CoronaVirus: ಕೊಡಗಿನ 80 ಕ್ಕೂ ಹೆಚ್ಚು ಗ್ರಾಮಗಳು ಈಗ ಕೋವಿಡ್-19 ಸೋಂಕು ಮುಕ್ತ!

ಪ್ರತೀ ಐವತ್ತು ಮನೆಗಳಿಗೆ ಒಂದು ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಕೊವಿಡ್ ನಿಯಂತ್ರಿಸಲು ಸರ್ವ ಪ್ರಯತ್ನಗಳನ್ನು ಮಾಡಿದ್ದಾರೆ. ಇನ್ನು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ 38 ಗ್ರಾಮ ಪಂಚಾಯಿತಿಗಳಿದ್ದು, ಅವುಗಳಲ್ಲಿ 10 ಪಂಚಾಯಿತಿಗಳಲ್ಲಿ ಮಾತ್ರವೇ ಕೊವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೊಡಗು : ಕೊವಿಡ್ ಮೊದಲ ಅಲೆಯಲ್ಲಿ ಹಸಿರು ವಲಯದಲ್ಲಿದ್ದ ಕೊಡಗು ಜಿಲ್ಲೆ ಎರಡನೆ ಅಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿದ್ದ ಜಿಲ್ಲೆಯಾಗಿ ಪರಿವರ್ತನೆಯಾಗಿತ್ತು. ಇದನ್ನು ಗಮನಿಸಿದ್ದ ಜಿಲ್ಲೆಯ ಇಬ್ಬರು ಶಾಸಕರು ಜಿಲ್ಲೆಯನ್ನು ಕೊವಿಡ್ ಮುಕ್ತಗೊಳಿಸಲು ಇನ್ನಿಲ್ಲದ ಸರ್ವ ಪ್ರಯತ್ನ ಮಾಡಿದ್ದರು. ಅದರ ಪರಿಣಾಮ ಇಂದು ಕೊಡಗು ಜಿಲ್ಲೆಯ 80 ಕ್ಕೂ ಹೆಚ್ಚು ಗ್ರಾಮಗಳು ಕೊವಿಡ್ ಮುಕ್ತವಾಗಿವೆ ಎನ್ನೋದು ನಿಜಕ್ಕೂ ಶ್ಲಾಘನೀಯ ವಿಷಯವೇ ಸರಿ. ಹೌದು ಜಿಲ್ಲೆಯಲ್ಲಿ ಎರಡು ವಾರಗಳ ಹಿಂದಿನ ಸ್ಥಿತಿಯನ್ನು ಗಮನಿಸಿದರೆ ನಿತ್ಯ ಕನಿಷ್ಠ 500 ರಿಂದ 600 ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಇದು ಕೊಡಗು ಜಿಲ್ಲೆಯಲ್ಲಿರುವ 6 ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ತೀವ್ರ ಆತಂಕದ ವಿಷಯವೇ ಆಗಿತ್ತು.

ಆದರೀಗ ಜಿಲ್ಲೆಯಲ್ಲಿ ನಿತ್ಯ 180 ರಿಂದ 190 ಕೊವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ನಿತ್ಯ ಕೇವಲ 40 ರಿಂದ 50 ಪ್ರಕರಣಗಳು ಮಾತ್ರವೇ ದಾಖಲಾಗುತ್ತಿವೆ. ಆದರೆ ತುಂಬಾ ದೊಡ್ಡ ವ್ಯಾಪ್ತಿ ಹೊಂದಿರುವ ಸೋಮವಾರಪೇಟೆ ತಾಲ್ಲೂಕಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಜಾಸ್ತಿ ಪ್ರಕರಣಗಳು ದಾಖಲಾಗುತ್ತಿವೆ. ಅಂದರೆ ಸೋಮವಾರಪೇಟೆ ಸಾಕಷ್ಟು ಹಳ್ಳಿಗಳಲ್ಲಿ ಮನೆಗಳು ಗುಂಪು ಗುಂಪಾಗಿರುವುದು ಕೂಡ ಹೀಗೆ ಸೋಂಕು ಹೆಚ್ಚು ಹರಡುವುದಕ್ಕೆ ಕಾರಣ ಇರಬಹುದು.

ಆದರೆ ಬರೋಬ್ಬರಿ 37 ಗ್ರಾಮಗಳು ಕೊವಿಡ್ ಮುಕ್ತವಾಗಿವೆ. ಇದಕ್ಕೆ ಆಯಾ ಗ್ರಾಮಗಳಲ್ಲಿ ಇರುವ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯು ನಿರ್ವಹಿಸಿದ ಕೆಲಸಗಳೇ ಕಾರಣ ಎನ್ನೋದು ಶಾಸಕರ ಮಾತು. ಹೌದು ಸೋಮವಾರಪೇಟೆ ತಾಲ್ಲೂಕಿನಲ್ಲಿ ಒಟ್ಟು 51 ಗ್ರಾಮ ಪಂಚಾಯಿತಿ, ಎರಡು ಪಟ್ಟಣ ಪಂಚಾಯಿತಿ ಮತ್ತು ಒಂದು ನಗರಸಭೆ ಇದ್ದು, ಅವುಗಳಲ್ಲಿ 37 ಗ್ರಾಮಗಳು ಕೊವಿಡ್ ಮುಕ್ತವಾಗಿವೆ.

ಹೀಗೆ ಕೊವಿಡ್ ಮುಕ್ತಗೊಳಿಸುವುದಕ್ಕಾಗಿ ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಿರುವ ಶಾಸಕ ಅಪ್ಪಚ್ಚು ರಂಜನ್ ಪ್ರತೀ ವಾರ್ಡಿನ ಸದಸ್ಯರ ನೇತೃತ್ವದಲ್ಲೂ ವಾರ್ಡಿಗೆ ಒಂದು ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಅವುಗಳು ಸರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಿದ್ದಾರೆ.

ಅಂದರೆ ಪ್ರತೀ ಐವತ್ತು ಮನೆಗಳಿಗೆ ಒಂದು ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಕೊವಿಡ್ ನಿಯಂತ್ರಿಸಲು ಸರ್ವ ಪ್ರಯತ್ನಗಳನ್ನು ಮಾಡಿದ್ದಾರೆ. ಇನ್ನು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ 38 ಗ್ರಾಮ ಪಂಚಾಯಿತಿಗಳಿದ್ದು, ಅವುಗಳಲ್ಲಿ 10 ಪಂಚಾಯಿತಿಗಳಲ್ಲಿ ಮಾತ್ರವೇ ಕೊವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಉಳಿದ 28 ಪಂಚಾಯಿತಿಗಳು ಸಂಪೂರ್ಣ ಕೊವಿಡ್ ಮುಕ್ತವಾಗಿವೆ.

ಇದನ್ನೂ ಓದಿ: ಚಿಕ್ಕೋಡಿಯನ್ನು ಕೃಷಿ ಜಿಲ್ಲೆಯಾಗಿ ಘೋಷಿಸಿ: ಸಚಿವ ಬಿ.ಸಿ. ಪಾಟೀಲ್​ಗೆ ಜನ ಪ್ರತಿನಿಧಿಗಳ ಒತ್ತಾಯ

ಹೌದು ವಿರಾಜಪೇಟೆ ತಾಲ್ಲೂಕು ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ ಮನೆಗಳು ತುಂಬಾ ದೂರದೂರಲ್ಲಿದ್ದು, ಸೋಂಕು ಹೆಚ್ಚು ಹರಡದಿರಲು ಅನುಕೂಲವೂ ಆಗಿದೆ. ಜೊತೆಗೆ ಪ್ರತೀ ವಾರ್ಡ್ ಮಟ್ಟಗಳಲ್ಲೂ ಇರುವ ಟಾಸ್ಕ್ ಫೋರ್ಸ್ ಸಮಿತಿಗಳು ತಮ್ಮ ವಾರ್ಡಿನ ಜನರಿಗೆ ಕೊವಿಡ್ ಟೆಸ್ಟ್ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕೊವಿಡ್ ನಿಯಂತ್ರಿಸಲು ಸಾಧ್ಯವಾಗಿದೆ ಎನ್ನುತ್ತಿದ್ದಾರೆ ಶಾಸಕರು.

ಇದನ್ನೂ ಓದಿ: Arvind Kejriwal: ದೆಹಲಿಯಲ್ಲಿ ಮತದಾನ ಕೇಂದ್ರಗಳನ್ನು ಲಸಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಮುಂದಾದ ಕೇಜ್ರಿವಾಲ್ ಸರ್ಕಾರ

ಇದೇ ಸಂದರ್ಭದಲ್ಲಿ ಒಟ್ಟಾರೆ ರಾಜ್ಯದಲ್ಲೂ ಸಹ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಇಳಿಯುತ್ತಲೇ ಇದೆ. ಕಳೆದ ವಾರದ ವರೆಗೆ ಪ್ರತಿ ದಿನ ಕನಿಷ್ಟ 25 ಸಾವಿರಕ್ಕಿಂತ ಅಧಿಕವಿರುತ್ತಿದ್ದ ಕೊರೋನಾ ಸೋಂಕು ಇದೀಗ ಕ್ರಮೇಣ ಇಳಿಮುಖವಾಗುತ್ತಿದೆ. ಆದರೆ, ಸೋಂಕಿತರ ಸಂಖ್ಯೆ ಕಡಿಮೆಯಾದರೂ ಸಹ ಸಾವಿನ ಸಂಖ್ಯೆ ಕಡಿಮೆಯಾಗದಿರುವುದು ಮಾತ್ರ ಜನರ ಆತಂಕಕ್ಕೆ ಕಾರಣವಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: