ಜೀಪ್​ಗಳಲ್ಲಿ ಸಾವಿನ ಸವಾರಿ; ನೇತಾಡಿಕೊಂಡೇ ಸಾಗುವ ಜನರು; ಕಣ್ಮುಚ್ಚಿಕೊಂಡಿರುವ ಕೋಲಾರ ಆಡಳಿತ

ಶ್ರೀನಿವಾಸಪುರದಿಂದ ರಾಯಲಪಾಡು ಮಾರ್ಗದಲ್ಲಿ ದಿನವೂ ಬಹಳ ಜನರು ಅಡ್ಡಾಡುತ್ತಾರೆ. ಆದರೆ, ಸರ್ಕಾರಿ ಬಸ್ ಕೊರತೆ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳು ಜನರನ್ನ ತುಂಬಿತುಳುಕುವ ರೀತಿಯಲ್ಲಿ ಹತ್ತಿಸಿಕೊಂಡು ಓಡಾಡುತ್ತಿವೆ.

ಕೋಲಾರದಲ್ಲಿ ಸಂಚರಿಸುತ್ತಿರುವ ಜೀಪ್

ಕೋಲಾರದಲ್ಲಿ ಸಂಚರಿಸುತ್ತಿರುವ ಜೀಪ್

  • Share this:
ಕೋಲಾರ: ಜಿಲ್ಲೆಯ ಶ್ರೀನಿವಾಸಪುರದಲ್ಲಿ ಪ್ರಯಾಣಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಜೀಪ್‍ಗಳಲ್ಲಿ ನೇತಾಡಿಕೊಂಡು ಪ್ರಯಾಣ ಮಾಡ್ತಿದ್ದಾರೆ. ಈ ಭಯಾನಕ ದೃಶ್ಯಗಳು ನ್ಯೂಸ್ 18 ಕನ್ನಡ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಶ್ರೀನಿವಾಸಪುರ ತಾಲೂಕು ಕಚೇರಿ ಹಾಗು ಶ್ರೀನಿವಾಸಪುರ ಪೊಲೀಸ್ ಠಾಣೆ ಎದುರೇ ಖಾಸಗಿ ಜೀಪ್ ಸ್ಟಾಂಡ್ ಇದ್ದು, ಶ್ರೀನಿವಾಸಪುರ ಪಟ್ಟಣದಿಂದಲೇ ಜನರನ್ನ ತುಂಬಿಸಿಕೊಂಡು ಆಂದ್ರದ ಜೀಪ್‍ಗಳು ರಾಜಾರೋಷವಾಗಿ ಓಡಾಡುತ್ತಿವೆ. ವೈಟ್ ಬೋರ್ಡ್ ಸಂಖ್ಯೆಯಿರೊ ಜೀಪ್‍ಗಳಲ್ಲಿ ಪ್ರಯಾಣಿಕರು ಸಂಚರಿಸಲು ಅನುಮತಿ ಇಲ್ಲದಿದ್ದರೂ ಸಂಬಂಧಪಟ್ಟ ಆರ್.ಟಿ.ಒ. ಇಲಾಖೆಯ ಅಧಿಕಾರಿಗಳು ಮಾತ್ರ ಕುರುಡರಂತೆ ವರ್ತಿಸುತ್ತಿದ್ದಾರೆ. ನಗರದಲ್ಲೆ ಟ್ರಾಫಿಕ್ ನಿಯಮಗಳು ಲೆಕ್ಕಕ್ಕೆ ಇಲ್ಲದಿದ್ದರೂ ಸ್ಥಳೀಯ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಶ್ರೀನಿವಾಸಪುರ ಪಟ್ಟಣದಿಂದ ಲಕ್ಷ್ಮೀಪುರ, ಮುದಿಮಡುಗು, ಗೌನಿಪಲ್ಲಿ, ರಾಯಲ್ಪಾಡು ಮಾರ್ಗದಲ್ಲಿ ಸಿಗುವ ಕೆಲ ಗ್ರಾಮಗಳಿಗೆ ನಿತ್ಯ ಹೋಗಿ ಬರಲು ಇಲ್ಲಿನ ಬಡ ಜನರು ಆಂಧ್ರದ ಜೀಪ್​ಗಳು ಹಾಗು ಮೂರು ಚಕ್ರದ ಆಟೋಗಳನ್ನೆ ಅವಲಂಬಿಸಿದ್ದಾರೆ. ತೆರೆದ ವಾಹನಗಳಂತಿರೊ ಜೀಪ್‍ಗಳಲ್ಲಿ ಹಾಗು ಪ್ಯಾಸೆಂಜರ್ ಗಾಡಿಗಳಲ್ಲಿ ಪ್ರಾಣವನ್ನ ಲೆಕ್ಕಿಸದೆ ಜೀಪಿನ ಹಿಂಬಾಗಿಲು ಹಾಗು ಪುಟ್ ರೆಸ್ಟ್ ಗಳ ಕಾಲನ್ನಿಟ್ಟು, ಲಗೇಜ್ ಸ್ಟಾಂಡ್‍ಗಳ ಮೇಲೆ ಕೈಯನ್ನಿಡಿದು ಅಪಾಯಕಾರಿ ರೀತಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ.

ಇಲ್ಲಿ ಸಂಚರಿಸುವ ಜೀಪ್‍ಗಳಲ್ಲಿ ಕರ್ನಾಟಕ ರಿಜಿಸ್ಟ್ರೇಶ‌ನ್ ಇರುವ ಸಂಖ್ಯೆಯ ಜೀಪ್​ಗಳು ಇವೆಯಾದರೂ ಆಂಧ್ರದ ಜೀಪ್​ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿವೆ. ಪ್ರತಿ ವಾಹನದಲ್ಲೂ 12 ಕ್ಕೂ ಹೆಚ್ಚು ಜನರನ್ನ ಗಾಡಿಯ ಒಳಗೆ ತುಂಬಿಸಿಕೊಳ್ಳಲಾಗುತ್ತದೆ. ಅದೂ ಸಾಲದು ಎಂಬಂತೆ ವಾಹನಗಳ ಹಿಂಭಾಗ ಪ್ರಯಾಣಿಕರು ನಿಲ್ಲಲು ಅವಕಾಶ ಮಾಡಿಕೊಡ್ತಿದ್ದಾರೆ. ವೃದ್ದರು, ವಯಸ್ಕರು ಹಿಂಬಾಗಿಲಿನಲ್ಲಿ ನಿಂತು ಪ್ರಯಾಣ ಮಾಡುವ ದೃಶ್ಯಗಳನ್ನು ಗಮನಿಸಿದರೆ, ಎಂತಹವರ ಎದೆಯೂ ಒಮ್ಮೆ ಜಲ್ ಎನ್ನಿಸುತ್ತೆ. ಅಕಸ್ಮಾತ್ ಅಪಘಾತಗಳು ಸಂಭವಿಸಿದರೆ ಯಾರು ಹೊಣೆ ಎನ್ನುವ ಆತಂಕದ ಪ್ರಶ್ನೆ ಕಾಡುತ್ತಿದೆ.

ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಓಡಾಟ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಶ್ರೀನಿವಾಸಪುರ ಡಿಪೋದಿಂದ ರಾಯಲ್ಪಾಡು ಹಾಗು ಗೌನಿಪಲ್ಲಿ ಮಾರ್ಗದಲ್ಲಿ ಬೆಳಗ್ಗೆ ಸಂಜೆ ಮಾತ್ರ ಎರಡು ಬಸ್‍ಗಳು ಓಡಾಡ್ತಿವೆ. ಉಳಿದ ಸಮಯದಲ್ಲಿ ಜನರು ಖಾಸಗಿ ವಾಹನವನ್ನೇ ಅವಲಂಬಿಸಿದ್ದಾರೆ.

ಇದನ್ನೂ ಓದಿ: School Reopening- ಶಾಲೆ ಓಪನ್ ಮಾಡಿಸಿ ಎಂದು ಪೀಡಿಸುತ್ತಿದ್ದ ಬಹುತೇಕ ಖಾಸಗಿ ಶಾಲೆಗಳೇ ಬಂದ್

ಈ ಬಗ್ಗೆ ಶ್ರೀನಿವಾಸಪುರ ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಪ್ರಶಾಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೊರೋನಾ ಹಿನ್ನೆಲೆ ಪ್ರಯಾಣಿಕರ ಕಡಿಮೆ ಓಡಾಟದಿಂದಾಗಿ ಬಸ್​ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಇಲಾಖೆ ಆದೇಶ ನೀಡಿದಲ್ಲಿ ಹೆಚ್ಚುವರಿ ಬಸ್ ಬಿಡಲು ಕ್ರಮ ಕೈಗೊಳ್ಳಲಾಗುವುದು. ಜೀಪ್‍ಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರನ್ನ ಸಾಗಿಸಲಾಗುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಸಂಬಂಧಪಟ್ಟ ಆರ್.ಟಿ.ಒ. ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶ್ರೀನಿವಾಸಪುರ ಸ್ಥಳೀಯ ಸಂಘಟನೆಗಳ ಹೋರಾಟಗಾರರು, ಶ್ರೀನಿವಾಸಪುರ ಗಡಿ ಗ್ರಾಮಗಳಿಗೆ ಗ್ರಾಮೀಣ ಸಾರಿಗೆ ಸೇವೆ ನೀಡುವಂತೆ ಆಗ್ರಹಿಸಿದ್ದು, ಶ್ರೀನಿವಾಸಪುರ ಪೊಲೀಸರು ಹಾಗು ಆರ್.ಟಿ.ಒ ಇಲಾಖೆಯ ಬೇಜವಾಬ್ದಾರಿಯಿಂದಲೇ ಇಂತಹ ಅಕ್ರಮ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಸ್ 18 ಕನ್ನಡ ವರದಿಗೆ ಪ್ರತಿಕ್ರಿಯೆ ನೀಡಿರುವ ಕೋಲಾರ ಜಿಲ್ಲಾ ಆರ್.ಟಿ.ಒ ಅಧಿಕಾರಿ ಯೋಮಕೇಶಪ್ಪ ಅವರು, ಸ್ಥಳಕ್ಕೆ ಮೋಟಾರ್ ಇನ್ಸ್‌ಪೆಕ್ಟರ್ ಹೋಗುವಂತೆ ಮೆಮೊ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಜೀಪ್ ಗಳಲ್ಲಿ ಪ್ರಯಾಣಿಕರನ್ನ ರವಾನಿಸಲು ಅನುಮತಿ ಇಲ್ಲದಿದ್ದರೂ ಸರ್ಕಾರಿ ಬಸ್ ಗಳ ಅಲಭ್ಯತೆಯನ್ನ ಬಂಡವಾಳ ಮಾಡಿಕೊಂಡಿರೊ ಖಾಸಗಿ ಸಂಚಾರ ವಾಹನಗಳು, ಜನರ ಜೀವನದ ಜೊತೆಗೆ ಚೆಲ್ಲಾಟ ಆಡದಿರಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವರದಿ: ರಘುರಾಜ್
Published by:Vijayasarthy SN
First published: