ಯಾದಗಿರಿ: ಜಿಲ್ಲಾ ಪಂಚಾಯತ್ ಉಳಿದ 10 ತಿಂಗಳ ಅವಧಿಗಾಗಿ ನಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಅರಕೇರಾ ಪಂಚಾಯತ್ ಸದಸ್ಯ ಬಸನಗೌಡ ಪಾಟೀಲ ಯಡಿಯಾಪುರ ಅವರು ಜಿಲ್ಲಾಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಸನಗೌಡ ಪಾಟೀಲ ಅವರು ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತರಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಮಾಡಿದವರು. ಆದರೆ, ಕಾಂಗ್ರೆಸ್ ಪಕ್ಷವು ಯಡಿಯಾಪುರ ಅವರನ್ನು ಅಧ್ಯಕ್ಷ ಸ್ಥಾನ ಮಾಡಲು ಹಿಂದೇಟು ಹಾಕಿತ್ತು. ಕಾಂಗ್ರೆಸ್ ಪಕ್ಷದಿಂದ ಸಗರ ಜಿಲ್ಲಾ ಪಂಚಾಯತ್ ಸದಸ್ಯ ಶರಣಮ್ಮ ನಾಗಪ್ಪ ಅವರನ್ನು ಅಧ್ಯಕ್ಷರಾಗಿ ಮಾಡಲು ನಿರ್ಧಾರ ಮಾಡಲಾಗಿತ್ತು.
ಆದರೆ, ಬಸನಗೌಡ ಪಾಟೀಲ ಯಡಿಯಾಪುರ ಅವರು ಮೊದಲೇ ಕಾಂಗ್ರೆಸ್ ನಾಯಕರ ನಡೆಯಿಂದ ಅಸಮಾಧಾನಗೊಂಡಿದ್ದರು. ಹೀಗಾಗಿ, ಬಿಜೆಪಿಯು ಕೂಡ ಬಂಡಾಯ ಅಭ್ಯರ್ಥಿಯನ್ನು ನೋಡಿ ಕಾಂಗ್ರೆಸ್ ಜಿಪಂ ಸದಸ್ಯ ಬಸನಗೌಡ ಪಾಟೀಲ ಅವರಿಗೆ ಗಾಳ ಹಾಕಿ ಆಪರೇಷನ್ ಕಮಲ ಮಾಡಲು ಹೆಜ್ಜೆ ಇಟ್ಟು ಬಿಜೆಪಿಯತ್ತ ಸೆಳೆಯಿತು. ಬಸನಗೌಡ ಪಾಟೀಲ ಯಡಿಯಾಪುರ ಅವರಿಗೆ ಬಿಜೆಪಿ ಯತ್ತ ಸೆಳೆಯುವ ಜೊತೆ ಗೋಗಿ ಜಿಲ್ಲಾ ಪಂಚಾಯತ ಸದಸ್ಯ ಕೀಶಾನ್ ರಾಠೋಡ ಅವರನ್ನು ಕಮಲ ಪಾಳಾಯ ಆಪರೇಷನ್‌ಗೆ ಒಳಗು ಮಾಡಿತ್ತು.
ಪರಿಣಾಮ ಇಂದು ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರಾದ ಡಾ.ಎನ್.ವಿ.ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ ಬಂಡಾಯ ಜಿಪಂ ಸದಸ್ಯ ಬಸನಗೌಡ ಪಾಟೀಲ ಯಡಿಯಾಪುರ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಿಂದ ಜಿಲ್ಲಾ ಪಂಚಾಯತ್ ಸದಸ್ಯ ಶರಣಮ್ಮ ನಾಗಪ್ಪ ನಾಮಪತ್ರ ಸಲ್ಲಿಸಿದರು.
ಜಿ.ಪಂ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಸನಗೌಡ ಪಾಟೀಲ ಯಡಿಯಾಪುರ ಪರ 12 ಮತಗಳು ಚಲಾವಣೆಯಾಗಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಶರಣಮ್ಮ ನಾಗಪ್ಪ ಪರ 10 ಮತಗಳು ಚಲಾವಣೆಯಾಗಿದ್ದವು. ಹೀಗಾಗಿ ಬಿಜೆಪಿ ಬೆಂಬಲ ಸದಸ್ಯರೊಂದಿಗೆ 12 ಮತಗಳಿಂದ ಬಂಡಾಯ ಅಭ್ಯರ್ಥಿ ಪಾಟೀಲ ಅವರು ಜಿ.ಪಂ ಅಧ್ಯಕ್ಷರಾಗಿ ಆಯ್ಕೆಯಾದರು.
ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಕೈಮೀರಿದ ಕೊರೋನಾ ಪರಿಸ್ಥಿತಿ; ಜುಲೈ 13 ರಿಂದ 23ರ ವರೆಗೆ ಪುಣೆ ಸಂಪೂರ್ಣ ಲಾಕ್‌ಡೌನ್
ಚುನಾವಣೆ ಮುಗಿಯುತ್ತಿದ್ದಂತೆ ಪಾಟೀಲ ಅಭಿಮಾನಿಗಳು ಹಾಗೂ ಬಿಜೆಪಿ ಪಾಳಾಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, ವಿಜಯೋತ್ಸವದ ಸಂಭ್ರಮದಲ್ಲಿ ಕೋವಿಡ್ ಮುಂಜಾಗ್ರತೆ ವಹಿಸದೆ ಎಲ್ಲರೂ ಸಮಾಜಿಕ ಅಂತರ ಕಾಯ್ದುಕೊಳ್ಳದೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೂ, ಈ ಕುರಿತು ಚುನಾವಣಾ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೇ ಇರುವುದಕ್ಕೆ ಅನೇಕ ಆರೋಗ್ಯ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ