ಚಾಮರಾಜನಗರ (ಆ.26): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಚಾಲನೆ ನೀಡಲಾಗಿದೆ. ಗೌಡ ಲಿಂಗಾಯತ, ಮಲೆ ಗೌಡ ಲಿಂಗಾಯತ, ದೀಕ್ಷಾ ಲಿಂಗಾಯತ ಒಳಗೊಂಡ ಪಂಚಮಸಾಲಿ ಸಮಾಜ ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟದಿಂದ ಮತ್ತೆ ಹೋರಾಟದ ಕಹಳೆ ಮೊಳಗಿಸಿದೆ. 'ಪ್ರತಿಜ್ಞಾ ಪಂಚಾಯತ್ ' ಘೋಷ ವಾಕ್ಯದೊಂದಿಗೆ ಬೃಹತ್ ಅಭಿಯಾನ ಆರಂಭಿಸಲಾಗಿದ್ದು ಇಂದಿನಿಂದ ಅಕ್ಟೋಬರ್ 1 ರವರೆಗೆ ರಾಜ್ಯಾದ್ಯಂತ ಈ ಅಭಿಯಾನ ನಡೆಯಲಿದೆ. ಕೂಡಲ ಸಂಗಮ ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಮಲೈ ಮಹದೇಶ್ವರ ಬೆಟ್ಟದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನ ಮಾಜಿ ಶಾಸಕ ಮತ್ತು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಹರಿಹರದ ಜೆಡಿಎಸ್ ಮಾಜಿ ಶಾಸಕ ಶಿವಶಂಕರ್ ಅವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಮಲೈ ಮಹದೇಶ್ವರ ಬೆಟ್ಟದಿಂದ ಆರಂಭವಾಗಿರುವ ಈ ಅಭಿಯಾನ ಚಾಮರಾಜನಗರ ಜಿಲ್ಲೆಯ ಹನೂರು, ಕೊಳ್ಳೇಗಾಲ, ಬಳಿಕ ಟಿ.ನರಸೀಪುರ, ಮೈಸೂರು, ಕೊಡಗು, ಮಂಡ್ಯ, ಹಾಸನ ಚಿಕ್ಕಮಗಳೂರು, ಶಿವಮೊಗ್ಗ ಹೀಗೆ ರಾಜ್ಯಾದ್ಯಂತ ನಡೆದು ಅಂತಿಮವಾಗಿ ಅಕ್ಟೋಬರ್ 1 ರಂದು ಬೆಂಗಳೂರಿನಲ್ಲಿ ಸಮಾವೇಶಗೊಂಡು ಬೃಹತ್ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕೇಳಿದ್ದ ಆರು ತಿಂಗಳ ಕಾಲಾವಾಕಾಶ ಸೆಪ್ಟೆಂಬರ್15 ಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಾಗಿ ಸರ್ಕಾರಕ್ಕೆ ಎಚ್ಚರಿಸಲು ರಾಜ್ಯಾದ್ಯಂತ ಬೃಹತ್ ಅಭಿಯಾನ ನಡೆಸಲಾಗುತ್ತಿದೆ ಎಂದು ಅಭಿಯಾನದ ನೇತೃತ್ವ ವಹಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯಂಜಯಸ್ವಾಮೀಜಿ ತಿಳಿಸಿದರು. ಕಳೆದ ವರ್ಷ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಈಗ ಮುಖ್ಯಮಂತ್ರಿ ಆಗಿದ್ದಾರೆ. ಸರ್ಕಾರವನ್ನು ಎಚ್ಚರಿಸಲು ಪ್ರತಿಜ್ಞಾ ಪಂಚಾಯತ್ ಘೋಷ ವಾಕ್ಯದೊಂದಿಗೆ ಬೃಹತ್ ಅಭಿಯಾನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬಿಜೆಪಿಗೆ ಮತ್ತೊಮ್ಮೆ ‘ಲಿಂಗಾಯತ’ ತಲೆನೋವು; ವಿಜಯೇಂದ್ರ ಬಗ್ಗೆ ಸ್ವಾಮೀಜಿಗಳದ್ದೂ ತಗಾದೆ
ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು. 2ಎ ಮೀಸಲಾತಿ ಪಡೆಯಲೇಬೇಕೆಂಬ ಹೋರಾಟದ ಬದ್ದತೆಯಿಂದ ಹೊರಬರಬಾರದು. ಈ ಸಂಬಂಧ ಪ್ರತಿಜ್ಞೆ ಸ್ವೀಕರಿಸಲು ರಾಜ್ಯಾದ್ಯಂತ ಅಭಿಯಾನ ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪಂಚಮಸಾಲಿ, ಗೌಡ, ಮಲೆಗೌಡ ಹಾಗು ದೀಕ್ಷಾ ಲಿಂಗಾಯತ ಒಳಗೊಂಡ ಪಂಚಮಸಾಲಿ ಸಮಾಜದಲ್ಲಿ 80 ಲಕ್ಷಕ್ಕೂ ಹೆಚ್ಚು ಜನ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇವರಿಗೆ ಮೀಸಲಾತಿ ಕಲ್ಪಿಸಿ ಮೇಲೆತ್ತಬೇಕೆಂಬುದೇ ನಮ್ಮ ಗುರಿಯಾಗಿದೆ. ಈಗಾಗಲೇ ಕೂಡಲ ಸಂಗಮದಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಿ ಬೆಂಗಳೂರಲ್ಲಿ ಬೃಹತ್ ಹೋರಾಟ ಮಾಡಿದ್ದೇವೆ. ಇದಕ್ಕೆ ಮತ್ತೊಮ್ಮೆ ಅವಕಾಶವಾಗದಂತೆ ಸರ್ಕಾರ ನಡೆದುಕೊಳ್ಳುವ ವಿಶ್ವಾಸ ಇದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಮೀಸಲಾತಿ ಶೇಕಡಾ. 50 ಮೀರಬಾರದು. ಹಾಗಾಗಿ ಶೇ.50 ರೊಳಗೆ ನಮಗೆ ಮೀಸಲಾತಿ ಕಲ್ಪಿಸಿಕೊಡಿ ಎಂದಷ್ಟೇ ನಾವು ಕೇಳುತ್ತಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.
ಚುನಾವಣೆಗೆ ಕೇವಲ 18 ತಿಂಗಳು ಬಾಕಿ ಇದೆ. ಸರ್ಕಾರ ಇನ್ನೂ ಮೇಷ ಎಣಿಸಿದರೆ ಲಿಂಗಾಯತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಎಚ್ಚರಿಕೆ ನೀಡಿದರು. ಗೌಡ, ಮಲೆಗೌಡ ದೀಕ್ಷಾ ಲಿಂಗಾಯತ ಸೇರಿ ರಾಜ್ಯದಲ್ಲಿ ಒಂದುವರೆ ಕೋಟಿ ಪಂಚಮಸಾಲಿಗಳಿದ್ದು ನಮ್ಮ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ ಎಂದು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಾಯನಂದ ಕಾಶಪ್ಪನವರ್ ಸವಾಲು ಹಾಕಿದರು.
ಇದನ್ನೂ ಓದಿ: Mysore Gang Rape: ಕಾಂಗ್ರೆಸ್ನವರು ರೇಪ್ ಮಾಡಿದ್ರೆ ಬಂಧಿಸಿ; ಗೃಹ ಸಚಿವರ ಮಾತಿಗೆ ಕಿಡಿಕಾರಿದ ಡಿಕೆ ಶಿವಕುಮಾರ್
ಬಿಎಸ್ವೈ ದಿಕ್ಕು ತಪ್ಪಿಸಿದ್ದು ವಿಜಯೇಂದ್ರ: ಜಯಮೃತ್ಯುಂಜಯಸ್ವಾಮೀಜಿ ಆರೋಪ:
ಯಡಿಯೂರಪ್ಪ ಅವರಿಗೆ ಮೀಸಲಾತಿ ಕೊಡುವ ಮನಸ್ಸಿತ್ತು. ಆದರೆ ಅವರ ಪುತ್ರ ಬಿ.ವೈ,. ವಿಜಯೇಂದ್ರ ನಮ್ಮ ಹೋರಾಟವನ್ನು ತಪ್ಪಾಗಿ ತಿಳಿದುಕೊಂಡು ಯಡಿಯೂರಪ್ಪನವರಿಗೆ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನ ಮಾಡಿದರು ಎಂದು ಜಯಮೃತ್ಯುಂಜಯಸ್ವಾಮೀಜಿ ಆರೋಪಿಸಿದರು.
ಚುನಾವಣೆ ಹತ್ತಿರ ಬಂದಾಗ ಮೀಸಲಾತಿ ಕೊಟ್ಟರೆ ಆಯ್ತು ಎಂಬ ಮನಸ್ಥಿತಿ ಹೊಂದಿದ್ದ ವಿಜಯೇಂದ್ರ ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯ ಮೂಡಿಸುವ ಯತ್ನ ಮಾಡಿದರು ಎಂದು ಆರೋಪಿಸಿದ ಸ್ವಾಮೀಜಿ, ಈಗ ಅದು ಮುಗಿದ ಅಧ್ಯಾಯ. ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಒಟ್ಟಾಗಿ ಸಿಎಂ ಮೇಲೆ ಒತ್ತಡ ಹಾಕಬೇಕು, ಬಿಜೆಪಿ ಸರ್ಕಾರ ಬರಲು ಲಿಂಗಾಯತರೇ ಕಾರಣ. ಈ ಸರ್ಕಾರದ ಮೇಲೆ ಲಿಂಗಾಯತರ ಋಣಭಾರ ಬಹಳ ಇದೆ. ನಮ್ಮ ಸಮಾಜ ಕೇವಲ ಓಟ್ ಕೊಡುವ ಸಮಾಜ ಆಗಬಾರದು. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದರು.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳಿಗೆ, ಹೆಚ್.ಡಿ. ದೇವೇಗೌಡ ತಮ್ಮ ಸಮುದಾಯಕ್ಕೆ 3ಎ ಮೀಸಲಾತಿ ನೀಡಿದಂತೆಯೇ ಬಸವರಾಜ ಬೊಮ್ಮಾಯಿ ಅವರು ಸಹ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕೊಡಲಿ ಎಂದು ಜಯ ಮೃತಂಜಯಸ್ವಾಮೀಜಿ ಈ ವೇಳೆ ಆಗ್ರಹಿಸಿದರು.
ವರದಿ: ಎಸ್. ಎಂ.ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ