Operation Dog - ಬೀದಿನಾಯಿಗಳ ಭಯದಲ್ಲಿ ಮಕ್ಕಳು; ಹಾಸನದಲ್ಲಿ ಆಪರೇಷನ್ ಡಾಗ್
ನ್ಯಾಯಾಲಯದ ಆದೇಶದ ಪ್ರಕಾರ, ಬೀದಿನಾಯಿಗಳನ್ನು ಹಿಡಿದು ಕೊಲ್ಲುವಂತಿಲ್ಲ. ಹಾಗಾಗಿ ಹಾಸನ ನಗರದಲ್ಲಿರುವ ನಾಯಿಗಳನ್ನು ಸೆರೆಹಿಡಿದು ಸಂತಾನ ಶಕ್ತಿ ಹರಣ ಮಾಡಲು ಇಲ್ಲಿನ ನಗರಸಭೆ ನಿರ್ಧರಿಸಿದೆ.
ಹಾಸನ: ಹಾಸನ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ನಾಯಿಗಳ ಸಂತತಿ ಹೆಚ್ಚಿರುವುದು. 2018 ರಿಂದ ಇಲ್ಲಿಯವರೆಗೆ 350 ರಿಂದ 400 ನಾಯಿಗಳನ್ನು ಸೆರೆ ಹಿಡಿದು ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿದ್ದು ಬಿಟ್ಟರೆ ಇನ್ಯಾವ ರೀತಿಯಲ್ಲೂ ಶ್ವಾನಗಳಿಗೆ ಕಡಿವಾಣ ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲ. ಇದರಿಂದಾಗಿ ನಾಯಿಗಳು ಹಗಲು ರಾತ್ರಿ ಎನ್ನದೆ ಮಕ್ಕಳಾದಿಯಾಗಿ ಮನುಷ್ಯರ ಮೇಲೆ ಎರಗುತ್ತಿವೆ. ಇನ್ನು, ನಗರ ಪ್ರದೇಶದಲ್ಲಿ ಹೊಟೇಲ್ ಗಳು ಹಾಗೂ ಮಾಂಸದ ಅಂಗಡಿಗಳ ಸಂಖ್ಯೆ ಹೆಚ್ಚಾಗಿವೆ. ರಸ್ತೆ ಪಕ್ಕದಲ್ಲೇ ತ್ಯಾಜ್ಯವನ್ನು ಬಿಸಾಡುತ್ತಿರುವುದರಿಂದ ವಾಹನ ಸವಾರರಿಗೆ ನಾಯಿಗಳು ಅಡ್ಡ ಬಂದು ಕೆಲವರು ಪ್ರಾಣ ಕಳೆದುಕೊಂಡಿದ್ದರೆ, ಇನ್ನೂ ಹಲವರು ಗಾಯಗೊಂಡಿದ್ದಾರೆ. ರಾತ್ರಿ ವೇಳೆ ವಾಹನದಿಂದ ಕೆಳಗಿಳಿದರೆ ಸಾಕು, ನಾಯಿಗಳು ಹಿಂಡು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಕೆಲವು ಶ್ವಾನಗಳು ಬೊಗಳುತ್ತಾ ವಾಹನಗಳನ್ನು ಹಿಂಬಾಲಿಸುತ್ತವೆ.
ಇದಕ್ಕೆ ಜಿಲ್ಲಾ ಕ್ರೀಡಾಂಗಣ ಹೊರತಾಗೇನಿಲ್ಲ. ಇಲ್ಲಿ ಕೂಡ ಸಾಕಷ್ಟು ನಾಯಿಗಳಿವೆ. ಲಾಕ್ ಡೌನ್ ಇರುವುದರಿಂದ ಪುಟ್ಟ ಮಕ್ಕಳು ಮನೆಯ ಮುಂದೆ ಆಟವಾಡುತ್ತಿರುವಾಗಲೆ ನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಅನೇಕ ಉದಾಹರಣೆಗಳಿವೆ. ಹೀಗಾಗಿ ನಾಯಿ ಹಾವಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಆದರೆ ಶ್ವಾನಗಳಿಗೆ ಕಡಿವಾಣ ಹಾಕುವುದು ಅಷ್ಟು ಸುಲಭವಲ್ಲ. ನ್ಯಾಯಾಲಯದ ಆದೇಶದ ಪ್ರಕಾರ, ಬೀದಿನಾಯಿಗಳನ್ನು ಹಿಡಿದು ಕೊಲ್ಲುವಂತಿಲ್ಲ. ಹಾಗಾಗಿ ನಗರದಲ್ಲಿರುವ ನಾಯಿಗಳನ್ನು ಸೆರೆಹಿಡಿದು ಸಂತಾನ ಶಕ್ತಿ ಹರಣ ಮಾಡಲು ನಗರಸಭೆ ನಿರ್ಧರಿಸಿದೆ. ನಗರಸಭೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ಹಾಸನದ 35 ವಾರ್ಡ್ ಗಳ ವ್ಯಾಪ್ತಿಯಲ್ಲಿ ಸುಮಾರು ಮೂರರಿಂದ ನಾಲ್ಕು ಸಾವಿರ ನಾಯಿಗಳಿವೆ.
ಕಳೆದ ವರ್ಷ ನಾಯಿಯನ್ನು ಸೆರೆಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಲು ಒಂದು ನಾಯಿಗೆ 950 ವೆಚ್ಚ ತಗಲುತ್ತದೆ. ಈ ವರ್ಷ ಖರ್ಚು ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಿಂದಿನ ವರ್ಷದ ಲೆಕ್ಕಾಚಾರದ ಪ್ರಕಾರ ಒಂದು ನಾಯಿ ಸೆರೆ ಹಾಗೂ ಚಿಕಿತ್ಸೆಗೆ 950 ರೂ ಖರ್ಚಾಗುತ್ತದೆ. ಒಂದು ಸಾವಿರ ಶ್ವಾನ ಸೆರೆಗೆ ಹತ್ತು ಲಕ್ಷ ರೂ ಆಗಲಿದೆ. ಇದಲ್ಲದೆ ಆರು ತಿಂಗಳ ಆರೈಕೆಗೆ ಪ್ರತ್ಯೇಕ ಹಣ ವ್ಯಯವಾಗಲಿದೆ. ಆದರೂ ಸಾರ್ವಜನಿಕರಿಂದ ದೂರುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ಕನಿಷ್ಠ ಒಂದು ಸಾವಿರ ನಾಯಿಗಳನ್ನು ಸೆರೆ ಹಿಡಿಯಲು ನಗರಸಭೆ ನಿರ್ಧರಿಸಿದೆ.
ಬೀದಿನಾಯಿಗಳನ್ನು ಸೆರೆ ಹಿಡಿದ ಕೂಡಲೇ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿ ಬಿಡುವಂತಿಲ್ಲ. ಆರು ತಿಂಗಳಗಳು ಕಾಲ ಅವುಗಳನ್ನು ಆರೈಕೆ ಮಾಡಬೇಕಿದೆ. ಪಶು ಸಂಗೋಪನಾ ಇಲಾಖೆಯ ನಿರ್ದೇಶನದ ಪ್ರಕಾರವೇ ಶ್ವಾನಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಕೆ ಜೊತೆಗೆ ಪತ್ಯೇಕ ಬೋನ್ ಗಳ ವ್ಯವಸ್ಥೆ ಮಾಡಬೇಕಿದ್ದು, ಇದು ಪಶುವೈದ್ಯಕೀಯ ಆಸ್ಪತ್ರೆಯಲ್ಲೇ ನಡೆಯಬೇಕಿದೆ. ನಾಯಿಗಳ ಜೀವಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಸೆರೆ ಹಿಡಿಯುವ ತಂತ್ರಜ್ಞಾನ ಇರುವುದು ಮೈಸೂರಿನಲ್ಲಿ ಮಾತ್ರ. ಅವರ ಸಲಹೆ ಪಡೆದು ಕಾರ್ಯಾಚರಣೆ ನಡೆಸಲು ಚಿಂತಿಸಿದ್ದು, ತಡವಾಗಿಯಾದರೂ ಆಪರೇಷನ್ ಡಾಗ್ಗೆ ನಗರಸಭೆ ಮುಂದಾಗಿದೆ.
ಚಳಿಗಾಲ ಅಂದರೆ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಾಯಿಗಳ ಮರಿಹಾಕುತ್ತವೆ. ಅಷ್ಟರೊಳಗೆ ಒಂದು ಸಾವಿರ ನಾಯಿಗಳನ್ನು ಸೆರೆ ಹಿಡಿಯಲು ನಿರ್ಧರಿಸಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ತಿಳಿಸಿದ್ದಾರೆ.
ವರದಿ: ಶಶಿಧರ್ ಬಿ.ಸಿ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ