news18-kannada Updated:May 29, 2020, 12:29 PM IST
ಗೋಕರ್ಣದಲ್ಲಿ ಸಿಲುಕಿದ್ದ ರಷ್ಯನ್ನರು
ಕಾರವಾರ(ಮೇ 29): ಗೋಕರ್ಣದಲ್ಲಿ ಲಾಕ್ಡೌನ್ನಿಂದ ಸಿಲುಕಿಕೊಂಡಿದ್ದ ಮೂವತ್ತಕ್ಕೂ ಹೆಚ್ಚು ರಷ್ಯಾ ಪ್ರಜೆಗಳು ಕೊನೆಗೂ ತವರಿಗೆ ಹೊರಟಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ವೈದ್ಯಕೀಯ ಪರೀಕ್ಷೆ ನಡೆಸಿ ಸೋಂಕು ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡ ಬಳಿಕವಷ್ಟೇ ಗೋವಾ ಮೂಲಕ ಈ ವಿದೇಶಿಗರನ್ನು ಅವರ ದೇಶಕ್ಕೆ ಮರಳಿಸಲಾಗಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರ ಧಾರ್ಮಿಕವಾಗಿ ಎಷ್ಟು ಪ್ರಸಿದ್ದಿ ಪಡೆದಿದೆಯೋ ಅಷ್ಟೆ ದೊಡ್ಡ ಮಟ್ಟದಲ್ಲಿ ಪ್ರವಾಸೋದ್ಯಮದಲ್ಲೂ ಕೂಡ ಗೋಕರ್ಣ ಛಾಪು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಕೇವಲ ದೇಶಿಯ ಪ್ರವಾಸಿಗರಷ್ಟೆ ಅಲ್ಲದೆ ವಿದೇಶಿ ಪ್ರವಾಸಿಗರ ಕಲರವ ಮತ್ತು ಒಡನಾಡ ವರ್ಷದಲ್ಲಿ ಇದ್ದೇ ಇರುತ್ತೆ. ಕಳೆದ ಅಕ್ಟೋಬರ್ನಲ್ಲಿ ಭಾರತ ಪ್ರವಾಸ ಭಾಗವಾಗಿ ಗೋಕರ್ಣಕ್ಕೆ ಬಂದಿದ್ದ ಸಾವಿರಾರು ವಿದೇಶಿ ಪ್ರವಾಸಿಗರು ತಮ್ಮ ಪ್ರವಾಸ ಮುಗಿಸಿ ಗೋಕರ್ಣದಿಂದ ಹೊರಡಲು ಸಿದ್ದರಾಗಿದ್ದಾಗ ಕೊರೋನಾ ಮಹಾಮಾರಿಗೆ ದೇಶವೇ ಲಾಕ್ ಡೌನ್ ಆಗಿ ಎಲ್ಲವೂ ಸ್ತಬ್ದವಾಗಿತ್ತು, ಈಗ ಲಾಕ್ ಡೌನ್ ಸಡಿಲಿಕೆಯಾಗಿದ್ದು ಗೋಕರ್ಣದಲ್ಲಿ ಸಿಲುಕಿಕೊಂಡಿದ್ದ ಎಲ್ಲ ವಿದೇಶಿಗರನ್ನ ಹಂತಹಂತವಾಗಿ ಅವರ ಸ್ವದೇಶ ಕ್ಕೆ ಕಳುಹಿಸುವ ಕಾರ್ಯ ಸರಕಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಕೈಗೊಂಡಿದೆ.
ಇದನ್ನೂ ಓದಿ: Locust Attack: ಮಧ್ಯಪ್ರದೇಶದತ್ತ ಮುಖ ಮಾಡಿದ ಮಿಡತೆ ದಂಡು; ಬೀದರ ಜಿಲ್ಲೆ ರೈತರು ನಿರಾಳ
ಈಗ ಸರಿಸುಮಾರು ಮೂವತ್ತಕ್ಕೂ ಹೆಚ್ಚು ರಷ್ಯಾ ಪ್ರಜೆಗಳನ್ನ ಅವರ ಸ್ವದೇಶಕ್ಕೆ ಕಳುಹಿಸಿಕೊಡಲಾಯಿತು. ಕಳುಹಿಸಿ ಕೊಡುವ ಮೊದಲು ಸರಕಾರದ ಮಾರ್ಗಸೂಚಿಯಂತೆ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಯಿತು. ಎಲ್ಲರ ಆರೋಗ್ಯ ಸ್ಥಿರವಾಗಿದ್ದ ಬಗ್ಗೆ ಆರೋಗ್ಯ ಇಲಾಖೆಯಿಂದ ವರದಿ ಬಂದ ನಂತರವೇ ಅವರಿಗೆ ಹೋಗಲು ಅನುಮತಿ ನೀಡಲಾಯಿತು. ರಷ್ಯನ್ ಪ್ರಜೆಗಳನ್ನು ಮೊದಲು ಗೋವಾಕ್ಕೆ ಬಸ್ ಮೂಲಕ ಕಳುಹಿಸಲಾಯಿತು. ಅವರು ಅಲ್ಲಿಂದ ವಿಮಾನದ ಮೂಲಕ ಸ್ವದೇಶ ತೆರಳಿದರು.
ಇನ್ನು, ಇವರಿಗೆ ಸ್ವದೇಶಕ್ಕೆ ಕಳುಹಿಸುವ ಕಾರ್ಯದಲ್ಲಿ ಪೋಲಿಸ್ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ಶ್ರಮಿಸಿದ್ದರು.
First published:
May 29, 2020, 12:29 PM IST