Back to School: ಈ ಶಾಲೆಗೆ ಸೇರುವ ಪ್ರತೀ ಮಗುವಿಗೂ 1 ಸಾವಿರ ರೂಪಾಯಿ FD: ಹಳೆ ವಿದ್ಯಾರ್ಥಿಗಳ ಹೊಸಾ ಉತ್ಸಾಹ

ಪ್ರತಿ ಮಗುವಿಗೆ 1 ಸಾವಿರ ರೂ. ಠೇವಣಿ ಇಡಲು ಮುಂದಾಗಿದ್ದು, ಈ ವಿಷಯವನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಅದರ ಪರಿಣಾಮವಾಗಿ ಕೆಲವೇ ದಿನಗಳಲ್ಲಿ ಕಿಂಡರ್ ಗಾರ್ಟನ್‌ಗೆ 30 ಮಕ್ಕಳು ದಾಖಲಾಗಿದ್ದಾರೆ.

ತಮ್ಮ ಶಾಲೆಯೆದುರು ಹಳೆ ವಿದ್ಯಾರ್ಥಿಗಳು

ತಮ್ಮ ಶಾಲೆಯೆದುರು ಹಳೆ ವಿದ್ಯಾರ್ಥಿಗಳು

  • Share this:
ಹಾಸನ: ಈಗೆಲ್ಲಾ ಬೇಬಿಸಿಟ್ಟಿಂಗ್ ಗೆ ಮಕ್ಕಳನ್ನು ಸೇರಿಸಬೇಕೆಂದರೆ ಡೋನೇಷನ್ ಜೊತೆಗೆ ದುಬಾರಿ ಶುಲ್ಕ ಪಾವತಿಸಬೇಕು. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಿಗೆ (Government School) ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತ ತಲುಪಿವೆ. ಇದಕ್ಕೆ ಅರಕಲಗೂಡು ತಾಲ್ಲೂಕಿನ ಬೆಳವಾಡಿ ಶಾಲೆಯ ಸ್ಥಿತಿಯೂ  ಭಿನ್ನವಾಗಿ ಇರಲಿಲ್ಲ. ಇಲ್ಲಿರುವ ನೂರು ವರ್ಷ ಪೂರೈಸಿರುವ ಸರ್ಕಾರಿ ಶಾಲೆಗೆ ಪ್ರತಿ ವರ್ಷ ಮಕ್ಕಳ ದಾಖಲಾತಿ (Admission) ಕಡಿಮೆಯಾಗುತ್ತಲೇ ಸಾಗಿತ್ತು. ಕಳೆದ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಗೆ ಕೇವಲ ನಾಲ್ವರು ಮಕ್ಕಳು ದಾಖಲಾಗಿದ್ದರು. ಇದರಿಂದ ಕೆಲವೇ ವರ್ಷಗಳಲ್ಲಿ ಶಾಲೆ ಬಾಗಿಲು ಮುಚ್ಚುವುದು ಖಚಿತವಾಗಿತ್ತು. ಈ ಕಾರಣಕ್ಕಾಗಿ ಪಶುಪಾಲನಾ ಇಲಾಖೆ ಶಾಲೆಯ ಆವರಣದಲ್ಲಿನ ಖಾಲಿ ಜಾಗದಲ್ಲಿ ಪಶು ಆಸ್ಪತ್ರೆ ನಿರ್ಮಿಸಲು ಮುಂದಾಯಿತು. ಹೇಗಿದ್ದರೂ ಶಾಲೆ ಮುಚ್ಚಿದ ನಂತರ ಪೂರ್ತಿ ಜಾಗವನ್ನು ಇಲಾಖೆಯ ವಶಕ್ಕೆ ಪಡೆಯಬಹುದು ಎನ್ನುವ ದೂರಾಲೋಚನೆಯಿತ್ತು. ಇದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಇಲಾಖೆ ತನ್ನ ಆಲೋಚನೆ ಕೈಬಿಡಬೇಕಾಯಿತು.

ಆದರೆ ಮುಂದೊಂದು ದಿನ ತಮ್ಮ ಶಾಲೆ ಮುಚ್ಚುವ ಸ್ಥಿತಿ ತಲುಪಿದರೆ ಪುನಃ ಇಂತಹ ಸ್ಥಿತಿ ಎದುರಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಗ್ರಾಮದ ಶಾಲೆ ಉಳಿಸಬೇಕು ಎನ್ನುವ ನಿರ್ಧಾರಕ್ಕೆ ಬಂದ ಅಲ್ಲಿನ ಹಳೆ ವಿದ್ಯಾರ್ಥಿಗಳು ಒಗ್ಗೂಡಿ ಹೊಸ ಯೋಜನೆಯೊಂದನ್ನು ರೂಪಿಸಿದರು. ಶಾಲೆಯ ಒಂದನೇ ತರಗತಿ ದಾಖಲಾತಿ ಹೆಚ್ಚಿಸಬೇಕು ಎಂದರೆ ಕಿಂಡರ್ ಗಾರ್ಟನ್ ಶಿಕ್ಷಣಕ್ಕಾಗಿ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗುವುದನ್ನು ತಡೆಯಬೇಕು ಎನ್ನುವುದನ್ನು ಮನಗಂಡ ಹಿರಿಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿಯೇ ಕಿಂಡರ್ ಗಾರ್ಟನ್ ಶಿಕ್ಷಣ ಆರಂಭಿಸಲು ನಿರ್ಧರಿಸಿದರು.

ಪ್ರತಿ ಮಗುವಿಗೆ 1 ಸಾವಿರ ರೂ. ಠೇವಣಿ ಇಡಲು ಮುಂದಾಗಿದ್ದು, ಈ ವಿಷಯವನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಅದರ ಪರಿಣಾಮವಾಗಿ ಕೆಲವೇ ದಿನಗಳಲ್ಲಿ ಕಿಂಡರ್ ಗಾರ್ಟನ್‌ಗೆ 30 ಮಕ್ಕಳು ದಾಖಲಾಗಿದ್ದಾರೆ. ಸರ್ಕಾರಿ ಶಾಲೆ ಅಭಿಯಾನಕ್ಕೆ ಕನ್ನಡ ಮನಸುಗಳು ಎನ್ನುವ ಎನ್‌ಜಿಒ ಕೈ ಜೋಡಿಸಿದೆ. ಎಲ್‌ಕೆಜಿ, ಯುಕೆಜಿ ತರಗತಿ ಕೊಠಡಿಗಳಿಗೆ ಬಣ್ಣ ಬಳಿದು, ಆಕರ್ಷಕ ಚಿತ್ರಗಳನ್ನು ಬಿತ್ತಿಗಳ ಮೇಲೆ ಅರಳಿಸಿ ಮಕ್ಕಳನ್ನು ಸೆಳೆಯುವಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ. ಉಳಿದಂತೆ ಹಳೆಯ ವಿದ್ಯಾರ್ಥಿಗಳು ದಾನಿಗಳ ಸಹಾಯ ಪಡೆದು ಡೆಸ್ಕ್, ಕುರ್ಚಿ, ಸಮವಸ್ತ್ರ, ಶೂನಂತಹ ಸೌಲಭ್ಯ ಕಲ್ಪಿಸುತ್ತಿದ್ದಾರೆ.

ಇದನ್ನೂ ಓದಿ: Bombay Clay Ganesha- ಬಾಂಬೆ ಕ್ಲೇನಿಂದ ಗಣೇಶನ ಮೂರ್ತಿ ತಯಾರಿಸುವ ವಸ್ತ್ರದ ಕುಟುಂಬ

ಇದರ ಜೊತೆ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಪಾಠ ಮಾಡಲು ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದು ತಿಂಗಳು ಎಂಟು ಸಾವಿರ ರೂ. ವೇತನ ನೀಡಲಾಗುತ್ತಿದೆ. ನಾವೆಲ್ಲ ಇದೇ ಶಾಲೆಯಲ್ಲಿ ಓದಿದ್ದೇವೆ. ನಮ್ಮ ಕಣ್ಣೆದುರಲ್ಲೆ ಶಾಲೆ ಮುಚ್ಚುವ ಸ್ಥಿತಿಗೆ ಬಂದಿದ್ದನ್ನು ಕಂಡು, ಹಳೆ ವಿದ್ಯಾರ್ಥಿಗಳು ಒಗ್ಗೂಡಿ, ಕನ್ನಡ ಮನಸುಗಳು, ಎನ್‌ಜಿಒ ಹಾಗೂ ದಾನಿಗಳ ಸಹಾಯ ಪಡೆದು ಎಲ್ಲಾ ಸೌಲಭ್ಯಗಳ ಜೊತೆಗೆ ಶಾಲೆಗೆ ದಾಖಲಾಗುವ ಮಕ್ಕಳಿಗೆ ತಲಾ  ಸಾವಿರ ಠೇವಣಿ ಇಡುತ್ತಿದ್ದೇವೆ.

ಇದರಿಂದ ಪೋಷಕರು ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆ. ಮುಂದೆ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಉತ್ತಮ ಗುಣಮಟ್ಟದ  ಶಿಕ್ಷಣ ಒದಗಿಸುವುದು ನಮ್ಮ ಗುರಿ ಎಂದು ಹಳೇ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಮಕ್ಕಳ‌ ದಾಖಲಾತಿ, ಮೂಲಭೂತ ಸೌಕರ್ಯಗಳ ಕೊರತೆ, ಗುಣಮಟ್ಟದ ಶಿಕ್ಷಣ ದೊರೆಯದ ಹಿನ್ನಲೆಯಲ್ಲಿ ಸರ್ಕಾರಿ ‌ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಆದರೆ ತಾವು ಓದಿದ ಶಾಲೆಯನ್ನು ಉಳಿಸಲು ಹಳೇ ವಿದ್ಯಾರ್ಥಿಗಳು ಮಾಡಿದ ಪ್ರಯೋಗ ನಿಜಕ್ಕೂ ಶ್ಲಾಘನೀಯ.
Published by:Soumya KN
First published: