ಧಾರವಾಡ(ಸೆಪ್ಟೆಂಬರ್.16): ಧಾರವಾಡದಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿ ಸ್ಥಳಾಂತರ ವಿರೋಧಿಸಿ ಐದು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದರೂ, ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸಿದ ಹಿನ್ನೆಲೆ ಬೇಸತ್ತು ಕಚೇರಿ ಸ್ಥಳಾಂತರಿಸುವ ಸರ್ಕಾರದ ನಡೆಗೆ ತಡೆ ನೀಡುವಂತೆ ಕೋರಿ ಹೋರಾಟಗಾರ ವಿರೇಶ ಸೊಬರಮಠ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಚೇರಿಯಲ್ಲಿ ಸಾಕಷ್ಟು ಭ್ರಷ್ಚಾಚಾರ ನಡೆದಿದ್ದು, ಈಗ ನೀರಾವರಿ ಕಚೇರಿ ಬೆಳಗಾವಿಗೆ ಸ್ಥಳಾಂತರಗೊಂಡರೆ ಕಳಸಾ-ಬಂಡೂರಿ, ಮಹಾದಾಯಿ ಯೋಜನೆಗೆ ಬರುವ ನೂರಾರು ಕೋಟಿ ಅಪವ್ಯಯ ಆಗಲಿದೆ. ಇದೇ ವಿಷಯಕ್ಕೆ ರೈತ ಸೇನೆಯು ಸೆಪ್ಟೆಂಬರ್ 11ರಿಂದ ಧರಣಿ ಕೈಗೊಳ್ಳಲಾಗಿದೆ. ಧರಣಿಗೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡದ ಹಿನ್ನೆಲೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಬೆಂಗಳೂರಿನ ಕಚೇರಿಗಳನ್ನು ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಉತ್ತರ ಕರ್ನಾಟಕದ ಕಚೇರಿಗಳನ್ನು ಸ್ಥಳಾಂತರ ಮಾಡುವುದು ದುರಂತ. ಡಿ.ಎಂ.ನಂಜುಂಡಪ್ಪ ವರದಿ ಗಾಳಿಗೆ ತೂರಿ ಈ ಕಚೇರಿ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಳಗಾವಿಗೆ ಈ ಕಚೇರಿ ಸ್ಥಳಾಂತರಕ್ಕೆ ಸಾಕಷ್ಟು ಹಣವನ್ನು ಲೂಟಿ ಮಾಡಲು ಅಲ್ಲಿನ ಪ್ರಭಾವಿ ಸಚಿವರು ಷಡ್ಯಂತ್ರ ನಡೆಸುತ್ತಿದ್ದಾರೆ. ಅದಕ್ಕೆ ಅಧಿಕಾರಿ ಮಲ್ಲಿಕಾರ್ಜುನ ಗುಂಗೆ ಈ ಇಲಾಖೆ ಪ್ರಧಾನ ನಿರ್ದೇಶಕರಾಗಿದ್ದು, ಭ್ರಷ್ಟಾಚಾರ ಹಿತ ಕಾಯಲು ಸಚಿವರು ಇಂತವರನ್ನು ಇರಿಸಿಕೊಂಡಿದ್ದಾರೆ ಎಂದು ದೂರಿದರು.
ಧಾರವಾಡ ಕಚೇರಿ ನಿರ್ದೇಶಕ ಶಶಿಧರ ಬಗಲಿ ಸಹ ಅವರ ದಾರಿಯಲ್ಲಿದ್ದು, ಎಲ್ಲರೂ ಹಣ ಹೊಡೆಯುವ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟ ಮಾಡುತ್ತಿದ್ದು , ಹೈಕೋರ್ಟ್ ರಿಟ್ ಅರ್ಜಿ ನಂತರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಹ ತಾವು ಚಿಂತನೆ ನಡೆಸಿರುವುದಾಗಿ ಸೊಬರದಮಠ ಸ್ಪಷ್ಟಪಡಿಸಿದರು.
ಇನ್ನೂ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಬೆಂಗಳೂರಿನ ಕೆಲವು ಇಲಾಖೆಯನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದರು. ಆದರೆ, ಉತ್ತರ ಕರ್ನಾಟಕದಲ್ಲೇ ಇರುವ ಇಲಾಖೆಯನ್ನು ಬೆಳಗಾವಿಗೆ ಸ್ಥಳಾಂತರ ಮಾಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ : ಮುಷ್ಕರ ನಿರತ ವೈದ್ಯರ ಜೊತೆಗಿನ ಸರ್ಕಾರದ ಸಭೆ ವಿಫಲ ; ಶುಕ್ರವಾರ ಮತ್ತೆ ವೈದ್ಯರ ಜೊತೆ ಸಚಿವರ ಸಭೆ
ಧಾರವಾಡದಲ್ಲಿರುವ ನೀರಾವರಿ ಇಲಾಖೆ ಬಾಡಿಗೆ ಕಟ್ಟಡದಲ್ಲಿ ಇದೆ. ಈ ಕಟ್ಟಡ ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತವಾದರೆ ಸರ್ಕಾರ ಬರಿಸುವ ಬಾಡಿಗೆ ಹಣ ಉಳಿಯ ಬಹುದಾಗಿದೆ. ಆದರೆ, ಈ ಇಲಾಖೆಯನ್ನು ಸ್ಥಳಾಂತರ ಮಾಡುವುದನ್ನು ವಿರೋಧ ವ್ಯಕ್ತ ಪಡಿಸುತ್ತಿರುವುದನ್ನು ಗಮನಿಸಿದ್ರೆ ಹಲವು ಅನುಮಾನಗಳು ಎದ್ದು ಕಾಣುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ