ಕೆಜಿಎಫ್ ಮತ್ತು ಕೊಡಗಿನಲ್ಲಿ ಕೋಟ್ಯಂತರ ಮೌಲ್ಯದ 194 ಕಿಲೋ ಗಾಂಜಾ ವಶ; ಹಲವರ ಬಂಧನ

ಕೋಲಾರದ ಕೆಜಿಎಫ್​ನಲ್ಲಿ 8 ಮೂಟೆಯಷ್ಟು ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಿದ್ದಾರೆ. ಕೊಡಗಿನ ವಿರಾಜಪೇಟೆಯಲ್ಲೂ ಗಾಂಜಾ ಪತ್ತೆಯಾಗಿದ್ದು ಅಲ್ಲಿನ ಪೊಲೀಸರು ಐವರನ್ನು ಬಂಧಿಸಿದ್ದಾರೆ.

news18-kannada
Updated:September 9, 2020, 8:57 AM IST
ಕೆಜಿಎಫ್ ಮತ್ತು ಕೊಡಗಿನಲ್ಲಿ ಕೋಟ್ಯಂತರ ಮೌಲ್ಯದ 194 ಕಿಲೋ ಗಾಂಜಾ ವಶ; ಹಲವರ ಬಂಧನ
ಕೋಲಾರದ ಕೆಜಿಎಫ್​ನಲ್ಲಿ ಗಾಂಜಾ ವಶಪಡಿಸಿಕೊಂಡ ಪೊಲೀಸರು
  • Share this:
ಕೋಲಾರ/ಕೊಡಗು: ರಾಜ್ಯದಲ್ಲಿ ಡ್ರಗ್ಸ್ ಮಾಪಿಯಾ ಸದ್ದು ಮಾಡುತ್ತಿರುವ ವೇಳೆಯಲ್ಲೇ ಕೋಲಾರದ ಕೆಜಿಎಫ್ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 185 ಕ್ಕೂ ಹೆಚ್ಚು ಕೆಜಿಯಷ್ಟು ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೆಜಿಎಫ್ ನಗರದ ರಾಬರ್ಟ್ಸನ್ ಪೇಟೆ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು ಒಂದೂವರೆ ಕೋಟಿಗೂ ಅಧಿಕ ಮೌಲ್ಯದ 190 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆ 11.30 ರ ವೇಳೆಗೆ ಕೆಜಿಎಫ್ ಎಸ್​ಪಿ ಇಲಕ್ಕಿಯಾ ಕರುಣಾಕರನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೋಲೀಸರು, ಮನೆಯಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಅರೋಪಿ ಜೋಸೆಫ್ ಬಂಧಿಸಿ ಸುಮಾರು 8 ಮೂಟೆ ಗಾಂಜಾ ವಶಕ್ಕೆ ಪಡೆದಿದ್ದಾರೆ. ಮಾರಿಕುಪ್ಪಂ ಪೋಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಗಿರಿ ಲೈನ್​ನ ಮನೆಯೊಂದರಲ್ಲಿ ಗಾಂಜಾ ಪತ್ತೆಯಾಗಿದ್ದು, ಆರೋಪಿ ಜೋಸೆಫ್ ಮನೆಯಲ್ಲೇ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಕೆಜಿಎಫ್​ನಲ್ಲಿ ಪೊಲೀಸರ ಎನ್‍ಕೌಂಟರ್​ಗೆ ಬಲಿಯಾಗಿದ್ದ ರೌಡಿಶೀಟರ್​ವೊಬ್ಬನ ಸಹೋದರ ಈ ಜೋಸೆಫ್ ಎಂದು ಹೇಳಲಾಗಿದೆ. ಆರೋಪಿ ಜೋಸೆಫ್ ಆಂದ್ರ, ತಮಿಳುನಾಡು ಭಾಗದಿಂದ ಗಾಂಜಾ ಶೇಖರಿಸಿ ಕೋಲಾರ ಹಾಗು ಬೆಂಗಳೂರಿಗೆ ರವಾನೆ ಮಾಡುತ್ತಿದ್ದು, ಜೊತೆಗೆ ಕೆಜಿಎಫ್ ನಗರದಲ್ಲೇ ಗಾಂಜಾ ಮಾರಾಟ ಮಾಡುತ್ತ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿರುವ ಆರೋಪವಿದೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದಿರುವ ಕೆಜಿಎಫ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬುಧವಾರ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಸ್ತಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆಂದು ಡಿವೈಎಸ್ಪಿ ಉಮೇಶ್ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಗಾಂಜಾ ಪ್ರಕರಣದಲ್ಲಿ ದೊಡ್ಡ ಮೊತ್ತದ ವಸ್ತು ಪತ್ತೆಯಾಗಿದ್ದು, ಇಷ್ಟು ದಿನ ಆರೋಪಿಗಳು ಪೊಲೀಸರ ಕಣ್ಣುತಪ್ಪಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಹಲವು ಅನುಮಾನ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಕೇವಲ ಸಿನಿಮಾ ರಂಗವನ್ನ ಮಾತ್ರ ಟಾರ್ಗೆಟ್ ಮಾಡಬೇಡಿ -  ಸಂಸದೆ ಸುಮಲತಾ ಮನವಿ

ಕೊಡಗಿನಲ್ಲಿ 3.6 ಕಿಲೋ ಗಾಂಜಾ ವಶ:

ರಾಜ್ಯದಲ್ಲಿ ಡ್ರಗ್ಸ್ ವಿಷಯ ಸದ್ದು ಮಾಡುತ್ತಿರುವಾಗಲೇ ಕೊಡಗಿನ ಪೊಲೀಸರೂ ಅಲರ್ಟ್ ಆಗಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವಿರಾಜಪೇಟೆ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಮುದಾಸಿರ್ ಅಜಮ್ಮದ್, ಕೊಡಗಿನ ಮಹಮ್ಮದ್ ಫಾರೂಕ್, ರಫೀಕ್, ಮನು ಮತ್ತು ಮಹೇಶ್ ಬಂಧಿತ ಆರೋಪಿಗಳು. ಈ ಐವರು ಬಂಧಿತರಿಂದ ಪೊಲೀಸರು ಒಂದು ಲಕ್ಷ ರೂಪಾಯಿ ಮೌಲ್ಯದ 3.361 ಕೆಜಿ  ಗಾಂಜಾ ಮತ್ತು ಗಾಂಜಾ ಮಾರಾಟ ಮಾಡಿ ಇಟ್ಟುಕೊಂಡಿದ್ದ 5 ಸಾವಿರ ರೂ ನಗದ ಹಣವನ್ನು ವಶಪಡಿಸಿಕೊಂಡಿದ್ದಾರೆ.

Virajpet Police arrest Five persons in Ganja case
ವಿರಾಜಪೇಟೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸಿದ ಪೊಲೀಸರು


ವಿರಾಜಪೇಟೆ ಪಟ್ಟಣದ ದಂತ ವೈದ್ಯಕೀಯ ಕಾಲೇಜಿನ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಐವರು ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಚೇಸ್ ಮಾಡಿ ಐವರ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳು ಗಾಂಜಾವನ್ನು ಚಿಕ್ಕಚಿಕ್ಕ ಪ್ಯಾಕ್​ಗಳ ಮೂಲಕ ಬಿಡಿ ಬಿಡಿಯಾಗಿ ಮಾರುತ್ತಿದ್ದರು ಎನ್ನಲಾಗಿದೆ. ಐವರನ್ನು ಬಂಧಿಸಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ವರದಿ:
- ರಘುರಾಜ್, ಕೋಲಾರ
- ರವಿ ಎಸ್ ಹಳ್ಳಿ, ಕೊಡಗು
Published by: Vijayasarthy SN
First published: September 9, 2020, 8:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading