಇವರು ತಯಾರಿಸಿದ್ದಾರೆ.
ಅಪ್ಪ-ಅಮ್ಮನ ನೆಚ್ಚಿನ ಮಗ
ಶಿಲ್ಪಿ ವೀರಣ್ಣ ಹಾಗು ಈರಮ್ಮ ಅವರ ಪುತ್ರ ವಿಜಯಕುಮಾರ್, ಎಸ್ ಎಸ್ ಎಲ್ ಸಿ ಓದಿದ್ದ. ತಂದೆಯಂತೆ ಚಿತ್ರಕಲೆ, ಶಿಲ್ಪಗಳ ತಯಾರಿಕೆಯಲ್ಲಿ ತೊಡಗಿದ್ದ. ಸುಮಾರು 360 ಚಿತ್ರಗಳನ್ನು ಬಿಡಿಸಿದ್ದ ವಿಜಯ ಕುಮಾರ್, ಅಲ್ಲಲ್ಲಿ ತನ್ನ ಚಿತ್ರ ಪ್ರದರ್ಶನ ಕೂಡಾ ಮಾಡಿದ್ದ. ಆದ್ರೆ, ವಿಜಯಕುಮಾರನಿಗೆ 19 ವರ್ಷವಿದ್ದಾಗ ಕಾಮಾಲೆ ರೋಗ ಕಾಣಿಸಿಕೊಂಡಿತು. ರಾಯಚೂರಿನಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 1999 ಸೆಪ್ಟೆಂಬರ್ 7 ರಂದು ಆತ ನಿಧನನಾದ.
ಮಗನ ನೆನಪು ಶಾಶ್ವತವಾಗಿ ಉಳಿಯಬೇಕು ಎನ್ನುವ ಕಾರಣಕ್ಕೆ ತಂದೆ ವೀರಣ್ಣ ಮಗನ ಮೂರ್ತಿಯನ್ನು ತಯಾರಿಸಿದ್ದಾರೆ.
![]()
ಮಗನ ಮೂರ್ತಿಗೆ ತಂದೆಯ ಪೂಜೆ
ಮಗನಿಗೆ ನಿತ್ಯಪೂಜೆ
ಕಳೆದ 22 ವರ್ಷಗಳಿಂದ ಅವರು
ಮಗನಿಗೆ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಮಗ ನಮ್ಮೊಂದಿಗೆ ಇದ್ದಾನೆ ಎನ್ನುವ ಅವರು, ಮುಂಜಾನೆ ಎದ್ದ ತಕ್ಷಣ ಮಗನ ಮೂರ್ತಿಗೆ ವಿಭೂತಿ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿ ನಮಿಸುತ್ತಾರೆ. ಇನ್ನು ಅಮವಾಸ್ಯೆ ಹುಣ್ಣಿಮೆಯ ದಿನ, ಮಗನ ಜನ್ಮ ದಿನದ ದಿನ ವಿಶೇಷ ಪೂಜೆ ಸಲ್ಲಿಸಿ ಕಾಯಿ ಕರ್ಪೂರ ಮಾಡಿಸುತ್ತಾರೆ. ಮಗ ಒಬ್ಬನೇ ಇರುತ್ತಾನೆ ಎಂದು ನಂಬಿಕೊಂಡಿರುವ ತಾಯಿ ಈರಮ್ಮ, ಯಾವುದೇ ಊರಿಗೆ ಹೋದರೂ ಸಂಜೆಯ ವೇಳೆಗೆ ಮನೆಗೆ ಬರುತ್ತಾರೆ. ತನ್ನ ಮಗ ಏಕಾಂಗಿಯಾಗಿರಬಾರದು ಎಂಬುದು ತಾಯಿಯ ಬಯಕೆ.
ಇದನ್ನೂ ಓದಿ: ಗುಜರಿ ವಸ್ತು ಬಳಸಿ ಮಗನಿಗಾಗಿ ಸಖತ್ ಜೀಪ್ ರೆಡಿ ಮಾಡಿದ ತಂದೆ, ರಸ್ತೆ ಮೇಲೆಲ್ಲಾ ಇದರದ್ದೇ ಸವಾರಿ !
ಕನಸಿನಲ್ಲಿ ಬರುತ್ತಾನೆ ಮಗ
ಆಗಾಗ ಮಗ ಕನಸಿನಲ್ಲಿ ಬರುತ್ತಾನೆ. ಬಂದಾಗ ಅಳುತ್ತಾ ನನ್ನ ಕಾಲ ಬಳಿ ಕುಳಿತಿರುತ್ತಾನೆ. ಆತನಿಗೆ ಸಂತೈಸಿ ಕಳುಹಿಸುತ್ತೇನೆ. ಈ ಬಗ್ಗೆ ಹೊರಗಡೆ ಹೇಳಿದರೆ ಯಾರೂ ನಂಬುವುದಿಲ್ಲ. ನಾನು ಮನಸ್ಸಿನಲ್ಲಿ ನೆನಪಿಸಿಕೊಂಡಾಗಲೆಲ್ಲಾ ಮಗ ಬರುತ್ತಾನೆ ಎನ್ನುತ್ತಾರೆ ಅವರು.
ಮಗನ ನೆನಪು ಶಾಶ್ವತವಾಗಿರಲಿ ಎನ್ನುವ ಕಾರಣಕ್ಕೆ ಮೂರ್ತಿ ತಯಾರಿಸಿದ್ದೇವೆ. ಈ ಮೂರ್ತಿಗೆ ನಾನಷ್ಟೇ ಅಲ್ಲ, ಮನೆಯಲ್ಲಿ ಎಲ್ಲಾ ಸದಸ್ಯರೂ ಪೂಜೆ ಸಲ್ಲಿಸುತ್ತಾರೆ ಎಂದು ತಂದೆ ಹೇಳುತ್ತಾರೆ. ಕಳೆದ 22 ವರ್ಷದಿಂದ ನಿರ್ಜೀವ ಮೂರ್ತಿಯಲ್ಲೇ ತಮ್ಮ ಮಗ ಜೀವಂತವಾಗಿದ್ದಾನೆ ಎಂದು ನಂಬಿಕೊಂಡಿರುವ ಈ ದಂಪತಿ, ಮಗನ ನೆನಪಲ್ಲೇ ಕಾಲ ಕಳೆಯುತ್ತಿದ್ದಾರೆ. 6 ಅಡಿ ಎತ್ತರದ ಈ ಸಿಮೆಂಟಿನ ಮೂರ್ತಿಯಲ್ಲೇ ಮಗನನ್ನು ಕಂಡು ಇಷ್ಟು ದಿನವೂ ಈ ತಂದೆ ತಾಯಿ ಬದುಕು ನಡೆಸಿದ್ದಾರೆ. ಯಾವ ರೂಪದಲ್ಲಾದರೂ ಸರಿ ತಮ್ಮ ಮಗ ತಮ್ಮೊಂದಿಗೆ ಇದ್ದಾನೆ ಎನ್ನುವುದೇ ಅವರಿಗೆ ಖುಷಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ