ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸದ್ದು ಮಾಡುತ್ತಾ?; ಸುಳಿವು ಕೊಟ್ಟ ಡಿಸಿಎಂ ಅಶ್ವತ್ಥ್‌ ನಾರಾಯಣ್‌

ಅಸಲಿಗೆ ಇಡೀ ರಾಜ್ಯದ ಆರ್ಥಿಕತೆಯನ್ನು ಕೊರೋನಾ ಕಾಟ ಇನ್ನಿಲ್ಲದಂತೆ ಕಾಡುತ್ತಿದೆ. ಸತತ ಲಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರೂ ಸಹ ಬಸವಳಿದಿದ್ದಾರೆ. ಇನ್ನೇನು ಲಾಕ್‌ಡೌನ್‌ ಸಡಿಲವಾಗಿ ಜನ ಜೀವನ ಎಂದಿನಂತಾಗಲಿದೆ ಎನ್ನುವಷ್ಟರಲ್ಲಿ ರಾಜ್ಯದಲ್ಲಿ ಗುರುವಾರದಿಂದ ಮತ್ತೆ ರಾಜಕೀಯ ಮೇಲಾಟಗಳು, ಅಧಿಕಾರದ ತಿಕ್ಕಾಟಗಳು ಆರಂಭವಾಗಿವೆ.

news18-kannada
Updated:May 29, 2020, 10:16 PM IST
ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸದ್ದು ಮಾಡುತ್ತಾ?; ಸುಳಿವು ಕೊಟ್ಟ ಡಿಸಿಎಂ ಅಶ್ವತ್ಥ್‌ ನಾರಾಯಣ್‌
ಡಿಸಿಎಂ ಅಶ್ವತ್ಥ್‌ ನಾರಾಯಣ್‌.
  • Share this:
ರಾಮನಗರ (ಮೇ 29); ರಾಜ್ಯದಲ್ಲಿ ಒಂದು ಹಂತದ ಆಪರೇಷನ್‌ ಕಮಲ ಮುಗಿದಿದೆ. ಪರಿಣಾಮ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಮುರಿದು ಬಿದ್ದು ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದೆ. ಮೈತ್ರಿ ಸರ್ಕಾರದ ಅವಧಿಯ ಎಲ್ಲಾ ಅನರ್ಹ ಶಾಸಕರೂ ಇಂದು ಸಚಿವರಾಗಿದ್ದಾರೆ. ಇನ್ನೇನು ರಾಜ್ಯದಲ್ಲಿ ಎಲ್ಲವೂ ಸರಿಯಾಗಿದೆ. ಆಪರೇಷನ್‌ ಕಮಲಕ್ಕೆ ಕರ್ನಾಟಕದಲ್ಲಿ ಇನ್ನು ಕೆಲಸವಿಲ್ಲ ಎಂದು ಊಹಿಸಿದ್ದ ಎಲ್ಲರಿಗೂ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಡಿಸಿಎಂ ಅಶ್ವತ್ಥ್‌ ನಾರಾಯಣ್ ಇಂದು ದೊಡ್ಡ ಶಾಕ್‌ ನೀಡಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಮತ್ತೆ ಆಪರೇಷನ್ ನಡೆಯುವ ಸುಳಿವು ನೀಡಿದ್ದಾರೆ.

ಅಸಲಿಗೆ ಇಡೀ ರಾಜ್ಯದ ಆರ್ಥಿಕತೆಯನ್ನು ಕೊರೋನಾ ಕಾಟ ಇನ್ನಿಲ್ಲದಂತೆ ಕಾಡುತ್ತಿದೆ. ಸತತ ಲಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರೂ ಸಹ ಬಸವಳಿದಿದ್ದಾರೆ. ಇನ್ನೇನು ಲಾಕ್‌ಡೌನ್‌ ಸಡಿಲವಾಗಿ ಜನ ಜೀವನ ಎಂದಿನಂತಾಗಲಿದೆ ಎನ್ನುವಷ್ಟರಲ್ಲಿ ರಾಜ್ಯದಲ್ಲಿ ಗುರುವಾರದಿಂದ ಮತ್ತೆ ರಾಜಕೀಯ ಮೇಲಾಟಗಳು, ಅಧಿಕಾರದ ತಿಕ್ಕಾಟಗಳು ಆರಂಭವಾಗಿವೆ.

ಸಿಎಂ ಬಿಎಸ್‌ವೈ ಅವರನ್ನು ಅಧಿಕಾರದಿಂದ ಕೆಲಗಿಳಿಸಲು ಗುರುವಾರ ಹಿರಿಯ ನಾಯಕ ಉಮೇಶ್‌ ಕತ್ತಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ಭಾಗದ 10 ಜನ ಶಾಸಕರು ಗುಪ್ತ ಸಭೆ ನಡೆಸಿದ್ದರು. ಇದು ಸುದ್ದಿಯಾಗುತ್ತಿದ್ದಂತೆ, ಅತೃಪ್ತರ ದೆಸೆಯಿಂದ ಬಿಎಸ್‌ವೈ ಅಧಿಕಾರಿಂದ ಕೆಳಗಿಳಿಯುವುದು ಬಹುತೇಕ ಖಚಿತ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು.

ಆದರೆ, ಈ ವಿಚಾರಕ್ಕೆ ಇಂದು ಚಾಮರಾಜನಗರದಲ್ಲಿ ಟಾಂಗ್ ನೀಡಿದ್ದ ಸಚಿವ ರಮೇಶ್‌ ಜಾರಕಿಹೊಳಿ, "ನನ್ನ ಬಳಿ 20ಕ್ಕೂ ಹೆಚ್ಚು ಕಾಂಗ್ರೆಸ್‌ ನಾಯಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್‌ ಅನುಮತಿ ನೀಡಿದರೆ, ಈಗಲೇ 5 ಜನರನ್ನು ಕಾಂಗ್ರೆಸ್‌ನಿಂದ ಕರೆತಂದು ಉಳಿದ ಮೂರು ವರ್ಷವೂ ಬಿಎಸ್‌ವೈ ಅವರನ್ನು ಅಧಿಕಾರದಲ್ಲಿ ಮುಂದುವರೆಸಲು ನಾನು ಸಿದ್ಧ" ಎಂದು ಬಹಿರಂಗ ಹೇಳಿಕೆ ನೀಡಿದ್ದರು.

ಆ ಮೂಲಕ ರಾಜ್ಯದಲ್ಲಿ ಮತ್ತೆ ಆಪರೇಷನ್‌ ಕಮಲ ನಡೆಯುವ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯ ರಾಜಕೀಯ ವಲಯದಲ್ಲಿ ಆಪರೇಷನ್‌ ಕಮಲದ ಬಗ್ಗೆ ಮತ್ತೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಇದರೊಂದಿಗೆ ಡಿಸಿಎಂ ಅಶ್ವತ್ಥ್‌ ನಾರಾಯಣ್‌ ಸಹ ನೀಡಿರುವ ಹೇಳಿಕೆ ಆಪರೇಷನ್‌ ಕುರಿತು ಊಹಾಪೋಹಗಳನ್ನು ಖಚಿತ ಪಡಿಸುವಂತಿದೆ.

ಆಪರೇಷನ್‌ ಕಮಲದ ಸೂಚನೆ ಕೊಟ್ಟ ಡಿಸಿಎಂ ಅಶ್ವತ್ಥ್‌ ನಾರಾಯಣ್‌:

ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ್ ಇಂದು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ವಿತರಿಸಲಾಗುವ ತ್ರಿಚಕ್ರ ವಾಹನಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಮನಗರ ತೆರಳಿದ್ದರು.ಈ ವೇಳೆ ಪ್ರಶ್ನೆ ಮಾಡಿದ್ದ ಪತ್ರಕರ್ತರು ಸಚಿವ ರಮೇಶ್‌ ಜಾರಕಿಹೊಳಿ ಅವರ ಆಪರೇಷನ್‌ ಕಮಲದ ಕುರಿತು ಅಭಿಪ್ರಾಯ ಕೇಳಿದ್ದಾರೆ. ಈ ವೇಳೆ ನಗುತ್ತಲೇ ಉತ್ತರ ನೀಡಿರುವ ಅಶ್ವತ್ಥ್‌ ನಾರಾಯಣ್, "ರಮೇಶ್‌ ಜಾರಕಿಹೊಳಿ ಹೇಳಿಕೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಆಪರೇಷನ್ ಕಮಲ ಇದ್ದರೂ ಇರಬಹುದು" ಎಂದು ಹೇಳುವ ಮೂಲಕ ಮಾರ್ಮಿಕವಾಗಿ ಆಪರೇಷನ್‌ 2.0 ಸುಳಿವು ನೀಡಿದ್ದಾರೆ.

ಅಸಲಿಗೆ ಕಳೆದ ವರ್ಷ ರಾಜ್ಯದಲ್ಲಿ ನಡೆದ ಆಪರೇಷನ್‌ ಕಮಲದಲ್ಲಿ ಸಚಿವ ಆರ್‌. ಅಶೋಕ್‌ ಮತ್ತು ಡಿಸಿಎಂ ಅಶ್ವತ್ಥ್‌ ನಾರಾಯಣ್ ಪ್ರಮುಖ ಪಾತ್ರವಹಿಸಿದ್ದರು. ಇದೇ ಕಾರಣದಿಂದಾಗಿ ಈ ಹಿಂದೆ ಸಚಿವರಾಗಿ ಅನುಭವ ಇಲ್ಲದ ಅಶ್ವತ್ಥ್‌ ನಾರಾಯಣ್ ಅವರನ್ನು ಉಪ ಮುಖ್ಯಮಂತ್ರಿ ಎಂಬಂತಹ ಉನ್ನತ ಹುದ್ದೆಗೆ ತಂದು ಕೂರಿಸಲಾಗಿತ್ತು. ಈ ನಿಟ್ಟಿನಲ್ಲಿ ಇಂದು ಅಶ್ವತ್ಥ್‌ ನಾರಾಯಣ್ ನೀಡುವ ಮಾರ್ಮಿಕ ಹೇಳಿಕೆಯನ್ನು ಕಾಂಗ್ರೆಸ್‌ ಲಘುವಾಗಿ ಪರಿಗಣಿಸಿದರೆ ನಂತರದ ದಿನಗಳಲ್ಲಿ ದೊಡ್ಡ ಮಟ್ಟದ ದಂಡ ತೆರಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಹೈಕಮಾಂಡ್‌ ಸೂಚಿಸಿದರೆ ಈಗಲೂ 5 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಲು ಸಿದ್ದ: ರಮೇಶ್ ಜಾರಕಿಹೊಳಿ
First published: May 29, 2020, 10:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading