HOME » NEWS » District » OXYGEN CRISIS AGAIN IN KALABURGI DISTRICT FOUR CORONA PATIENT DIED IN AFZALPUR TALUK HOSPITAL SAKLB MAK

Oxygen Crisis: ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ಆಕ್ಸಿಜನ್ ಕೊರತೆ; ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ನಾಲ್ವರ ಸಾವು

ಆಕ್ಸಿಜನ್ ಕೊರತೆ ಕಾಣಿಸಿಕೊಂಡ ನಂತರ ಕೆಲವರು ಕೋವಿಡ್ ಸೋಂಕಿತರನ್ನು ಕಾರಿನಲ್ಲಿ ಕೂಡಿಸಿಕೊಂಡು ಗಾಳಿ ಬೀಸೋ ಪ್ರಯತ್ನ ಮಾಡಿದರು. ತಮ್ಮ ತಮ್ಮ ವಾಹನಗಳಲ್ಲಿ ಗಾಳಿ ಬೀಸುತ್ತಾ, ಬೇರೆಡೆಗೆ ಸ್ಥಳಾಂತರಿಸೋ ಪ್ರಯತ್ನವನ್ನು ಕೆಲವರು ಮಾಡಿದರು.

news18-kannada
Updated:May 4, 2021, 2:28 PM IST
Oxygen Crisis: ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ಆಕ್ಸಿಜನ್ ಕೊರತೆ; ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ನಾಲ್ವರ ಸಾವು
ಅಫಜಲಪುರ ತಾಲೂಕು ಆಸ್ಪತ್ರೆಯಿಂದ ಮೃತ ದೇಹವನ್ನು ಸಾಗಿಸುತ್ತಿರುವುದು.
  • Share this:
ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೊಂದು ಆಕ್ಸಿಜನ್ ದುರ್ಘಟನೆ ಸಂಭವಿಸಿದೆ. ಆಕ್ಸೀಜನ್ ಕೊರತೆಯಿಂದ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಕೋವಿಡ್ ಸೋಂಕಿತರು ಅಸುನೀಗಿದ್ದಾರೆ. ಅಫಜಲಪುರ ತಾಲೂಕಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದೆ. ಅಫಜಲಪುರ ತಾಲೂಕ ಆಸ್ಪತ್ರೆಯಲ್ಲಿ ಒಟ್ಟು 32 ಸೋಂಕುತರನ್ನು ತೀವ್ರ ನಿಗಾದಲ್ಲಿಟ್ಟು, ಆಕ್ಸಿಜನ್ ನೀಡಲಾಗುತ್ತಿತ್ತು. ಆದರೆ, ಮಧ್ಯರಾತ್ರಿಯ ನಂತರ ಆಸ್ಪತ್ರೆಯಲ್ಲಿನ ಆಕ್ಸಿಜನ್ ಖಾಲಿಯಾಗಿದೆ ಎನ್ನಲಾಗಿದೆ. ಪರಿಣಾಮ ನಿನ್ನೆ ರಾತ್ರಿಯಿಂದ ಅಫಜಲಪುರ ತಾಲೂಕು‌ ಆಸ್ಪತ್ರೆಯಲ್ಲಿ ನಾಲ್ವರು ಕೋವಿಡ್ ಸೋಂಕಿತರು ಅಸುನೀಗಿದ್ದಾರೆ.

ಆಕ್ಸಿಜನ್ ಮೇಲೆ ಅವಲಂಬಿತರಾದವರಿಗೂ 7 ಗಂಟೆಯಿಂದ ಆಕ್ಸಿಜನ್ ಸರಬರಾಜಿನಲ್ಲಿ ಏರುಪೇರಾಗಿದೆ. ಕ್ಷಣ ಕ್ಷಣಕ್ಕೆ ಕೋವಿಡ್ ಸೋಂಕಿತರ ಸ್ಥಿತಿ ಗಂಭೀವಾಗಲಾರಂಭಿಸಿದೆ. ಡಿಸ್ಚಾರ್ಜ್ ಮಾಡಿಕೊಂಡು ಬೇರೆ ಕಡೆ ಹೋಗೋಣ ಅಂದ್ರೆ ಬೇರೆ ಕಡೆಯೂ ಆಕ್ಸಿಜನ್ ಬೆಡ್ ಖಾಲಿ ಇಲ್ಲದಿರೋಡು ರೋಗಿಗಳ ಸಂಬಂಧಿಕರನ್ನು ಕಂಗಾಲಾಗುವಂತೆ ಮಾಡಿದೆ.

ಕೋವಿಡ್ ಸೋಂಕಿತರು ಮತ್ತು ಅವರ ಸಂಬಂಧಿಕರ ಗೋಳಾಟ ಕೇಳೋರೆ ಇಲ್ಲದಂತಾಗಿದೆ.

ಆಕ್ಸಿಜನ್ ಕೊರತೆ ಕಾಣಿಸಿಕೊಂಡ ನಂತರ ಕೆಲವರು ಕೋವಿಡ್ ಸೋಂಕಿತರನ್ನು ಕಾರಿನಲ್ಲಿ ಕೂಡಿಸಿಕೊಂಡು ಗಾಳಿ ಬೀಸೋ ಪ್ರಯತ್ನ ಮಾಡಿದರು. ತಮ್ಮ ತಮ್ಮ ವಾಹನಗಳಲ್ಲಿ ಗಾಳಿ ಬೀಸುತ್ತಾ, ಬೇರೆಡೆಗೆ ಸ್ಥಳಾಂತರಿಸೋ ಪ್ರಯತ್ನವನ್ನು ಕೆಲವರು ಮಾಡಿದರು.

ಅಫಜಲಪುರ ತಾಲುಕು ಆಸ್ಪತ್ರೆ ಎದುರು ಕೋವಿಡ್ ಸೋಂಕಿತರ ಕಡೆಯವರ ಆಕ್ರಂದನದ ಮಾಹಿತಿ ಗಮನಕ್ಕೆ ಬರುತ್ತಿದ್ದಂತೆಯೇ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಅಫಜಲಪುರ ತಾಲೂಕು ಆಸ್ಪತ್ರೆಗೆ ತಾತ್ಕಾಲಿಕ ಆಕ್ಸೀಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಲಬುರ್ಗಿಯಿಂದ ಅಫಜಲಪುರ ಸಾರ್ವಜನಿಕ ಆಸ್ಪತ್ರೆಗೆ ಸಿಲೆಂಡರ್ ಆಕ್ಸಿಜನ್ ಸಿಲಿಂಡರ್ ರವಾನೆಯಾಗಿದೆ.

ಸದ್ಯಆಸ್ಪತ್ರೆಯಲ್ಲಿ ಕೋರೋನಾ ರೋಗಿಗಳಿಗೆ ಆಕ್ಸಿಜಿನ್ ಹಚ್ಚಿದ್ದು, ಕೊರೋನಾ ಸೋಂಕಿತರು ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ. ಆದರೆ ತಾಲೂಕು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಕೋವಿಡ್ ಸೋಂಕಿತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿತ್ಯ ಮೂರು - ನಾಲ್ಕು ತಾಸು ಮಾತ್ರ ಆಕ್ಸೀಜನ್ ಲಭ್ಯತೆ ಇದೆ. ಉಳಿದ ಸಮಯದಲ್ಲಿ ಸಮರ್ಪಕವಾಗಿ ಆಕ್ಸೀಜನ್ ಪೂರೈಸುತ್ತಿಲ್ಲ. ಆಕ್ಸೀಜನ್ ಕೊರತೆ ಇದ್ದರೂ ತರಿಸಿಕೊಂಡು ಸರಿಪಡಿಸೋ ಕೆಲಸ ನಡೆದಿಲ್ಲ. ಇದರ ಪರಿಣಾಮ ಕೋವಿಡ್ ಸೋಂಕಿತರು ಆಕ್ಸೀಜನ್ ಕೊರತೆಯಿಂದ ಸಾವನ್ನಪ್ಪಿದ್ದು, ಈಗಲಾದ್ರೂ ಎಚ್ಚೆತ್ತುಕೊಂಡು, ಸಮರ್ಪಕ ಆಕ್ಸೀಜನ್ ವ್ಯವಸ್ಥೆ ಮಾಡಬೇಕು. ರೋಗಿಗಳ ಜೊತೆ ಚೆಲ್ಲವಾಟ ಆಡೋದನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ;

ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ಕೆ.ಬಿ.ಎನ್. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಘಟನೆ ಆಗಿತ್ತು. ಇದೀಗ ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ಮರುಕಳಿಸಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಎಲ್ಲಿಯೂ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: IPL 2021: ಕೊರೋನಾ ಭೀತಿಯಿಂದ ಐಪಿಎಲ್​ ಪಂದ್ಯಾವಳಿ ಮುಂದೂಡಿದ ಬಿಸಿಸಿಐ

ಹೀಗಿರುವಾಗ ಚಿಕಿತ್ಸೆಗಾಗಿ ಬಡವರು ನೆಚ್ಚಿಕೊಂಡ ಸರ್ಕಾರಿ ಆಸ್ಪತ್ರೆಯಲ್ಲಿಯೇ ಈ ರೀತಿಯ ಘಟನೆ ನಡೆದಿದೆ.ಕಲಬುರ್ಗಿ ಜಿಲ್ಲೆಯಲ್ಲಿಯೇ ಬೇರೆ ಬೇರೆ ಕಡೆ ಆಕ್ಸೀಜನ್ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಇಲ್ಲಿನ ಆಕ್ಸೀಜನ್ ನ್ನು ಮಹಾರಾಷ್ಟ್ರ ಮತ್ತಿತರ ಕಡೆ ಸಾಗಿಸಲಾಗುತ್ತಿದೆ. ಜಿಲ್ಲೆಗೆ ಸಾಕಷ್ಟು ಅವಶ್ಯಕತೆ ಇದ್ದರೂ ಇಲ್ಲಿನ ಆಕ್ಸೀಜನ್ ಬೇರೆ ಕಡೆ ಮಾರಿಕೊಳ್ತಿರೋದ್ರಿಂದಾಗಿ ಈ ರೀತಿಯ ಸಮಸ್ಯೆಗಳಾಗುತ್ತಿವೆ.

ಕೋವಿಡ್ ನಿರ್ವಹಣೆಯ ಸಂಬಂಧ ಶಾಸಕರ ಸಭೆ ಕರೆಯುವಂತೆ ಪದೇ ಪದೇ ಕೋರಿಕೊಂಡರು ಯಾರೂ ಅದಕ್ಕೆ ಸ್ಪಂದಿಸ್ತಿಲ್ಲ. ರಾಜ್ಯ ಸರ್ಕಾರ ಬೇಕಾಬಿಟ್ಟಿ ನಿರ್ವಹಣೆ ಮಾಡುತ್ತಿರೋದರಿಂದಾಗಿ ಸಾಮಾನ್ಯ ರೋಗಿಗಳು ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by: MAshok Kumar
First published: May 4, 2021, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories