HOME » NEWS » District » OXYGEN UNIT INSPECTION BY MP GM SIDDESHWAR SHM MAK

Oxygen Crisis: ಜಿಲ್ಲಾಸ್ಪತ್ರೆಯ ಆಕ್ಸಿಜನ್ ಘಟಕ ವೀಕ್ಷಣೆ ಮಾಡಿದ ಸಂಸದ ಜಿ.ಎಮ್. ಸಿದ್ದೇಶ್ವರ್!

ಓಬಿಜಿ ವಿಭಾಗದ ತಜ್ಞರಾದ ಡಾ.ಶುಕ್ಲ ಶೆಟ್ಟಿ  ರವರು ಕೋವಿಡ್ ಎರಡನೇ ಅಲೆಯಲ್ಲಿ ಗರ್ಭಿಣಿಯರೂ ಹೆಚ್ಚಾಗಿ ಕೋವಿಡ್‍ಗೆ ತುತ್ತಾಗುತ್ತಿದ್ದು, ಆಕ್ಸಿಜನ್ ಅವಲಂಬನೆ ಕೂಡ ಹಿಂದಿಗಿಂತ ಹೆಚ್ಚಾಗಿದೆ. ಇದೇ ಕಾರಣಕ್ಕೆ ಮಗು ಗರ್ಭದಲ್ಲಿ ಸಾಯುವ ಸಂಭವ ಇದೆ ಎಂದು ಎಚ್ಚರಿಸಿದ್ದಾರೆ.

news18-kannada
Updated:May 4, 2021, 9:39 AM IST
Oxygen Crisis: ಜಿಲ್ಲಾಸ್ಪತ್ರೆಯ ಆಕ್ಸಿಜನ್ ಘಟಕ ವೀಕ್ಷಣೆ ಮಾಡಿದ ಸಂಸದ ಜಿ.ಎಮ್. ಸಿದ್ದೇಶ್ವರ್!
ಆಕ್ಸಿಜನ್ ಘಟಕ ವೀಕ್ಷಣೆ ಮಾಡುತ್ತಿರುವ ಸಂಸದ ಸಿದ್ದೇಶ್ವರ್.
  • Share this:
ದಾವಣಗೆರೆ: ಸಂಸದ ಸಿದ್ದೇಶ್ವರ್ ಹಾಗೂ  ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ  ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿ ಮೆಡಿಕಲ್ ಆಕ್ಸಿಜನ್ ಘಟಕವನ್ನು ವೈದ್ಯಾಧಿಕಾರಿಗಳ, ತಂತ್ರಜ್ಞರೊಂದಿಗೆ ಪರಿಶೀಲನೆ ನಡೆಸಿದರು. ನಂತರ ವೈದ್ಯರು ಮತ್ತು ಆಕ್ಸಿಜನ್ ಘಟಕ ನಿರ್ವಹಿಸುವ ಸಿಬ್ಬಂದಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಮೆಡಿಕಲ್ ಆಕ್ಸಿಜನ್ ಪ್ಲಾಂಟ್‍ಗೆ ಆಕ್ಸಿಜನ್ ಪೂರೈಕೆ ಮಾಡಲು ಎಂಎಸ್‍ಪಿಎಲ್ ನವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅವರು ಸದರನ್ ಆಕ್ಸಿಜನ್ ಏಜೆನ್ಸಿಯ ಮೂಲಕ ಆಸ್ಪತ್ರೆಗೆ ಸರಬರಾಜು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಆಕ್ಸಿಜನ್ ಕೊರತೆ ಇಲ್ಲ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಈವರೆಗೆ ಒಟ್ಟು 348 ಆಕ್ಸಿಜನ್ ಬೆಡ್ ವ್ಯವಸ್ಥೆ ಇದ್ದು, ಇಷ್ಟು ಬೆಡ್‍ಗೆ ಸಾಕಾಗುವಷ್ಟು ಆಕ್ಸಿಜನ್ ಪೂರೈಕೆ ಆಗುತ್ತಿದೆ.

ಆದರೆ, ಆಕ್ಸಿಜನ್ ಪ್ಲಾಂಟ್ ಮತ್ತು ವಾಲ್ವ್‍ನಲ್ಲಿ ,ಸಣ್ಣಪುಟ್ಟ ತೊಂದರೆಗಳಿದ್ದು ಅದನ್ನು  ಇಂಜಿನಿಯರ್ ಪರಿಶೀಲಿಸಿ ಕೆಲವು ಮಾರ್ಗೋಪಾಯ ತಿಳಿಸಿದ್ದಾರೆ.  ಬಳ್ಳಾರಿ ಅಭಿಯಂತರ ಶಾಂತರಾಜು ರವರು ಪರಿಶೀಲನೆ ಮಾಡಿ ಆಕ್ಸಿಜನ್ ಪ್ಲಾಂಟ್‍ನ ಪೈಪ್‍ಗಳ ಮೇಲೆ ಐಸ್ ರಚನೆಯಾಗುತ್ತಿದ್ದು, ಇದನ್ನು ತಡೆಗಟ್ಟಲು 24*7 ಕೆಲಸ ಮಾಡುವ ಸ್ಪಿಂಕ್ಲರ್  ಅಳವಡಿಕೆ ಮಾಡಬೇಕು. ಆಕ್ಸಿಜನ್ ಸ್ಟೋರೇಜ್ ರೂಂನಲ್ಲಿ ಒಂದು ವಾಲ್ ಬದಲಾವಣೆ ಹಾಗೂ ಬೈಪಾಸ್ ಮಾಡಬೇಕು.

ಜೊತೆಗೆ ಆಕ್ಸಿಜನ್ ಟ್ಯಾಂಕ್‍ಗೆ ಜಿಪಿಎಸ್ ಅಳವಡಿಸುವಂತೆ ತಿಳಿಸಿದ್ದಾರೆ. ಇದು ಗ್ಯಾಸ್ ಲೆವೆಲ್ ಕಡಿಮೆ ಆದಾಗ ಮ್ಯಾನ್ ಹೋಲ್ ಅಲಾರಾಂ  ಮಾಡುವುದರಿಂದ ಆಕ್ಸಿಜನ್ ಕೊರತೆಯಾಗದಂತೆ ಎಚ್ಚರಿಸುತ್ತದೆ ಎಂದರು. ಜಿಲ್ಲಾಧಿಕಾರಿಗಳು, ಆಕ್ಸಿಜನ್ ಘಟಕ ನಿರ್ವಹಿಸುವ ಅಧಿಕಾರಿ  ಹಾಗೂ ಸಿಬ್ಬಂದಿ ಇನ್ನು ಮೂರು-ನಾಲ್ಕು ದಿನಗಳ ಒಳಗೆ ಅಭಿಯಂತರರು ತಿಳಿಸಿರುವಂತಹ ಸೂಚನೆ ಪ್ರಕಾರ ಬದಲಾವಣೆ ಮಾಡಬೇಕೆಂದು ಸೂಚನೆ ನೀಡಿದರು.

ಗರ್ಭಿಣಿಯರಿಗೆ ಪ್ರತ್ಯೇಕ ಆಕ್ಸಿಜನ್ ವಾರ್ಡ್:

ಓಬಿಜಿ ವಿಭಾಗದ ತಜ್ಞರಾದ ಡಾ.ಶುಕ್ಲ ಶೆಟ್ಟಿ  ರವರು ಕೋವಿಡ್ ಎರಡನೇ ಅಲೆಯಲ್ಲಿ ಗರ್ಭಿಣಿಯರೂ ಹೆಚ್ಚಾಗಿ ಕೋವಿಡ್‍ಗೆ ತುತ್ತಾಗುತ್ತಿದ್ದು, ಆಕ್ಸಿಜನ್ ಅವಲಂಬನೆ ಕೂಡ ಹಿಂದಿಗಿಂತ ಹೆಚ್ಚಾಗಿದೆ. ಇದೇ ಕಾರಣಕ್ಕೆ ಮಗು ಗರ್ಭದಲ್ಲಿ ಸಾಯುವ ಸಂಭವ ಕೂಡ ಹೆಚ್ಚು ಇದ್ದು, 10 ಬೆಡ್‍ಗಳ ಪ್ರತ್ಯೇಕ ಆಕ್ಸಿಜನ್ ವಾರ್ಡ್‍ಗೆ ಅವಕಾಶ ಮಾಡಿಕೊಡ ಬೇಕೆಂದು ಮನವಿ ಮಾಡಿದ ಅವರು ವೈರಾಣು ರೂಪಾಂತರ ಪಡೆದ ಹಿನ್ನೆಲೆ ಗರ್ಭಿಣಿಯರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕೆಂಬ ಬಗ್ಗೆ ನಿರ್ಧರಿಸಲು ವೈದ್ಯರ ಒಂದು ಪ್ಯಾನೆಲ್ ರಚಿಸುವಂತೆ ಕೋರಿದರು.

ಅಲ್ಲದೇ ಗರ್ಭಿಣಿಯರು ನಿಯಮಿತ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಬರುವುದು ಬೇಡ. ಅತ್ಯಂತ ಕ್ಷಿಪ್ರವಾಗಿ ಸೋಂಕು ತಗುಲುವ ಸಂಭವ ಇರುವುದರಿಂದ ಪಿಹೆಚ್‍ಸಿ, ಹೆರಿಗೆ ಆಸ್ಪತ್ರೆ ಅಥವಾ ಸ್ಥಳೀಯವಾಗಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಗರ್ಭಿಣಿಯರು ಅನಗತ್ಯವಾಗಿ ಜಿಲ್ಲಾಸ್ಪತ್ರೆಗೆ ಬರುವುದು ಬೇಡ :ಗರ್ಭಿಣಿಯರು ನಿಯಮಿತ ಚೆಕ್‍ಅಪ್‍ಗೆಂದು 15 ದಿನಗಳು ಅಥವಾ ತಿಂಗಳಿಗೊಮ್ಮೆ ಜಿಲ್ಲಾಸ್ಪತ್ರೆಗೆ ಬರುವುದು ಬೇಡ. ಇಲ್ಲಿ ಸೋಂಕು ತಗುಲುವ ಸಂಭವ ಹೆಚ್ಚಿದ್ದು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಇತರೆ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಇದನ್ನೂ ಓದಿ: Covid Death: ಚಾಮರಾಜನಗರದಲ್ಲಿ ನಡೆದ ಕೋವಿಡ್ ಸಾವುಗಳು ಸರಕಾರಿ ಪ್ರಾಯೋಜಿತ ಕೊಲೆ : ಪಾಪ್ಯುಲರ್ ಫ್ರಂಟ್ ಆರೋಪ

ಸಿಟಿ ಸ್ಕ್ಯಾನ್‍ಗೆ ಹೆಚ್ಚು ದರ ಪಡೆದರೆ ಕ್ರಮ:

ನಂತರ ಸರ್ಕಾರಿ ಮತ್ತು ಖಾಸಗಿ ಸಿಟಿ ಸ್ಕ್ಯಾನ್ ಮಾಡುವ ತಜ್ಞರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಇತ್ತೀಚೆಗೆ ಸಿಟಿ ಸ್ಕ್ಯಾನ್ ಮೂಲಕ ರೂಪಾಂತರಿ ಕೊರೊನಾ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಟಿ ಸ್ಕ್ಯಾನ್ ಸೆಂಟರ್‍ಗಳಲ್ಲಿ ಸರ್ಕಾರಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆಂಬ ದೂರುಗಳು ಬಂದಿವೆ. ಆದ ಕಾರಣ ಯಾವುದೇ ಸ್ಕ್ಯಾನ್ ಸೆಂಟರ್‍ನವರು ನಿಗದಿತ ದರಕ್ಕಿಂತ ಹೆಚ್ಚಿಗೆ ಪಡೆಯಬಾರದು. ಬೋರ್ಡ್‍ನಲ್ಲಿ ದರದ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು.

ಮಾನವೀಯ ದೃಷ್ಟಿಯಿಂದ ರೋಗಿಗಳ ಬಳಿ ಹೆಚ್ಚಿಗೆ ದರ ಪಡೆಯಬಾರದೆಂದು ನಾನು ಕೈಮುಗಿದು ಬೇಡುತ್ತೇನೆ. ಇದಕ್ಕೂ ಮೀರಿ ಹೆಚ್ಚಿಗೆ ಹಣ ಪಡೆಯುವುದು ಗಮನಕ್ಕೆ ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವರದಿ: ಸಂಜಯ್ ಎ.ಪಿ ಕುಂದುವಾಡ
Published by: MAshok Kumar
First published: May 4, 2021, 7:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories