ತನ್ನ ಪಾಲಿನ ಆಸ್ತಿಯನ್ನು ವೃದ್ಧಾಶ್ರಮಕ್ಕೆ ದಾನ ಮಾಡಿದ ಅಜ್ಜಿ..!

ಬೊಳ್ಳಮ್ಮ ಅವರಿಗೆ 6 ಜನ ಮಕ್ಕಳಿದ್ದು, ಎಲ್ಲರದ್ದೂ ವಿವಾಹವಾಗಿದೆ. ವರ್ಷದ ಹಿಂದೆ ತಮ್ಮ ಪತಿ ಮೃತಪಟ್ಟಿದ್ದರಿಂದ ಇರುವ 3 ಎಕರೆ ಆಸ್ತಿಯನ್ನು ತಮ್ಮ ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. ಅದರಲ್ಲಿ ತಮ್ಮ ಪಾಲಿಗೆ ಬಂದ ಭೂಮಿಯನ್ನು ವಿಕಾಸ್ ಜನಸೇವಾ ಟ್ರಸ್ಟ್ ವೃದ್ಧಾಶ್ರಮಕ್ಕೆ ದಾನವಾಗಿ ನೀಡಿದ್ದಾರೆ.

ಬೊಳ್ಳಮ್ಮ

ಬೊಳ್ಳಮ್ಮ

  • Share this:
ಕೊಡಗು(ಆ.15): ಕೋಟಿ ಕೋಟಿ ಆಸ್ತಿ ಇದ್ದರೂ ಅದರಲ್ಲಿ ಒಂದಷ್ಟು ದಾನ ಮಾಡೋದಕ್ಕೆ ಕೆಲವರು ಹಿಂದೆ ಮುಂದೆ ನೋಡ್ತಾರೆ. ಆದರೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಏಳನೇ ಹೊಸಕೋಟೆಯ ನಿವಾಸಿ 82 ವರ್ಷದ ವೃದ್ಧೆ ಬೊಳ್ಳಮ್ಮ ಎಂಬುವರು ವೃದ್ಧಾಶ್ರಮ ಒಂದಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ 30 ಸೆಂಟ್ ಜಾಗವನ್ನು ದಾನವಾಗಿ ನೀಡಿದ್ದಾರೆ.

ಹೌದು, ಒಮ್ಮೆ ಅಚಾನಕ್ಕಾಗಿ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆಯುತ್ತಿರುವ ವಿಕಾಸ್ ಜನಸೇವಾ ಟ್ರಸ್ಟ್ ನ  ವೃದ್ಧಾಶ್ರಮಕ್ಕೆ ಬೊಳ್ಳಮ್ಮ ಬಂದಿದ್ದರಂತೆ. ಈ ವೇಳೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ವೃದ್ಧಾಶ್ರಮದಲ್ಲಿ 26 ಜನರು ವೃದ್ಧರು ಇರುವುದನ್ನು ಬೊಳ್ಳಮ್ಮ ಗಮನಿಸಿದ್ದರು. ಬಳಿಕ ಸುಮ್ಮನೆ ಮನೆಗೆ ಹೋದವರು ತಮ್ಮ ಪಾಲಿಗೆ ಬಂದಿದ್ದ ಭೂಮಿಯನ್ನು ವೃದ್ಧಾಶ್ರಮಕ್ಕೆ ಕೊಡಲು ನಿರ್ಧರಿಸಿದ್ದರು.

ಬೊಳ್ಳಮ್ಮ ಅವರಿಗೆ 6 ಜನ ಮಕ್ಕಳಿದ್ದು, ಎಲ್ಲರದ್ದೂ ವಿವಾಹವಾಗಿದೆ. ವರ್ಷದ ಹಿಂದೆ ತಮ್ಮ ಪತಿ ಮೃತಪಟ್ಟಿದ್ದರಿಂದ ಇರುವ 3 ಎಕರೆ ಆಸ್ತಿಯನ್ನು ತಮ್ಮ ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. ಅದರಲ್ಲಿ ತಮ್ಮ ಪಾಲಿಗೆ ಬಂದ ಭೂಮಿಯನ್ನು ವಿಕಾಸ್ ಜನಸೇವಾ ಟ್ರಸ್ಟ್ ವೃದ್ಧಾಶ್ರಮಕ್ಕೆ ದಾನವಾಗಿ ನೀಡಿದ್ದಾರೆ.

ಇದನ್ನೂ ಓದಿ:James: ಬ್ಲಾಕ್​ ಕಮಾಂಡೋ ಅವತಾರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್..!

ಕಳೆದ ಏಳು ವರ್ಷದಿಂದ ರಮೇಶ್ ಎಂಬುವರು ಸರ್ಕಾರದ ಯಾವುದೇ ಅನುದಾನವಿಲ್ಲದೆ ತಮ್ಮ ಸ್ವಂತ ಖರ್ಚಿನ ಜೊತೆಗೆ ದಾನಿಗಳು ನೀಡುವ ಕೊಡುಗೆಯಿಂದ ವಿಕಾಸ್ ಜನಸೇವಾ ಟ್ರಸ್ಟ್ ಹೆಸರಿನ ವೃದ್ಧಾಶ್ರಮವನ್ನು ನಡೆಸುತ್ತಿದ್ದರು. ಸ್ವಂತ ಕಟ್ಟಡವಿಲ್ಲದಿದ್ದರೂ ಬಾಡಿಗೆಗೆ ಮನೆಯನ್ನು ಪಡೆದು ಅದರಲ್ಲಿ ವೃದ್ಧರು, ನಿರ್ಗತಿಕರು ಜೊತೆಗೆ ಬುದ್ಧಿ ಮಾಂದ್ಯರು ಸೇರಿದಂತೆ 26 ವೃದ್ಧರಿಗೆ ಕಳೆದ ಏಳು ವರ್ಷದಿಂದ ಆಶ್ರಯ ನೀಡಿದ್ದರು.

ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಸೋಂಕು ಬಾಧಿಸಿ ಪದೇ ಪದೇ ಲಾಕ್‍ಡೌನ್ ಆದ ಪರಿಣಾಮ ಆಶ್ರಮ ನಡೆಸುವುದಕ್ಕೆ ದಾನಿಗಳು ನೀಡುತ್ತಿದ್ದ ದಾನಕ್ಕೂ ಪೆಟ್ಟುಬಿದ್ದಿತ್ತು. ವೃದ್ಧಾಶ್ರಮದ ಕಟ್ಟಡದ ಬಾಡಿಗೆಯನ್ನು ಕಟ್ಟುವುದಕ್ಕೆ ತೀವ್ರ ಸಂಕಷ್ಟ ಎದುರಾಗಿತ್ತು. ಕೆಲವು ದಿನಗಳ ಹಿಂದೆ ವೃದ್ದಾಶ್ರಮಕ್ಕೆ ಬಂದಿದ್ದ ಬೊಳ್ಳಮ್ಮ ಅವರು ಇದೆಲ್ಲವನ್ನೂ ಗಮನಿಸಿದ್ದರು.

ಹೀಗಾಗಿ ಏಳನೇ ಹೊಸಕೋಟೆಯ ವೃದ್ಧೆ ಬೊಳ್ಳಮ್ಮ ಅವರು 30 ಸೆಂಟ್ ಜಾಗವನ್ನು ವಿಕಾಸ್ ಜನಸೇವಾ ಟ್ರಸ್ಟ್ ಗೆ ದಾನವಾಗಿ ನೀಡಿದ್ದಾರೆ. ವೃದ್ಧಾಶ್ರಮ ಮುಚ್ಚಿದರೆ ನನ್ನಂತ ಹತ್ತಾರು ಜನರು ಬೀದಿಗೆ ಬೀಳಬೇಕಾಗುತ್ತದೆ ಎಂದು ಅರಿತು ಸ್ವಂತ ಕಟ್ಟಡ ಕಟ್ಟಿಕೊಳ್ಳಲು ಅನುಕೂಲವಾಗಲೆಂದು ಜಾಗವನ್ನು ದಾನವಾಗಿ ನೀಡಿದ್ದಾರೆ.

ಇದನ್ನೂ ಓದಿ:ಹೊರ ಜಿಲ್ಲೆಗಳಿಂದ ಕೊರೋನಾ ಹೆಚ್ಚಳ ಭೀತಿ; ಅಂತರ್​​ ಜಿಲ್ಲಾ ಚೆಕ್​​ ಪೋಸ್ಟ್ ತೆರೆದ ಚಾಮರಾಜನಗರ ಜಿಲ್ಲಾಡಳಿತ

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ದಾನ ಪತ್ರವೊಂದನ್ನು ಸಿದ್ಧಪಡಿಸಿ ಅದಕ್ಕೆ ಸಹಿ ಹಾಕಿ ವೃದ್ಧಾಶ್ರಮಕ್ಕೆ ಹಸ್ತಾಂತರ ಮಾಡಿದ್ದಾರೆ. ವೃದ್ಧಾಶ್ರಮಕ್ಕೆ ಅಗತ್ಯವಾಗಿ ಬೇಕಾಗಿರುವ ಕಟ್ಟಡ ನಿರ್ಮಾಣಕ್ಕೆ 30 ಸೆಂಟ್ ಜಾಗ ಸಾಕಾಗುವುದಿಲ್ಲ. ಇದರೊಂದಿಗೆ ಇನ್ನು 70 ಸೆಂಟ್ ಖರೀದಿಸಿ ಒಟ್ಟು ಒಂದು ಎಕರೆ ಜಾಗವನ್ನು ನೀಡುವುದಾಗಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಕೂಡ ಭರವಸೆ ನೀಡಿದ್ದಾರೆ. ವೃದ್ಧೆ ಬೊಳ್ಳಮ್ಮ ಅವರ ಈ ಅದ್ಭುತ ಕಾರ್ಯಕ್ಕೆ ಎಲ್ಲರೂ ಸಲಾಮ್ ಹೊಡೆದಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: