Belagavi Rain : ಬೆಳಗಾವಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ನಿರಂತರ ಮಳೆ : ತುಂಬಿ ಹರಿಯುತ್ತಿರುವ ನದಿ, ಹಳ್ಳಗಳು, ಭತ್ತದ ಬೆಳೆ ನಾಶ..!

ಭಾರೀ ಮಳೆ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಅನೇಕ ಹಳ್ಳಗಳು ನದಿಯಾಗಿ ಪರಿವರ್ತನೆ ಆಗಿವೆ. ದೊಡ್ಡ ಪ್ರಮಾಣದಲ್ಲಿ ಜಮೀನುಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ರೈತರು ನಾಟಿ ಮಾಡಿದ್ದ ಭತ್ತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ

news18-kannada
Updated:August 5, 2020, 3:23 PM IST
Belagavi Rain : ಬೆಳಗಾವಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ನಿರಂತರ ಮಳೆ : ತುಂಬಿ ಹರಿಯುತ್ತಿರುವ ನದಿ, ಹಳ್ಳಗಳು, ಭತ್ತದ ಬೆಳೆ ನಾಶ..!
ಜಮೀನುಗಳಿಗೆ ನೀರು ನುಗ್ಗಿರುವುದು
  • Share this:
ಬೆಳಗಾವಿ(ಆಗಸ್ಟ್. 05): ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ನಿರಂತರವಾಗಿ ಮಳೆಯಾಗುತ್ತಿದ್ದು, ಖಾನಾಪುರ ತಾಲೂಕಿನ ಹಲವು ಕಡೆಗಳಲ್ಲಿ ಹಳ್ಳಗಳು ನದಿಂತೆಯಾಗಿವೆ. ಸಾವಿರಾರು ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತ ನೀರಿನಲ್ಲಿ ಕೊಚ್ಚಿಹೋಗಿದ್ದ ಅವಾಂತರ ಸೃಷ್ಠಿಯಾಗಿದೆ. ಇನ್ನೂ ಅನೇಕ ಗ್ರಾಮಗಳ ಸಂಪರ್ಕ ಸಹ ಕಡಿತವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಅತಿಹೆಚ್ಚು ಮಳೆ ಆಗುತ್ತಿದೆ. ಬೆಳಗಾವಿ ತಾಲೂಕಿನಲ್ಲಿ ಬೆಳಗಾವಿ- 73 ಮಿ ಮೀ. ದೇಸೂರು - 135 ಮಿ.ಮೀ, ರಕಸಕೊಪ್ಪ- 117 ಮಿ.ಮೀ, ಉಚ್ಚಗಾವಿ- 111 ಮಿ. ಮೀ, ಸಂತಿ ಬಸ್ತವಾಡ- 111 ಮಿ.ಮೀ ಮಳೆ ದಾಖಲಾಗಿದೆ. ಇನ್ನೂ ಖಾನಾಪುರ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗಿದ್ದು, ಖಾನಪುರ- 180 ಮಿ ಮೀ, ಜಾಂಬೋಟಿ- 180 ಮಿ.ಮೀ, ಕಣಕುಂಬಿ- 296 ಮಿ.ಮೀ,  ಲೋಂಡಾ- 201 ಮಿ,ಮೀ ಮಳೆ ದಾಖಲಾಗಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಅನೇಕ ಹಳ್ಳಗಳು ನದಿಯಾಗಿ ಪರಿವರ್ತನೆ ಆಗಿವೆ. ದೊಡ್ಡ ಪ್ರಮಾಣದಲ್ಲಿ ಜಮೀನುಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ರೈತರು ನಾಟಿ ಮಾಡಿದ್ದ ಭತ್ತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಅವರೊಳ್ಳಿ, ಚಿಕ್ಕದಿನಕೊಪ್ಪ, ಚಿಕ್ಕಮುನವಳ್ಳಿ ಭಾಗದಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಹಾನಿಯಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.



ಬೆಳಗಾವಿ ಸಮೀಪದಲ್ಲಿ ಹರಿಯುವ ಮಾರ್ಕಂಡಯ್ಯ ನದಿ ಸಹ ಉಕ್ಕಿ ಹರಿಯುತ್ತಿದೆ. ನದಿ ಸುತ್ತಮುತ್ತ ಇರುವ ಜಮೀನುಗಳಿಗೆ ನೀರು ನುಗ್ಗಿ ಬೆಳೆಯನ್ನು ನಷ್ಟ ಮಾಡಿದೆ. ಗಾಳಿ, ಮಳೆಗೆ ದೊಡ್ಡ ಮರವೊಂದು ಉರುಳಿ ಬಿದ್ದಿದ್ದು, ಬೆಳಗಾವಿ ತಾಲೂಕಿನ ಸುಳಗಾ- ಬಾಚಿ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.

ಸವದತ್ತಿ ತಾಲೂಕಿನ ಇನಾಮ್ ಹೊಂಗಲ ಬಳಿ ಇರುವ ಸುತುವೆಯ ಮೇಲೆ ನೀರು ಬಂದಿದ್ದು, ಸವದತ್ತಿ ಹಾಗೂ ಧಾರವಾಡ ನಡುವಿನ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಂಡಿದೆ. ಬೆಳಗಾವಿ ತಾಲೂಕಿನ ನಂದಿಹಳ್ಳಿ ಗ್ರಾಮದ ಸುತ್ತಮುತ್ತಲೂ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು. ನಂದಿಹಳ್ಳಿಯಿಂದ ಕೆ ಕೆ ಕೊಪ್ಪ, ಬಡಾಲ್ ಅಂಕಲಗಿ ಹಾಗೂ ಖಾನಾಪುರ ನಡುವಿನ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ : Ayodhya Ram Mandir : ರಾಮ ಮಂದಿರ ನಿರ್ಮಾಣಕ್ಕೆ ಕಲಬುರ್ಗಿಯಿಂದ 9 ಕೆ.ಜಿ. ಬೆಳ್ಳಿ ಇಟ್ಟಿಗೆ ; ಬೃಹತ್ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಸವದತ್ತಿ ತಾಲೂಕಿನ ಮುನವಳ್ಳಿ ಬಳಿ ಮಲಪ್ರಭಾ ನದಿ ನೀರು ಸಂಗ್ರಹಕ್ಕೆ ಇರೋ ನವೀಲುತೀರ್ಥ ಜಲಾಶಯಕ್ಕೆ ಒಳ ಹರಿವು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಜಲಾಶಯಕ್ಕೆ ಇಂದು 6841 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಡ್ಯಾಂ ನಲ್ಲಿ ಸದ್ಯ 18.310 ಟಿಎಂಸಿ ನೀರು ಸಂಗ್ರಹವಾಗಿದ್ದು, 37.731 ಟಿಎಂಸಿ ನೀರು ಸಂಗ್ರಹಣಾ ಸಾಮಾರ್ಥ್ಯವನ್ನು ಡ್ಯಾಂ ಹೊಂದಿದೆ.

ಹುಕ್ಕೇರಿ ತಾಲೂಕಿನಲ್ಲಿ ಘಟಪ್ರಭಾ ನದಿ ನೀರು ಸಂಗ್ರಹಕ್ಕೆ ಇರುವ ಹಿಡಕಲ್ ಜಲಾಶಯಕ್ಕೆ ಸಹ ಒಳ ಹರಿವು ಪ್ರಮಾಣದಲ್ಲಿ ಏರಿಕೆಯಾಗಿದೆ. ಸದ್ಯ ಜಲಾಶಯಕ್ಕೆ 19,829  ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯದಲ್ಲಿ 30 ಟಿಎಂಸಿ ನೀರು ಸಂಗ್ರಹವಾಗಿದೆ. ಹಿಡಕಲ್ ಜಲಾಶಯ 51 ಟಿಎಂಸಿ ನೀರು ಸಂಗ್ರಹಣಾ ಸಾಮಾರ್ಥ್ಯವನ್ನು ಹೊಂದಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆಯಾಗುತ್ತಿದ್ದು ಕೃಷ್ಣ ನದಿ ನೀರಿನ ಒಳ ಹರಿವಿನಲ್ಲಿಯೂ ಏರಿಕೆಯಾಗುತ್ತಿದೆ.
Published by: G Hareeshkumar
First published: August 5, 2020, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading