ಬಾಣಂತನಕ್ಕೆ ಬಂದಿದ್ದ ಮಗಳ ಒಡವೆ ಕದ್ದು ಕಳ್ಳತನದ ನಾಟಕವಾಡಿ ಸಿಕ್ಕಿ ಬಿದ್ದ ಪೋಷಕರು!

ಹಣದ ಆಸೆಗಾಗಿ ಹೆತ್ತವರೇ ಆಡಿದ ಕಳ್ಳತನ ನಾಟಕ ಕೇಳಿ ರೇಖಾಳಿಗೆ ಶಾಕ್ ಆಗಿದೆ. ಆದರೂ ಹೆತ್ತವರು ಎಂಬ ಕಾರಣಕ್ಕೆ ಪೊಲೀಸ್ ಠಾಣೆಗೆ ನೀಡಿದ್ದ ದೂರನ್ನು ವಾಪಾಸ್ ಪಡೆದಿದ್ದಾರೆ.

ಬೇಲೂರು ಠಾಣಾ ವ್ಯಾಪ್ಸಿಯಲ್ಲಿ ನಡೆದಿರುವ ಘಟನೆ

ಬೇಲೂರು ಠಾಣಾ ವ್ಯಾಪ್ಸಿಯಲ್ಲಿ ನಡೆದಿರುವ ಘಟನೆ

  • Share this:
ಹಾಸನ:  ಹಣದ ಮುಂದೆ ಸಂಬಂಧಗಳೇ ಗೌಣವಾಗುತ್ತಿದೆ. ಬೇಲೂರು ಪಟ್ಟಣದ ಗುರಪ್ಪಗೌಡರ ಬೀದಿಯ ನಿವಾಸಿ ಕಲ್ಲೇಶಾಚಾರ್ ವೃತ್ತಿಯಲ್ಲಿ ಮರಗೆಲಸ ಮಾಡುತ್ತಾರೆ. ಇವರ ಪತ್ನಿ ಮಮತಾ ಗೃಹಿಣಿ. ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ತಮ್ಮ ಒಬ್ಬಳೆ ಮಗಳು ರೇಖಾಳನ್ನು ಬೇಲೂರಿನ ಚಿನ್ನ-ಬೆಳ್ಳಿ ಕೆಲಸ ಮಾಡುವ ನಟರಾಜ್ ಜೊತೆ ಒಡವೆ, ವರದಕ್ಷಿಣೆ ನೀಡಿ ಅದ್ಧೂರಿಯಾಗಿ ಮದುವೆ ಮಾಡಿದ್ದರು. ತದನಂತರ ಲಾಕ್ ಡೌನ್ ವೇಳೆ ಕಲ್ಲೇಶಾಚಾರ್ ಗೆ  ಕೆಲಸವಿಲ್ಲದಂತಾಗಿತ್ತು. ಈ ವೇಳೆ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಕಲ್ಲೇಶಾಚಾರ್ ಗೆ  ಮರಗೆಲಸದಲ್ಲಿ ಒಳ್ಳೆಯ ಹೆಸರಿತ್ತು. ಇತ್ತ ಸಾಲ ಕೊಟ್ಟವರು ಹಣ ವಾಪಾಸ್ ನೀಡುವಂತೆ ಪೀಡಿಸುತ್ತಿದ್ದರು. ಇದರಿಂದ ದಂಪತಿಗೆ ದಿಕ್ಕೆ ತೋಚದಂತಾಗಿತ್ತು.

ಇದೇ ವೇಳೆ ಮಗಳು ಬಾಣಂತನಕ್ಕಾಗಿ ತವರಿಗೆ ಬಂದಿದ್ದಳು. ರೇಖಾಳ ತವರು ಮನೆ ಗಂಡನ ಮನೆಯಿಂದ ಅಣತಿ ದೂರದಲ್ಲಿಯೇ ಇದೆ. ರೇಖಾ ಬಾಣಂತನ ಮುಗಿಸಿ ಪುನಃ ಗಂಡನ ಮನೆಗೆ ತೆರಳುವ ವೇಳೆ 2.25 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ಹಣವನ್ನು ಹೆತ್ತವರ ಮನೆಯಲ್ಲಿಯೇ ಇಟ್ಟು ಹೋಗಿದ್ದಳು. ನಿನ್ನೆ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಮಗಳು ರೇಖಾಳಿಗೆ ಕರೆ ಮಾಡಿದ ತಾಯಿ ಮಮತ ಮನೆಯಲ್ಲಿ ಕಳ್ಳತನವಾಗಿದ್ದು, ನಿನ್ನ ಒಡವೆ, ಹಣವನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ಹೇಳಿದ್ದಳು. ಕೂಡಲೇ ಗಾಬರಿಗೊಂಡ ರೇಖಾ ಬೇಲೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಳು. ಸ್ಥಳಕ್ಕೆ ಬಂದ ಸಬ್ ಇನ್ಸ್ ಪೆಕ್ಟರ್ ಯೋಗೇಶ್ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಎಸ್.ಜಿ.ಪಾಟೀಲ್ ಪರಿಶೀಲನೆ ನಡೆಸಿದ್ದರು.

ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸುತ್ತಿರುವ ವೇಳೆ ಮಮತ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದರು ಎನ್ನಲಾಗಿದೆ. ನಂತರ ಪೊಲೀಸರು ಠಾಣೆಗೆ ದಂಪತಿಗಳನ್ನು ಕರೆಸಿ ವಿಚಾರಿಣೆ ಮಾಡಿದ್ದಾರೆ. ಈ ವೇಳೆ ಮಮತ ತಾನು ಆಡಿದ ನಾಟಕವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ. ಮಗಳು ಪತಿಯ ಮನೆಗೆ ತೆರಳಿದ ನಂತರ ಚಿನ್ನಾಭರಣ ಹಾಗೂ ಹಣವನ್ನು ಬೇರೆಡೆ ಇಟ್ಟು ಕಳ್ಳತನವಾಗಿದೆ ಎಂದು ನಂಬಿಸಲು ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳ್ಳತನದ ನಾಟಕವಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇತ್ತ ಹಣದ ಆಸೆಗಾಗಿ ಹೆತ್ತವರೇ ಆಡಿದ ಕಳ್ಳತನ ನಾಟಕ ಕೇಳಿ ರೇಖಾಳಿಗೆ ಶಾಕ್ ಆಗಿದೆ. ಆದರೂ ಹೆತ್ತವರು ಎಂಬ ಕಾರಣಕ್ಕೆ ಪೊಲೀಸ್ ಠಾಣೆಗೆ ನೀಡಿದ್ದ ದೂರನ್ನು ವಾಪಾಸ್ ಪಡೆದಿದ್ದಾಳೆ. ಆದರೆ ಕಳ್ಳತನವಾಗಿದೆ ಎಂದು ಸುಳ್ಳು ಹೇಳಿ ಪೊಲೀಸರನ್ನು ಯಾಮಾರಿಸಲು ಮುಂದಾಗಿದ್ದಕ್ಕೆ ಪ್ರಕರಣ ದಾಖಲಿಸಕೊಂಡಿರುವ ಪೊಲೀಸರು ಕಲ್ಲೇಶಾಚಾರ್ ಹಾಗೂ ಮಮತಾ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಾಲ ತೀರಿಸಲು ಮಗಳ ಒಡವೆ, ಹಣ ಕಳ್ಳತನ ನಾಟಕವಾಡಿದ್ದ  ದಂಪತಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: