ಪ್ರವಾಹದ ನಡುವೆಯೂ ಪಪ್ಪಾಯ ಬಂಪರ್​ ಫಸಲು: ಬಾಗಲಕೋಟೆ ರೈತನಿಗೆ ಭರ್ಜರಿ ಲಾಭ

ಒಂದು ಎಕರೆಗೆ 50 ರಿಂದ 60 ಟನ್ ಇಳುವರಿ ಬಂದಿದೆ. ದೆಹಲಿ,ಗೋವಾ, ಮಂಗಳೂರು, ಬೆಂಗಳೂರು, ಮೈಸೂರು ಮುಂದಾದ ಕಡೆ ಪಪ್ಪಾಯಿ ರಪ್ತು ಆಗುತ್ತದೆ.

ಪಪ್ಪಾಯ ಫಸಲಿನೊಂದಿಗೆ ರೈತ

ಪಪ್ಪಾಯ ಫಸಲಿನೊಂದಿಗೆ ರೈತ

 • Share this:
  ಬಾಗಲಕೋಟೆ:  ಕರೋನಾ ಹಾಗೂ ಪ್ರವಾಹ ಪ್ರತಿಕೂಲ ವಾತಾವರಣ ಉಂಟಾಗಿ ಬಹುಪಾಲು ರೈತರು  ನಷ್ಟ ಅನುಭವಿಸಿದ್ದಾರೆ. ಕೊರೊನಾ ಲಾಕ್​​ಡೌನ್​ ನಿಂದ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿ ರೈತರು ಬೆಳೆದ ತೋಟಗಾರಿಕೆ ಬೆಳೆಗಳ ಪಸಲುಗಳನ್ನ ರಸ್ತೆ ಮೇಲೆ ಚೆಲ್ಲುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇನ್ನೇನು ಕೊರೊನಾ ಮುಗಿತು ಅನ್ನುವಷ್ಟರಲ್ಲಿ ಮಹಾರಾಷ್ಟ್ರ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ನದಿಗಳು ಉಕ್ಕಿಹರಿದವು. ಜಿಲ್ಲೆಯ ಘಟಪ್ರಭಾ, ಕೃಷ್ಣಾ, ಮಲಪ್ರಭಾ, ನದಿಯ ಪ್ರವಾಹದಿಂದ ರೈತರು ಬೆಳದ ಬೆಳೆಗಳು ನೀರಿನಲ್ಲಿ  ಕೊಚ್ಚಿ ಹೋದವು.  ಇಂತಹ ಪರಿಸ್ಥಿತಿ ನಡುವೆಯೂ  ಮುಧೋಳ ತಾಲ್ಲೂಕಿನ ಚಿಕ್ಕೂರು ಗ್ರಾಮದ   ಕೃಷ್ಣಪ್ಪ ಮತ್ತು ತಾಯವ್ವ ಅವರ ಮಗ ಸಂಗಮೇಶ ಕಾಳವ್ವಗೋಳ ಅವರು  ಮಾತ್ರ ಪಪ್ಪಾಯ ಬೆಳೆದು ಬಂಪರ್ ಆದಾಯದ ನಿರೀಕ್ಷೆಯಲ್ಲಿದ್ದಾರೆ.

  ಸಂಗಮೇಶ ಅವರು ಟ್ರ‍್ಯಾಕ್ಟರ್ ನೇಗಿಲು ಹೊಡೆದು ಹೊಲ ಹದಗೊಳಿಸಿದ್ದಾರೆ. ಬದು ಮಾಡಿ ತೈವಾನ್ ತಳಿಯ  ಎರಡುಸಾವಿರದ ಐದು ನೂರು ಸಸಿಗಳನ್ನು ತಂದು ನೆಟ್ಟಿದ್ದಾರೆ. ಅವುಗಳಿಗೆ ಕಾಲಕ್ಕೆ ತಕ್ಕಂತೆ ಸಾವಯವ ಗೊಬ್ಬರ ನೀಡಿದ್ದಾರೆ. ಸಾವಯವ ಉತ್ಪನ್ನಗಳ ಸಿಂಪರಣೆ ಮೂಲಕವೂ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದ್ದರಿಂದ ಪಪ್ಪಾಯ ಗಿಡಗಳು ಕೇವಲ ಏಳು ತಿಂಗಳಿನಿಂದಲೇ ಕಾಯಿ ಬಿಟ್ಟು ಹಣ್ಣು ಕೊಡಲು ಆರಂಭಿಸಿವೆ.

  ಮಳೆಗಾಲ ಮತ್ತು ಚಳಿಗಾಲದಲ್ಲಿ ಪಪ್ಪಾಯ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಪೋಷಕಾಂಶಗಳ ಆಹಾರವಾಗಿರುವ ಈ ಹಣ್ಣು ಆರೋಗ್ಯಕ್ಕೆ ಉತ್ತಮವಾಗಿದೆ. ವಿಟಮಿನ್ ಸಿ ಜೊತೆಗೆ ಅಧಿಕ ಕಾರ್ಬೋ ಹೈಡ್ರೇಟ್ ಹಾಗೂ ಔಷಧೀಯ ಗುಣ ಹೊಂದಿರುವ ಪಪ್ಪಾಯ ಆರೋಗ್ಯಕ್ಕೂ ಉತ್ತಮ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಸಂಪಾದಿಸಬಹುದಾದಂತ ಬೆಳೆ ಪಪ್ಪಾಯಿಯಾಗಿದೆ.  ಅಲ್ಪಸಮಯದಲ್ಲಿ ಬೆಳೆಯುವ ಪಪ್ಪಾಯ ದೀರ್ಘಕಾಲದ ಫಸಲನ್ನು ನೀಡುತ್ತದೆ. ದೇಹಕ್ಕೆ ಶಾಖ ಒದಗಿಸುವುದರ ಜತೆಗೆ ಸಾಂಕ್ರಾಮಿಕ ರೋಗದ ಮಾರಕ ಪರಿಣಾಮ ನಿಯಂತ್ರಿಸುವ ಗುಣ ಹೊಂದಿದ್ದರಿಂದ ಈಗ ಬೇಡಿಕೆ ಹೆಚ್ಚಾಗಿದೆ. ಚಿಕ್ಕೂರಿನ ರೈತ ಸಂಗಮೇಶ ಹೇಳುವಂತೆ , ಎರಡೂವರೆ ಎಕರೆಯಲ್ಲಿ ಪಪ್ಪಾಯಿ ಬೆಳೆಯಲಾಗಿದೆ.

  ಇದನ್ನೂ ಓದಿ: ಶಾಲೆಯ ಆವರಣದಲ್ಲಿ ಗಿಡ-ಮರಗಳನ್ನು ನೆಟ್ಟು ನಂದನವನ ಮಾಡಿದ ವಿದ್ಯಾರ್ಥಿಗಳು

  ಒಂದು ಎಕರೆಗೆ 50 ರಿಂದ 60 ಟನ್ ಇಳುವರಿ ಬಂದಿದೆ. ದೆಹಲಿ,ಗೋವಾ, ಮಂಗಳೂರು, ಬೆಂಗಳೂರು, ಮೈಸೂರು ಮುಂದಾದ ಕಡೆ ಪಪ್ಪಾಯಿ ರಪ್ತು ಆಗುತ್ತದೆ. ನಾಲ್ಕುರಿಂದ ಐದು ಲಕ್ಷ  ಲಾಭವಿದೆ. ಎರಡೂವರೆ ಎಕರೆಗೆ ನಾವು ಪಪ್ಪಾಯಿ ಬೆಳೆಯಲು ಖರ್ಚು ಮಾಡಿದ್ದು ಎರಡು ಲಕ್ಷ ಆಗಿದೆ. ಸದ್ಯ ಮಾರುಕಟ್ಟೆಯಲ್ಲಿ ಪಪ್ಪಾಯಿ ಹಣ್ಣಿಗೆ ಕನಿಷ್ಠ ಹನ್ನೆರಡರಿಂದ ಗರಿಷ್ಠ ಹದಿನೈದು ರುಪಾಯಿಯಂತೆ ಪ್ರತಿಕೆಜಿಗೆ ಸಿಗುತ್ತದೆ ಎನ್ನುತ್ತಾರೆ.

  ಎರಡೂವರೆ ಎಕರೆಯಲ್ಲಿ  2,500 ಪಪ್ಪಾಯಿ ಗಿಡಗಳನ್ನು ಬೆಳೆಸಿ ಅದರ ಪಪ್ಪಾಯಿ ಹಣ್ಣು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಎರಡೂವರೆ ಎಕರೆ  ಪಪ್ಪಾಯಿ ತೋಟದಲ್ಲಿ ಬರೋಬ್ಬರಿ  ಐದು ಲಕ್ಷ ರುಪಾಯಿ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ.

  ಅವರ ಉಳಿದ ಕೃಷಿ ಭೂಮಿಯಲ್ಲಿ ಕಬ್ಬು, ನುಗ್ಗೆಕಾಯಿ ಬೆಳೆಯುತ್ತಿದ್ದಾರೆ.ಒಟ್ಟಿನಲ್ಲಿ ಪ್ರವಾಹದ ಭೀಕರತೆಯಿಂದ ಚಿಕ್ಕೂರಿನ ನೂರಾರು ರೈತರು ತಾವು ಬೆಳೆದ ಕಬ್ಬು,ಈರುಳ್ಳಿ, ಶೇಂಗಾ, ಹೆಸರು ಬೆಳೆ ನೀರುಪಾಲಾಗಿ ಆರ್ಥಿಕ ಸಂಕಷ್ಟವನ್ನುಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲೂ ಚಿಕ್ಕೂರಿನ  ರೈತ ಸಂಗಮೇಶ ತಮ್ಮ ಎರಡೂವರೆಎಕರೆಯಲ್ಲಿ ಪಪ್ಪಾಯಿ ಹಣ್ಣು ಬೆಳೆದು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  ವರದಿ: ಮಂಜುನಾಥ ತಳವಾರ 
  Published by:Kavya V
  First published: