ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ ಮಾಡಿಕೊಂಡು 20 ವರ್ಷಗಳಿಂದ ಕಷ್ಟದ ಜೀವನ ಸಾಗಿಸುತ್ತಿರುವ ವೃದ್ದೆಯ ಮನಕಲಕುವ ಕಥೆ!

ಸರ್ಕಾರ ಹಾಗೂ ಸಂಘ ಸಂಸ್ಥೆಗಳು ವೃದ್ಧೆಗೆ ಆಸರೆಯಾಗುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇನ್ನು ಗ್ರಾಮ ಪಂಚಾಯತಿ ಇ‌ನ್ನಾದರೂ ವೃದ್ಧೆಗೆ ನಿವಾಸ ಕಲ್ಪಿಸಿಕೊಡುತ್ತಾ‌? ಅನ್ನೋದನ್ನ ಕಾದು ನೋಡಬೇಕಿದೆ.

ವೃದ್ಧೆ ಯಲ್ಲಮ್ಮ ವಾಸಿಸುವ ಮೇಲ್ಚಾವಣಿ ಇಲ್ಲದ ಗುಡಿಸಲು.

ವೃದ್ಧೆ ಯಲ್ಲಮ್ಮ ವಾಸಿಸುವ ಮೇಲ್ಚಾವಣಿ ಇಲ್ಲದ ಗುಡಿಸಲು.

  • Share this:
ಗದಗ: ವೃದ್ಧೆ ಯಲ್ಲಮ್ಮಳಿಗೆ ಬಂಧುಗಳು, ಮಕ್ಕಳು ಅಂತ ಯಾರೂ ಇಲ್ಲ.  ಅಲ್ಲದೇ ವಾಸಕ್ಕೆ ಸರಿಯಾದ ಮನೆ ಕೂಡ ಇಲ್ಲ. ಇರುವುದು ಒಂದೇ ಮೂರ್ನಾಲ್ಕು ಅಡಿ ಎತ್ತರದ ಮೇಲ್ಚಾವಣಿ ಇಲ್ಲದ ತಗಡಿ ಗುಡಿಸಲು. ಸುತ್ತಲೂ ನೆಲಕಚ್ಚಿದ ಮುರುಕಲು ತಗಡುಗಳು. ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ. ಸೂರ್ಯ ಚಂದ್ರರೇ ಆಕೆಗೆ ಬೆಳಕು. ಬಿಸಿಲು, ಚಳಿ, ಮಳೆ ಲೆಕ್ಕಿಸದೇ ಹಂಪಿಗೆ ಹೋಗುವುದಕ್ಕಿಂತ ಈ ಕೊಂಪೆಯಲ್ಲಿರುವುದೇ ಲೇಸೆಂದು ಕೊಂಪೆಯನ್ನೇ ಅರಮನೆಯೆಂದು ಭಾವಿಸಿ ಜೀವನ ಸಾಗಿಸುತ್ತಿರುವ ಒಂಟಿ ಹಿರಿಯ ಜೀವದ ಮನಕಲಕುವ ಕತೆ ಇದು. ಸರಕಾರದ ಹತ್ತಾರು ಸೌಲಭ್ಯಗಳ ನಡುವೆಯೂ ಆಕೆಗೆ ಒಂದು ಗೇಣು ಸರಿಯಾದ ಸೂರಿಲ್ಲ. 

ಹೌದು, ಇಂತಹದೊಂದು ಮನಕಲಕುವ ಕತೆಯ ಹಿಂದಿನ ಹಿರಿಯ ಜೀವ ಬದುಕುತ್ತಿರುವುದು ಗದಗ ತಾಲೂಕಿನ ಕಲ್ಲೂರು ಗ್ರಾಮದಲ್ಲಿ. ಕಳೆದ 20 ವರ್ಷಗಳಿಂದ ಗ್ರಾಮದ 62 ವರ್ಷದ ಯಲ್ಲಮ್ಮ ಪಾಟೀಲ್ ಎಂಬ ವೃದ್ಧೆ ಮೇಲ್ಛಾವಣೆ ಇಲ್ಲದ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದಾಳೆ. ಈಕೆಗೆ ಬೆಚ್ಚಗೆ ಇರಲು ಸೂರು ಇಲ್ಲದೇ ಮಳೆ ಹಾಗೂ ಚಳಿಯಲ್ಲೇ ಕೆರೆಯ ಪಕ್ಕದ ಬಯಲು ಜಾಗೆಯಲ್ಲಿ ಕಷ್ಟಕರ ಜೀವನ ಸಾಗಿಸುತ್ತಿದ್ದಾಳೆ. ಇನ್ನು ವೃದ್ಧೆ ವಾಸಿಸುತ್ತಿರುವ ಮನೆಗೆ ಸೂರ್ಯ ಚಂದ್ರರೇ ನಿತ್ಯ ಬೆಳಕು ನೀಡುತ್ತಿದ್ದಾರೆ.  ವೃದ್ಧೆಗೆ ಸರಿಯಾದ ಮನೆ, ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ಜಲಚರಗಳ ಓಡಾಟವೂ ಹೆಚ್ಚಾಗಿದೆ. ಇದರಿಂದ ವೃದ್ಧೆ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಅಲ್ಲದೇ, ದೇವರೇ ಕಾಪಾಡಬೇಕೆಂದು ನಿಟ್ಟುಸಿರು ಬಿಡುತ್ತಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಿಂದ ಸೂರಿಗಾಗಿ ಗ್ರಾಮ ಪಂಚಾಯತಿಗೆ ಅಲೆದಾಡಿ ಸುಸ್ತಾಗಿರುವ ವೃದ್ಧೆ, ಮನೆ ಮಂಜೂರು ಮಾಡುವಂತೆ ಐದಾರು ಬಾರಿ ಅರ್ಜಿ ನೀಡಿದ್ದಾರಂತೆ. ಹೀಗಾಗಿ ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ? ಎಂಬಂತೆ ಅರ್ಜಿ ನಮೂನೆ ಕಸದ ಬುಟ್ಟಿಗೆ ಸೇರಿದೆ ವಿನಃ ಯಾರೊಬ್ಬರು ವೃದ್ಧೆಗೆ ಸೂರು ನೀಡುವ ಗೋಜಿಗೆ ಹೋಗಿಲ್ಲ. ಆದರೆ, ಗ್ರಾಪಂ ಸದಸ್ಯರು ಹಾಗೂ ಪಿಡಿಒ ಅವರು ತಮಗೆ ಬೇಕುಬೇಕಾದವರಿಗೆ ಮಾತ್ರ ಮನೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಯಲ್ಲಮ್ಮಳಿಗೆ ರಟ್ಟೆಯಲ್ಲಿ ಶಕ್ತಿ ಇರುವವರಿಗೆ ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ಈಗ ಕೊರೋನಾ ಸಂಕಷ್ಟ ತಂದೊಡ್ಡಿದೆ. ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದೇ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಮಳೆ ಬರಲಿ, ಚಳಿ ಬೀಳಲಿ ಹಾಳು ಕೊಂಪೆಯಂತಿರುವ ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದಾಳೆ. ಒಂದು ವೇಳೆ ಎಡಬಿಡದೇ ಮಳೆ ಸುರಿದರೆ ಪಕ್ಕದ ಮನೆಯವರ ಹತ್ತಿರ ಹೊಟ್ಟೆಗಾಗಿ ಊಟ ಕೇಳಬೇಕು. ನೆರೆಯವರು ಕೊಡದಿದ್ದರೆ ವೃದ್ಧೆಗೆ ಉಪವಾಸವೇ ಗತಿ. ಹೀಗಾಗಿ ಯಲ್ಲಮ್ಮಳಗಿ ಸರ್ಕಾರ ಅಥವಾ ಸಂಘ ಸಂಸ್ಥೆಗಳು ನೆರವಿಗೆ ಬಂದು ಸಹಾಯ ಮಾಡಬೇಕು ಅಂತಿದ್ದಾರೆ ಸ್ಥಳೀಯರು.

ಇದನ್ನು ಓದಿ: Monsoon Rain 2021: ಜೂನ್ 6-7ರಂದು ರಾಜ್ಯದಲ್ಲಿ ಮುಂಗಾರು ಮಳೆ ಆರಂಭ; 20 ಜಿಲ್ಲೆಗಳಲ್ಲಿ ವಾಡಿಕೆ ಮಳೆ!

ಈಗಾಗಲೇ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ವೃದ್ದೆಯ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ವೃದ್ಧೆಗೆ ಆಸರೆಯಾಗುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇನ್ನು ಗ್ರಾಮ ಪಂಚಾಯತಿ ಇ‌ನ್ನಾದರೂ ವೃದ್ಧೆಗೆ ನಿವಾಸ ಕಲ್ಪಿಸಿಕೊಡುತ್ತಾ‌? ಅನ್ನೋದನ್ನ ಕಾದು ನೋಡಬೇಕಿದೆ.

ವರದಿ: ಸಂತೋಷ ಕೊಣ್ಣೂರ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: