ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯವರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಗುರುವಾರ ಪುತ್ತೂರಿನ ಕೋವಿಡ್ ಸ್ಥಿತಿಗತಿ ಮತ್ತು ಭವಿಷ್ಯದ ಮುಂಜಾಗರೂಕತಾ ವ್ಯವಸ್ಥೆಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈಗಾಗಲೇ ಗೇಲ್ ಕಂಪನಿಯವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಮುಂದೆ ಬಂದಿದ್ದರು. ಈ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಪ್ರಸ್ತುತ ಕ್ಯಾಂಪ್ಕೋ ಅಧ್ಯಕ್ಷರು ಸಂಪರ್ಕಿಸಿ, ಕ್ಯಾಂಪ್ಕೋ ವತಿಯಿಂದ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ನಾವು ಒಪ್ಪಿದ್ದೇವೆ ಎಂದು ತಿಳಿಸಿದರು.
ಎರಡು ಮೂರು ದಿನಗಳಲ್ಲಿ ಕೆಲಸ ಆರಂಭವಾಗುವ ಸಾಧ್ಯತೆ ಇದೆ. ಆಸ್ಪತ್ರೆಯ ವಠಾರದಲ್ಲೇ ಘಟಕ ನಿರ್ಮಾಣಗೊಂಡು ಅಲ್ಲಿಂದ ಆಸ್ಪತ್ರೆಯ ಎಲ್ಲ ಬೆಡ್ಗಳಿಗೆ ಪೈಪ್ಲೈನ್ ಕಲ್ಪಿಸಲಾಗುತ್ತದೆ. ಇಲ್ಲಿನ ಎಲ್ಲ ಬೆಡ್ಗಳನ್ನು ತುರ್ತು ಸಂದರ್ಭದಲ್ಲೂ ಯಾರಿಗೂ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಪ್ರಸ್ತುತ ಇಲ್ಲಿ ಆಕ್ಸಿಜನ್ ಸಂಪರ್ಕ ಹೊಂದಿರುವ ಬೆಡ್ಗಳು ದಿನದ 24 ಗಂಟೆಯೂ ಬಳಕೆಯಾದರೆ ದಿನವೊಂದಕ್ಕೆ 170 ಸಿಲಿಂಡರ್ಗಳು ಬೇಕಾಗಬಹುದು ಎಂದು ಮಾಹಿತಿ ನೀಡಿದರು.
ಉಪ್ಪಿನಂಗಡಿಯಲ್ಲಿ 30 ಬೆಡ್
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಈಗ ಕೋವಿಡ್ ಚಿಕಿತ್ಸೆ ನಡೆಯುತ್ತಿದೆ. ಅಗತ್ಯ ಬಿದ್ದರೆ ಉಪ್ಪಿನಂಗಡಿಯ ಹೊಸ ಸಮುದಾಯ ಆಸ್ಪತ್ರೆ ಕಟ್ಟಡದಲ್ಲಿ 30 ಬೆಡ್ ಸಿದ್ಧವಿದೆ. ಇದಲ್ಲದೆ ಪುತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಸಜ್ಜುಗೊಳಿಸಿದ್ದು, 30 ಬೆಡ್ಗಳು ಇವೆ. ಇದಲ್ಲದೆ ಅಗತ್ಯ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು.
ಇದನ್ನು ಓದಿ: Coronavirus | ಕೊರೋನಾ ಪರಿಸ್ಥಿತಿ ಪರಾಮರ್ಶೆ ನಡೆಸಿದ ಪ್ರಧಾನಿ ಮೋದಿ
ಪುತ್ತೂರು ನಗರದಲ್ಲಿರುವ ಭಿಕ್ಷಕರು, ಅಲೆಮಾರಿಗಳಿಗೆ ನಗರದ ನೆಲ್ಲಿಕಟ್ಟೆ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಗೆ ಆಹಾರ ಇತ್ಯಾದಿ ನೀಡಲಾಗುತ್ತಿದೆ. ಇದಲ್ಲದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಮನೋರಂಜನಾ ವಿಭಾಗಗಳನ್ನು ತೆರೆದು ನಂತರ ಇಲ್ಲಿಂದ ನಿರ್ಗಮಿಸಲಾಗದೆ ಬಾಕಿಯಾಗಿರುವ ಹೊರ ಜಿಲ್ಲೆ, ಹೊರ ರಾಜ್ಯಗಳ ಕಾರ್ಮಿಕರಿಗೆ ಆಹಾರ ಮತ್ತು ಇತರ ವ್ಯವಸ್ಥೆ ಮಾಡಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ