• Home
  • »
  • News
  • »
  • district
  • »
  • ಭತ್ತಕ್ಕೆ ಉತ್ತಮ ದರವಿಲ್ಲ, ಅಕ್ಕಿಗೆ ಬೇಡಿಕೆ ಇಲ್ಲ, ಸರ್ಕಾರದ ಭತ್ತ ಖರೀದಿ ಕೇಂದ್ರದ ಕಡೆ ಮುಖ ಮಾಡದ ರೈತರು

ಭತ್ತಕ್ಕೆ ಉತ್ತಮ ದರವಿಲ್ಲ, ಅಕ್ಕಿಗೆ ಬೇಡಿಕೆ ಇಲ್ಲ, ಸರ್ಕಾರದ ಭತ್ತ ಖರೀದಿ ಕೇಂದ್ರದ ಕಡೆ ಮುಖ ಮಾಡದ ರೈತರು

ಭತ್ತ

ಭತ್ತ

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವವರೇ ಇಲ್ಲದಂತಾಗಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಮದುವೆ, ಸಭೆ ಸಮಾರಂಭಗಳು ಇಲ್ಲದಿರುವುದು, ಹೋಟೇಲ್, ಹಾಸ್ಟೆಲ್ ಗಳು ಬಂದ್ ಆಗಿರುವುದರಿಂದ ಅಕ್ಕಿ ಖರ್ಚಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಅಕ್ಕಿ ಕೇಳುವವರೆ ಇಲ್ಲದಂತಾಗಿರುವುದು.

ಮುಂದೆ ಓದಿ ...
  • Share this:

ದಾವಣಗೆರೆ: ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಭತ್ತ ಖರೀದಿ ಕೇಂದ್ರಗಳು ರೈತರಿಲ್ಲದೆ ಬಣಗುಡುತ್ತಿವೆ. ಜಿಲ್ಲೆಯಲ್ಲಿ ಶುಕ್ರವಾರದವೆರೆಗೆ ಭತ್ತ ಖರೀದಿ ಕೇಂದ್ರದಲ್ಲಿ 91 ಜನ ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಇದುವರೆಗೆ 571 ಕ್ವಿಂಟಾಲ್ ಭತ್ತ ಮಾತ್ರ ಖರೀದಿಯಾಗಿದೆ.


ಹೊನ್ನಾಳಿ ತಾಲ್ಲೂಕಿನಲ್ಲಿ 60, ಹರಿಹರದಲ್ಲಿ 19, ಮತ್ತು ದಾವಣಗೆರೆಯಲ್ಲಿ 12 ರೈತರು ನೋಂದಣಿ ಮಾಡಿಕೊಂಡಿದ್ದು, ಚನ್ನಗಿರಿ ಹಾಗೂ ಜಗಳೂರಿನಲ್ಲಿ ಭತ್ತ ಖರೀದಿಗಾಗಿ ಯಾರೂ ನೋಂದಣಿ ಮಾಡಿಸಿಲ್ಲ. ಆದರೆ ಜಿಲ್ಲೆಯಲ್ಲಿ ರಾಗಿ ಖರೀದಿ ಉತ್ತಮವಾಗಿದ್ದು ಇದುವರೆಗೂ ಜಿಲ್ಲೆಯಲ್ಲಿ 19,012 ಕ್ವಿಂಟಲ್ ರಾಗಿಯನ್ನು 3150 ರೂ. ದರದ ಅನ್ವಯ ಖರೀದಿಸಲಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ತಿಳಿಸಿದ್ದಾರೆ.


ಸಾಮಾನ್ಯ ಭತ್ತಕ್ಕೆ 1815 ರೂ. ಮತ್ತು ಭತ್ತ ಗ್ರೇಡ್ ಎ ಗೆ 1835 ರೂ. ದರ ನಿಗದಿ ಮಾಡಲಾಗಿದೆ. ಮಧ್ಯವರ್ತಿಗಳಿಗೆ ಪ್ರವೇಶವಿಲ್ಲದೆ ರೈತರು ನೇರವಾಗಿ ಖರೀದಿ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಬಂದು ಹೆಸರು ನೋಂದಾಯಿಸಿಬೇಕು. ಭತ್ತ ಖರೀದಿಗೆ ಮೇ 31 ಕೊನೆಯ ದಿನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ರೈತರಿಗೆ ಖರೀದಿ ಕೇಂದ್ರದ ನಿಬಂಧನೆಗಳು ಕಠಿಣವಾಗಿರುವುದರಿಂದ ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡಲು ಮನಸ್ಸು ಮಾಡುತ್ತಿಲ್ಲ. ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ರೈತರ ಮೂಗಿಗೆ ತುಪ್ಪ ಹಚ್ಚಿದಂತಾಗಿದೆ ಎಂಬ ಆರೋಪ ರೈತರಿಂದಲೇ ಕೇಳಿಬಂದಿದೆ. ಇತ್ತ ಓಪನ್ ಮಾರುಕಟ್ಟೆಯಲ್ಲಿ ಸೋನಾ ಮುಸುರಿ ಭತ್ತಕ್ಕೆ ಕ್ವಿಂಟಾಲ್​ಗೆ 1450 ರಿಂದ 1500 ರೂಪಾಯಿ ಸಿಗುತ್ತೆ, ಆರ್​ಎನ್​ಆರ್ ಭತ್ತ 1700 ರಿಂದ 1800 ಹಾಗೂ ಶ್ರೀರಾಮ್ ಸೋನಾ 1900 ರಿಂದ 2000 ರೂಪಾಯಿ ಇದೆ ಎಂದು ಹೇಳಲಾಗುತ್ತಿದೆ. ಈ ದರ ಸರಾಸರಿಯಲ್ಲಿ ಕ್ವಿಂಟಾಲ್ ಗೆ 300 ರೂಪಾಯಿ ಭತ್ತ ಖರೀದಿ ಕೇಂದ್ರದಲ್ಲಿ ಕಡಿಮೆ ಇದೆ.


ಒಂದು ಎಕರೆಯಲ್ಲಿ ಭತ್ತ ಬೆಳೆಯಲು ರೈತರು ಕನಿಷ್ಠ 25 ಸಾವಿರ ಖರ್ಚು ಮಾಡುತ್ತಾರೆ. ಎಕರೆಗೆ ಸರಾಸರಿ 20 ರಿಂದ 25 ಕ್ವಿಂಟಾಲ್ ಇಳುವರಿ ಬಂದರೂ ಖರ್ಚು ತೆಗೆದು ಈಗಿರುವ ದರದಲ್ಲಿ ರೈತನಿಗೆ 5 ಸಾವಿರ ಉಳಿಯುವುದು ಕಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಭತ್ತ ಬೆಳೆದ ರೈತರು. ಅಲ್ಲದೇ ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಕಟಾವಿಗೆ ಬಂದಿರುವ ಭತ್ತ ನೆಲಕಚ್ಚಿರುವುದು ರೈತರಿಗೆ ಮತ್ತಷ್ಟೂ ಕಷ್ಟ ತಂದಿದೆ. ಈ ಮೊದಲು ಒಂದು ಎಕರೆ ಭತ್ತವನ್ನು ಒಂದೇ ಗಂಟೆಯಲ್ಲಿ ಕುಯ್ಯುತ್ತಿದ್ದ ಮಿಷನ್ ಗಳು ಈಗ ಭತ್ತ ನೆಲಕಚ್ಚಿರುವುದರಿಂದ ಎಕರೆಗೆ 2 ರಿಂದ 3 ಗಂಟೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ರೈತರಿಗೆ ಮತ್ತಷ್ಟು ಹೊರೆಯಾಗಿದೆ. ಮಳೆಯಿಂದ ಬೆಳೆ ಹಾನಿ ಒಂದು ಕಡೆಯಾದರೆ, ಭತ್ತಕ್ಕೆ ಉತ್ತಮ ದರವಿಲ್ಲದೇ ರೈತರು ಕಂಗಾಲಾಗಿರುವುದು ಮತ್ತೊಂದೆಡಯಾಗಿದೆ. ಜಿಲ್ಲಾಡಳಿತ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕೆಂದು ರೈತ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.


ಭತ್ತದ ತೇವಾಂಶ ಕಡಿಮೆ ಮಾಡಿಕೊಂಡು, ಚೆನ್ನಾಗಿ ಒಣಗಿಸಿಕೊಂಡು ಖರೀದಿ ಕೇಂದ್ರಗಳಿಗೆ ತರಬೇಕೆಂಬ ನಿಯಮ ರೈತರು ಖರೀದಿ ಕೇಂದ್ರಗಳಿಗೆ ಹೋಗದಂತೆ ಮಾಡಿದೆ. ಸರ್ಕಾರ ರೈತರಿಗೆ ಯಾವುದೇ ಕಂಡೀಷನ್ ಹಾಕದೆ ಭತ್ತ ಖರೀದಿಸಿ ಆ ಭತ್ತವನ್ನು ಆಧುನೀಕರಣದ ಹೊಂದಿರುವ ರೈಸ್ ಮಿಲ್ ಗಳಿಗೆ ನೀಡಿ. ಅಲ್ಲಿ ಭತ್ತವನ್ನ ಸಂಸ್ಕರಣೆ ಮಾಡಿಸಿ ಅಲ್ಲಿಯೇ ಸ್ಟಾಕ್ ಮಾಡಬಹುದು. ನಂತರ ಇದೇ ಅಕ್ಕಿಯನ್ನ ನ್ಯಾಯಬೆಲೆ ಅಂಗಡಿಗಳಗೆ ಸರಬರಾಜು ಮಾಡಿದರೆ ಸರ್ಕಾರಕ್ಕೆ ಮತ್ತು ರೈತರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡುತ್ತಾರೆ ರೈಸ್ ಮಿಲ್ ಮಾಲೀಕ ವಾಗೀಶ್ ಸ್ವಾಮಿ. ಸರ್ಕಾರ ಈ ಬಗ್ಗೆ ಚಿಂತನೆ ಮಾಡಿ ಕ್ರಮಕೈಗೊಂಡರೆ ರೈತರು ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡಲು ಮುಂದೆ ಬರುತ್ತಾರೆ ಎಂಬುದು ಹಲವರ ಅಭಿಪ್ರಾಯವಾಗಿದೆ.


ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವವರೇ ಇಲ್ಲದಂತಾಗಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಮದುವೆ, ಸಭೆ ಸಮಾರಂಭಗಳು ಇಲ್ಲದಿರುವುದು, ಹೋಟೇಲ್, ಹಾಸ್ಟೆಲ್ ಗಳು ಬಂದ್ ಆಗಿರುವುದರಿಂದ ಅಕ್ಕಿ ಖರ್ಚಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಅಕ್ಕಿ ಕೇಳುವವರೆ ಇಲ್ಲದಂತಾಗಿರುವುದು.


ಸರ್ಕಾರ ಖರೀದಿ ಕೇಂದ್ರ ತೆರೆದರೆ ಸಾಲದು ರೈತರು ಖುಷಿಯಿಂದ ಬಂದು ಭತ್ತವನ್ನು ಖರೀದಿಗೆ ಕೊಡುವಂತಹ ವಾತಾವರಣ ನಿರ್ಮೀಸಬೇಕು. ಖರೀದಿ ಕೇಂದ್ರಗಳಲ್ಲಿ ರೈತರಿಗೆ ಹಾಕಿರುವ ನಿಬಂಧನೆಗಳನ್ನು ತೆಗೆದು ಹಾಕಿ ಸುಲಭವಾಗಿ ಭತ್ತ ಖರೀದಿಸುವಂತಾಗಬೇಕು. ಖರೀದಿ ಕೇಂದ್ರವನ್ನು ಮೇ 31 ರ ನಂತರವೂ ಮುಂದುವರಿಸಬೇಕು ಎಂದು ರೈತ ಮುಖಂಡರು ಹಾಗೂ ಎಪಿಎಂಸಿ ವರ್ತಕರು ಒತ್ತಾಯಿಸಿದ್ದಾರೆ.

Published by:HR Ramesh
First published: