Karnataka Politics: ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆಗೂ ಮುನ್ನವೇ ವಿರೋಧ; '75 ವರ್ಷ ದಾಟಿದ ಕಳಂಕಿತರು ನಮ್ಮ ಪಕ್ಷಕ್ಕೆ ಬೇಕಾ?'

ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧ ಜೋರಾಗಿದೆ. 75 ವರ್ಷ ದಾಟಿದ, ಕಳಂಕಿತವಾಗಿರು ಅವರು ನಮ್ಮ ಪಕ್ಷಕ್ಕೆ ಅನಿವಾರ್ಯವೇ. ಪಕ್ಷಕ್ಕಾಗಿ ದುಡಿದವರಿಗೆ ಯಾವುದೇ ಗೌರವವಿಲ್ಲವೇ ಎಂದು ಮೂಲ ಬಿಜೆಪಿಗರು ಪ್ರಶ್ನಿಸಿದ್ದು, ಜೆ.ಪಿ.ನಡ್ಡಾ ಅವರಿಗೂ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸವರಾಜ ಹೊರಟ್ಟಿ

ಬಸವರಾಜ ಹೊರಟ್ಟಿ

  • Share this:
ಹುಬ್ಬಳ್ಳಿ (ಮಾ.26):  ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಗೂ ಮುನ್ನವೇ ರಾಜಕೀಯ ಚಟುವಟಿಕೆಗಳು (Political Activities) ಬಿರುಸುಗೊಂಡಿವೆ. ಸಭಾಪತಿ ಹೊರಟ್ಟಿ ಸುತ್ತಲೇ ರಾಜಕೀಯ ಚರ್ಚೆಗಳು ಜೋರಾಗಿವೆ. 75 ವರ್ಷ ದಾಟಿದ, ಕಳಂಕಿತ ಎಂಬ ಆರೋಪ ಹೊತ್ತ ವ್ಯಕ್ತಿ ಬಿಜೆಪಿಗೆ ಅನಿವಾರ್ಯವೇ ಎಂದು ಕೆಲ ಬಿಜೆಪಿ  ನಾಯಕರು (Bjp Leaders) ಪ್ರಶ್ನಿಸಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಒಂದೆಡೆ ಕಸರತ್ತು ನಡೆದಿರುವಾಗಲೇ, ಮತ್ತೊಂದೆಡೆ ಬಸವರಾಜ್ ಹೊರಟ್ಟಿ (Basavaraj Horatti) ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಪಾಳಯದಲ್ಲಿ ಹೊರಟ್ಟಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಹೊರಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಕೆಲ ಮುಖಂಡರು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಹೊರಟ್ಟಿ ವಿರುದ್ದ ಆರೋಪಗಳ ಸುರಿಮಳೆಗೈದಿದ್ದಾರೆ. ಹೊರಟ್ಟಿ ಪಕ್ಷ ಸೇರ್ಪಡೆಗೆ ವಿರೋಧಿಸಿ ಬಿಜೆಪಿ ಮುಖಂಡರು ಹತ್ತು ಅಂಶಗಳನ್ನು ಪತ್ರದಲ್ಲಿ ತಿಳಿಸಿದ್ದಾರೆ. ಬಸವರಾಜ್ ಹೊರಟ್ಟಿಗೆ 76 ವರ್ಷ ಆಗಿದೆ, ಪಕ್ಷದ ನಿಯಮದಂತೆ ಇವರಿಗೆ ಟಿಕೆಟ್ ನೀಡಲು ಅವಕಾಶವಿಲ್ಲ ಅನ್ನೋದು ಮುಖ್ಯ ಅಂಶವಾಗಿದೆ.

ಹೊರಟ್ಟಿ ಮೇಲಿದೆ ಹಲವು ಆರೋಪ 

ವಿಧಾನ ಪರಿಷತ್ ಸದಸ್ಯರಾಗಿದ್ದ ವೇಳೆ ಹೊರಟ್ಟಿ ಒಟ್ಟಿಗೆ ಎರಡೆರೆಡು ವೇತನ ಪಡೆದಿದ್ದರೆಂಬ ಆರೋಪ ಮಾಡಲಾಗಿದೆ. ಹೊರಟ್ಟಿ 1980ರಲ್ಲಿ ಪರಿಷತ್ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಆದ್ರೆ 1999 ರವರೆಗೆ ಲ್ಯಾಮಿಂಗ್ಟನ್ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ವೇತನ ಪಡೆದಿದ್ದಾರೆಂದು ದಾಖಲೆ ಸಮೇತ ಪತ್ರ ಕಳುಹಿಸಿದ್ದಾರೆ. ಧಾರವಾಡದಲ್ಲಿ ಎಸ್ ಟಿ ಸಮಾಜಕ್ಕೆ ಸೇರಿದ ಸರ್ವೋದಯ ಶಿಕ್ಷಣ ಸಂಸ್ಥೆ ಆಸ್ತಿ ಕಬಳಿಸಿದ ಆರೋಪ ಶಿಕ್ಷಣ ಸಂಸ್ಥೆ ವಿಚಾರದಲ್ಲಿ ಇವರ ಮೇಲೆ ಎಫ್ ಐ ಆರ್ ದಾಖಲಾಗಿರೋದನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಹಿಂದುತ್ವದ ವಿರುದ್ಧದ ಚಳವಳಿಯಲ್ಲಿ ಕಾಂಗ್ರೆಸ್ ಜೊತೆ ಹೊರಟ್ಟಿ ಗುರುತಿಸಿಕೊಂಡಿದ್ದರೆಂದು ಮತ್ತು ಬಿಜೆಪಿ ಪಕ್ಷದ ಸಿದ್ಧಾಂತಗಳನ್ನ ಇವರು ಒಪ್ಪಿಕೊಂಡಿಲ್ಲ ಎಂದು ದೂರಲಾಗಿದೆ.

ಬಿಜೆಪಿಯಲ್ಲೇ ಪ್ರಬಲ ನಾಯಕರಿದ್ದಾರೆ 

ಹಾವೇರಿ, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಕ್ಷೇತ್ರದಲ್ಲಿ ಹಾಲಿ ಸಿಎಂ, ಮಾಜಿ ಸಿಎಂ ಗಳಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ 17 ಶಾಸಕರು, 3 ಸಂಸತ್ ಸದಸ್ಯರು, 4 ಪರಿಷತ್ ಸದಸ್ಯರು, ವಿಧಾನಸಭೆ ಸಭಾಪತಿ, 3 ಕ್ಯಾಬಿನೆಟ್ ಸಚಿವರು, ಓರ್ವ ಕೇಂದ್ರ ಸಚಿವರಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಒಬ್ಬರೇ ಒಬ್ಬ ಶಾಸಕರು ಇಲ್ಲ. ಬಸವರಾಜ್ ಹೊರಟ್ಟಿ ಒಬ್ಬ ಕಳಂಕಿತ ವ್ಯಕ್ತಿ, ಇಂತಹ ಕಳಂಕಿತ ವ್ಯಕ್ತಿಗೆ ಟಿಕೆಟ್ ಕೊಟ್ಟು ಸಾಧಿಸುವುದೇನಿದೆ ಎಂಬ ಪ್ರಶ್ನೆ? ಪತ್ರದ ಜೊತೆಗೆ ಹಲವು ದಾಖಲೆಗಳನ್ನು ಬಿಜೆಪಿ ಪ್ರಮೂಖರು ಹೈಕಮಾಂಡ್ ಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Karnataka Politics: ಪರಿಷತ್ ಘಟನೆಗೆ ಸಭಾಪತಿ ಹೊರಟ್ಟಿ ಮತ್ತೊಮ್ಮೆ ಬೇಸರ; ಸಿಎಂ ಕೂಡ ಆಕ್ರೋಶ

ಕಳಂಕಿತ ವ್ಯಕ್ತಿಗೆ  ಟಿಕೆಟ್ ಕೊಡ್ಬೇಡಿ

ಹೊರಟ್ಟಿಯವರನ್ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಬಾರದೆಂದು ಮನವಿ ಮಾಡಲಾಗಿದೆ. ಹಲವು ಶಿಕ್ಷಕರು, ನಿವೃತ್ತ ಪ್ರಾಂಶುಪಾಲರಿಂದಲೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ತಾನೇ ಬಿಜೆಪಿ ಅಭ್ಯರ್ಥಿ ಎಂದು ಮೋಹನ್ ಲಿಂಬಿಕಾಯಿ ಪ್ರಚಾರ ಬಿರುಸುಗೊಳಿಸಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಹೈಕಮಾಂಡ್ ಗೆ ನನ್ನ ಹೆಸರನ್ನು ಮಾತ್ರ ಬಿಜೆಪಿ ಕಳಿಸಿದೆ. ನನ್ನ ಟಿಕೇಟ್ ಅಂತಿಮಗೊಳ್ಳಲಿದ್ದು, ಗೊಂದಲ ಬೇಡ. ಪಕ್ಷಕ್ಕಾಗಿ ದುಡಿದ, ಕ್ರಿಯಾಶೀಲರಿಗೆ ಪ್ರಾತಿನಿಧ್ಯತೆ ನೀಡಬೇಕೆಂಬ ನಿಯಮವಿದೆ. ಅದನ್ನು ಪಾಲನೆ ಮಾಡಬೇಕೆಂದು ಮೋಹನ ಲಿಂಬಿಕಾಯಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Basavaraj Horatti Upset: ಸರ್ಕಾರಿ ಬಂಗಲೆಗೆ ಭಿಕ್ಷೆ ಬೇಡಲ್ಲ..ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ: ಹೊರಟ್ಟಿ ಬೇಸರ

75 ವರ್ಷ ದಾಟಿದವರಿಗೆ ಯಾವುದೇ ಹುದ್ದೆ ಇಲ್ಲ

75 ವರ್ಷ ದಾಟಿದವರಿಗೆ ಯಾವುದೇ ಹುದ್ದೆ ಇಲ್ಲ ಎಂದಿರುವಾಗ ಹೊರಟ್ಟಿ ಸೇರ್ಪಡೆ ಪ್ರಶ್ನೆಯೇ ಬರೋಲ್ಲ ಎಂದು ಮೋಹನ್ ಲಿಂಬಿಕಾಯಿ ಅಭಿಪ್ರಾಯಪಟ್ಟಿದ್ದಾರೆ. ಕೇಡರ್ ಬೇಸ್ಡ್ ಪಾರ್ಟಿಯಲ್ಲಿ ಹೊರಗಿನವರಿಗೆ ಗ್ರೀನ್ ಕಾರ್ಪೆಟ್ ಹಾಕಿದರೆ ಹೇಗೆ ಎಂದು ಬಿಜೆಪಿ ಮುಖಂಡ ಬಾಳಣ್ಣ ಪಾಟೀಲ ಪ್ರಶ್ನಿಸಿದ್ದಾರೆ.  ಪಕ್ಷಕ್ಕಾಗಿ ದುಡಿದವರಿಗೆ ಮಣೆ ಹಾಕಿದರೆ ಮಾತ್ರ ಪಕ್ಷ ಉಳಿಯುತ್ತೆ, ಕಾರ್ಯಕರ್ತರೂ ಬೆಳೆಯುತ್ತಾರೆ ಎಂದು ಪಾಟೀಲ ಅಭಿಪ್ರಾಯಪಟ್ಟಿದ್ದಾರೆ. ಹೊರಟ್ಟಿಯನ್ನು ಬಿಜೆಪಿ ಸೇರ್ಪಡೆಗೊಳಿಸೋಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತಿತರರ ನಾಯಕರು ತೀವ್ರ ಪ್ರಯತ್ನ ನಡೆಸಿದ್ದಾರೆ.
Published by:Pavana HS
First published: