ರಾಯಚೂರು(ಸೆ. 02): ರೈತನಿಗೆ ಒಂದಿಲ್ಲ ಒಂದು ಸಂಕಷ್ಟ ತಪ್ಪಿದ್ದಲ್ಲ, ಕಳೆದ ಬಾರಿ ದುಬಾರಿ ದರದಲ್ಲಿ ಮಾರಾಟವಾಗಿದ್ದ ಈರುಳ್ಳಿ ಈ ಬಾರಿ ಆರಂಭದಲ್ಲಿಯೇ ಪಾತಾಳಕ್ಕಿಳಿದಿದೆ. ಈರುಳ್ಳಿ ಬೆಳೆದ ರೈತ ಈಗ ದರ ಇಲ್ಲದೆ ಕಂಗಾಲಾಗಿದ್ದಾನೆ. ಒಂದು ಕಡೆ ಈರುಳ್ಳಿ ಇಟ್ಟುಕೊಳ್ಳಲು ಆಗದೆ ಮಾರಾಟ ಮಾಡಲು ಆಗದೆ ದಿಕ್ಕು ತೋಚದಂತಾಗಿದ್ದಾನೆ.
ಒಂದು ಕೊರೋನಾದಿಂದ ಉದ್ಯೋಗವಿಲ್ಲದೇ ಕೃಷಿಯತ್ತ ಮುಖ ಮಾಡಿದ ರೈತರ, ಕಷ್ಟ ಪಟ್ಟು ಈರುಳ್ಳಿಯನ್ನು ಬೆಳೆದು ಮಾರುಕಟ್ಟೆಗೆ ತಂದರೆ ಈರುಳ್ಳಿ ದರ ಪಾತಾಳಕ್ಕಿಳಿದಿದೆ. ಇದರಿಂದ ನಾವು ಎಣ್ಣೆ ಕುಡಿಯುವುದು ಒಂದು ಬಾಕಿ ಉಳಿದಿದಿ ನೋಡಿ ರೈತರು ಬೆಳೆದ ಈರುಳ್ಳಿ ಖರೀದಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಕಳೆದ ವರ್ಷ ರಾಯಚೂರು ಎಪಿಎಂಸಿಯಲ್ಲಿ ಈ ದಿನದಲ್ಲಿ ಈರುಳ್ಳಿ ದರ ಗಗನಕ್ಕೇರಿತ್ತು, ಪ್ರತಿ ಕ್ವಿಂಟಾಲ್ ಗೆ 15 ಸಾವಿರ ರೂಪಾಯಿಯವರೆಗೂ ಮಾರಾಟವಾಗಿದ್ದ ಈರುಳ್ಳಿ ಈಗ ಪ್ರತಿ ಕ್ವಿಂಟಾಲ್ ಗೆ 300 ರಿಂದ 1 ಸಾವಿರ ರೂಪಾಯಿ ಮಾರಾಟವಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ 1261 ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ.
ಈಗ ಈರುಳ್ಳಿ ಫಸಲು ಮಾರುಕಟ್ಟೆಗೆ ಬಂದಿದೆ. ಈ ಸಂದರ್ಭದಲ್ಲಿ ದರ ಇಳಿಕೆಯಾಗಿದ್ದರಿಂದ ರೈತ ಈರುಳ್ಳಿ ಬೆಳೆಯಲು ಮಾಡಿದ ಖರ್ಚು ಬರುವುದಿಲ್ಲ, ಮಾರುಕಟ್ಟೆಗೆ ತಂದ ವಾಹನ ಬಾಡಿಗೆಯೂ ಆಗುವುದಿಲ್ಲ, ರೈತರು ಸಂಕಷ್ಟದಲ್ಲಿದ್ದು, ಸರಕಾರ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಜಿಡಿಪಿ ಮಹಾ ಕುಸಿತಕ್ಕೆ ಅಡ್ಡಕಸುಬಿ ಆರ್ಥಿಕ ನಿರ್ವಹಣೆಯೇ ಕಾರಣ ; ಸಿದ್ದರಾಮಯ್ಯ
ರಾಯಚೂರು ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು 1,73,919 ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದು, ಪ್ರತಿ ಕ್ವಿಂಟಾಲ್ ಗೆ 1 ಸಾವಿರ ರೂಪಾಯಿ ದಿಂದ 15 ಸಾವಿರ ರೂಪಾಯಿ ದರವಿತ್ತು, ಈಗ ಆಗಸ್ಟ ಮೊದಲು ವಾರದಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದು, ಇಲ್ಲಿಯವರೆಗೂ 18,675 ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಈಗ ದರ 350 ರೂಪಾಯಿ ದಿಂದ 1 ಸಾವಿರ ರೂ ಒಳಗೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ