ಕೊರೋನಾ ಆತಂಕದ ಮಧ್ಯೆಯೂ ಮಹಿಳಾ ವಿವಿಗೆ ನಿರೀಕ್ಷೆಗೂ ಮೀರಿ ವಿದ್ಯಾರ್ಥಿನಿಯರ ಪ್ರವೇಶ

ರಾಜ್ಯ ಸರಕಾರದ ಮಾರ್ಗಸೂಚಿ ಪ್ರಕಾರ ವಿಶ್ವವಿದ್ಯಾಲಯದಲ್ಲಿ ತರಗತಿಗಳು ಆರಂಭವಾಗಿದ್ದು, ಈಗ ಖುದ್ದಾಗಿ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿನಿಯರು ಉತ್ಸುಕರಾಗಿದ್ದಾರೆ. ವಿವಿಯ ಎಲ್ಲ 418 ಸಿಬ್ಬಂದಿಯ ಕೊರೋನಾ ಪರೀಕ್ಷೆ ಮಾಡಿಸಲಾಗಿದೆ

ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

  • Share this:
ವಿಜಯಪುರ(ನವೆಂಬರ್. 29): ಡಿಗ್ರಿ ಅಂತಿಮ ಮತ್ತು ಪಿಜಿ ಕಾಲೇಜುಗಳು ಆರಂಭವಾಗಿದ್ದರೂ ವಿದ್ಯಾರ್ಥಿಗಳು ಬರುತ್ತಿಲ್ಲ ಎಂಬ ಕೊರಗಿನ ಮಧ್ಯೆಯೇ ಮಹಿಳಾ ವಿಶ್ವವಿದ್ಯಾಲಯಕ್ಕೆ ನಿರೀಕ್ಷೆಗೂ ಮೀರಿ ಈ ಬಾರಿ ವಿದ್ಯಾರ್ಥಿನಿಯರು ಪ್ರವೇಶ ಗಿಟ್ಟಿಸಿದ್ದಾರೆ. ಈ ಬಾರಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ನಿಗದಿತ ಸೀಟುಗಳಷ್ಟೇ ಅಲ್ಲ, ಪೇಮೆಂಟ್ ಸೀಟುಗಳೂ ಕೂಡ ಖಾಲಿಯಾಗಿದ್ದು, ವಿದ್ಯಾರ್ಥಿನಿಯರು ಕೊರೋನಾತಂಕದ ಮಧ್ಯೆಯೂ ಉನ್ನತ ಶಿಕ್ಷಣ ಕಲಿಯಲು ಆಸಕ್ತಿ ತೋರಿಸಿರುವುದು ಗಮನ ಸೆಳೆದಿದೆ. ವಿಜಯಪುರದ ತೊರವಿಯಲ್ಲಿರುವ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ 32 ಸ್ನಾತಕೋತ್ತರ ಕೋರ್ಸುಗಳಿದ್ದು, 2020-21ನೇ ವರ್ಷಕ್ಕೆ ನಿರೀಕ್ಷೆಗೂ ಮೀರಿ ವಿದ್ಯಾರ್ಥಿನಿಯರು ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಇಲ್ಲಿ ಪ್ರತಿಯೊಂದು ವಿಭಾಗದಲ್ಲಿ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಓದಿದ 20 ಹಾಗೂ ಬೇರೆ ಬೇರೆ ವಿಶ್ವವಿದ್ಯಾಯಲಗಳ ವ್ಯಾಪ್ತಿಯಲ್ಲಿ ಓದಿರುವ 10 ವಿದ್ಯಾರ್ಥಿನಿಯರಿಗೆ ಪ್ರವೇಶ ನಿಗದಿ ಪಡಿಸಲಾಗಿದೆ. ಈ ಎಲ್ಲ ಸೀಟುಗಳು ಭರ್ತಿ ಆಗಿವೆ. ಅಷ್ಟೇ ಅಲ್ಲ, ಪ್ರತಿಯೊಂದು ವಿಭಾಗದಲ್ಲಿ ಮೀಸಲಾಗಿರುವ ತಲಾ ಐದು ಪೇಮೆಂಟ್ ಸೀಟುಗಳೂ ಭರ್ತಿಯಾಗಿರುವುದು ವಿಶ್ವವಿದ್ಯಾಲಯದ ಕುಲಪತಿಗಳು ಸೇರಿದಂತೆ ಎಲ್ಲರಿಗೂ ಸಂತಸ ತಂದಿದೆ.

ಈ ಕುರಿತು ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿರುವ ಮಹಿಳಾ ವಿವಿ ಪ್ರಭಾರಿ ಕುಲಪತಿ ಡಾ. ಓಂಕಾರ ಕಾಕಡೆ, ಕೇವಲ ಕೋರ್ಸ್​ಗಳಿಗೆ ಮಾತ್ರವಲ್ಲ ಹಾಸ್ಟೇಲ್ ಗಳಿಗೂ ವಿದ್ಯಾರ್ಥಿನಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೂಡ ಸೇವೆಗೆ ಬಂದಿದ್ದಾರೆ. ಆಫ್ ಲೈನ್ ತರಗತಿ ಆರಂಭವಾಗಿದ್ದು, ವಿದ್ಯಾರ್ಥಿನಿಯ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೋನಾ ಟೆಸ್ಟ್ ನೆಗೆಟಿವ್ ವರದಿ ಮತ್ತು ಪೋಷಕರಿಂದ ಮುಚ್ಚಳಿಕೆ ಪತ್ರ ತರುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಪಿಜಿ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಆಗಮನ ವಿಳಂಬವಾಗಿದೆ ಎಂದರು.

ಪ್ರಭಾರ ಕುಲಪತಿ ಡಾ. ಓಂಕಾರ ಕಾಕಡೆ


ರಾಜ್ಯ ಸರಕಾರದ ಮಾರ್ಗಸೂಚಿ ಪ್ರಕಾರ ವಿಶ್ವವಿದ್ಯಾಲಯದಲ್ಲಿ ತರಗತಿಗಳು ಆರಂಭವಾಗಿದ್ದು, ಈಗ ಖುದ್ದಾಗಿ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿನಿಯರು ಉತ್ಸುಕರಾಗಿದ್ದಾರೆ. ವಿವಿಯ ಎಲ್ಲ 418 ಸಿಬ್ಬಂದಿಯ ಕೊರೋನಾ ಪರೀಕ್ಷೆ ಮಾಡಿಸಲಾಗಿದೆ. ಪಿಜಿ ಮೊದಲ ಸೆಮಿಸ್ಟರ್ ಪ್ರವೇಶ ಪ್ರಕ್ರಿಯೆ ಬಹುತೇಕ ಮುಕ್ತಾಯವಾಗಿದ್ದು, ಶೀಘ್ರದಲ್ಲಿ ಮೊದಲ ಸೆಮಿಸ್ಟರ್ ಆಫ್ ಲೈನ್ ತರಗತಿಗಳು ಆರಂಭವಾಗಲಿವೆ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಓಂಕಾರ ಕಾಕಡೆ ತಿಳಿಸಿದ್ದಾರೆ.

ಈ ಮಧ್ಯೆ ಪ್ರಥಮ ಸೆಮಿಸ್ಟರ್ ಗೆ ಪ್ರವೇಶ ಪಡೆದಿರುವ ಸಸ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಾದ ನೇಹಾ ಗು. ಚೌಗುಲೆ, ಶಾಂಭವಿ ಭೂಶೆಟ್ಟಿ, ಅಶ್ವಿನಿ ಉಪ್ಪಾರ, ತೇಜಶ್ವಿನಿ ಬಸವಪ್ರಭು, ಪ್ರೇಮಾ ಹರಿಜನ ಆಫ್ ಲೈನ್ ತರಗತಿಗಳು ಯಾವಾಗ ಆರಂಭವಾಗುತ್ತವೆ ಎಂದು ತರಗತಿಗಳಿಗೆ ಹಾಜರಾಗಲು ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ : ಮರಾಠ ಸಮಾಜಕ್ಕೆ 2ಎ ಮೀಸಲಾತಿ‌ ನೀಡದಿದ್ದರೆ ಚುನಾವಣೆ ಬಹಿಷ್ಕಾರ: ಶಾಸಕಿ ಅಂಜಲಿ ನಿಂಬಾಳ್ಕರ್​

ಬಹುತೇಕ ತಿಂಗಳುಗಳಿಂದ ಆನ್ ಲೈನ್ ತರಗತಿಗಳಿಗೆ ಹಾಜರಾಗಿರುವ ಇವರಿಗೆ ಈಗ ಆಫ್ ಲೈನ್ ತರಗತಿಗಳು ಹಾಜರಾರದೆ ಸಾಕು. ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ತರಗತಿಗಳಲ್ಲಿ ಕುಳಿತು ಪಾಠ ಕೇಳೇಬೇಕು. ಲೈಬ್ರರಿಗಳಲ್ಲಿ ಕುಳಿತು ಹೊಸ ಹೊಸ ಪುಸ್ತಕಗಳನ್ನು ಓದಬೇಕು ಎಂಬ ಎಂಬ ತುಡಿತದಲ್ಲಿದ್ದಾರೆ.

ಒಟ್ಟಾರೆ, ಈಗ ಡಿಗ್ರಿ ಮುಗಿಸಿ ವಿಜಯಪುರ ಮಹಿಳಾ ವಿಶ್ವವಿದ್ಯಾಯಲದಲ್ಲಿ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಅಧ್ಯಯನಕ್ಕೆ ಉತ್ಸುಕರಾಗಿದ್ದಾರೆ.
Published by:G Hareeshkumar
First published: