HOME » NEWS » District » OIL LAMB USING COW DUNG ON ECO FRIENDLY DIWALI IN KALBURGI HK

ಪರಿಸರ ಸ್ನೇಹಿ ದೀಪಾವಳಿಗಾಗಿ ಗೋವಿನ ಪ್ರಣತಿ ; ಕಲಬುರ್ಗಿ ಮಾರುಕಟ್ಟೆಯಲ್ಲಿ ಗೋ ಪ್ರಣತಿ ಸದ್ದು

ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತದ ಕಲ್ಪಿನೆಗೆ ಅನುಗುಣವಾಗಿ ಗೋವಿನ ಸೆಗಣಿಯಿಂದ ದೀಪಗಳನ್ನು ಸಿದ್ಧಪಡಿಸಲಾಗಿದೆ. ಗೋವಿನ ಸೆಗಣಿ, ಗೋವಿನ ಮೂತ್ರ, ಅನ್ನದ ಗಂಜಿ ಹಾಗೂ ಕಟ್ಟಿಗೆ ಪುಡಿಗಳ ಮಿಶ್ರಣದೊಂದಿಗೆ ಗೋವಿನ ಪ್ರಣತಿ ಸಿದ್ಧಪಡಿಸಲಾಗಿದೆ

news18-kannada
Updated:November 12, 2020, 11:17 PM IST
ಪರಿಸರ ಸ್ನೇಹಿ ದೀಪಾವಳಿಗಾಗಿ ಗೋವಿನ ಪ್ರಣತಿ ; ಕಲಬುರ್ಗಿ ಮಾರುಕಟ್ಟೆಯಲ್ಲಿ ಗೋ ಪ್ರಣತಿ ಸದ್ದು
ಗೋವಿನ ಹಣತೆಗಳು
  • Share this:
ಕಲಬುರ್ಗಿ(ನವೆಂಬರ್. 12): ಈ ಬಾರಿ ಕೊರೋನಾ ಬಂದು ಎಲ್ಲರನ್ನೂ ಕಂಗಾಲಾಗುವಂತೆ ಮಾಡಿದೆ. ಕೊರೋನಾ ಕಾರ್ಮೋಡದಲ್ಲಿಯೇ ದೀಪಗಳ ಹಬ್ಬ ದೀಪಾವಳಿ ನಡೆಯುತ್ತಿದೆ. ಪರಿಸರ ಸ್ನೇಹಿ ಹಬ್ಬ ಆಚರಿಸುವುದಕ್ಕೆ ಸರ್ಕಾರ ಕರೆ ನೀಡಿದೆ. ಇದೇ ಸಂದರ್ಭದಲ್ಲಿ ಕಲಬುರ್ಗಿಯಲ್ಲಿ ಗೋವಿನ ಸೆಗಣಿಯ ದೀಪಗಳಿಂದ ದೀಪಾವಳಿ ಆಚರಿಸಲು ಸಿದ್ಧತೆ ನಡೆದಿದೆ. ಕೊರೋನಾ ಮಹಾಮಾರಿ ಇನ್ನೂ ದೇಶ ಬಿಟ್ಟು ತೊಲಗಿಲ್ಲ. ಇದೇ ಕೊರೋನಾ ಒಂದಷ್ಟು ಇಳಿಮುಖವಾಗಿದ್ದರೂ ಅದರ ಭೀತಿಯಿಂದ ಜನ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಹೀಗಾಗಿಯೇ ಕೊರೋನಾ ಸೋಂಕಿತರಿಗೆ ತೊಂದರಯಾಗಬಹುದಂದು ಸರ್ಕಾರ ಪಟಾಕಿಗಳ ಮೇಲೆ ನಿರ್ಬಂಧ ಹೇರಿ, ಪರಿಸರ ಸ್ನೇಹಿ ಪಟಾಕಿ ಬಿಡುವಂತೆ ಮನವಿ ಮಾಡಿದೆ. ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಕರೆ ನೀಡಿದೆ. ಇದೇ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳು ಕಲಬುರ್ಗಿಯಲ್ಲಿ ಗೋಮಯ ದೀಪಾವಳಿ ಆಚರಿಸಲು ಮುಂದಾಗಿವೆ. ಗೋಮಯ ದೀಪಾವಳಿ ಅಂದ್ರೆ ಏನು ಎಂಬ ಪ್ರಶ್ನೆ ಮೂಡುತ್ತದೆ ಅಲ್ವೇ. ಗೋವಿನ ಸೆಗಣಿಯಿಂದ ಮಾಡಿದ ಪ್ರಣತಿಯೊಂದಿಗೆ ದೀಪಾವಳಿ ಆಚರಿಸುವುದೇ ಗೋಮಯ ದೀಪಾವಳಿಯಾಗಿದೆ. ಇದಕ್ಕಾಗಿ ಕಲಬುರ್ಗಿಯಲ್ಲಿ ಸಾವಿರಾರು ಗೋವಿನ ಪ್ರಣತಿಗಳು ಸಿದ್ಧಗೊಂಡಿವೆ.

ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತದ ಕಲ್ಪಿನೆಗೆ ಅನುಗುಣವಾಗಿ ಗೋವಿನ ಸೆಗಣಿಯಿಂದ ದೀಪಗಳನ್ನು ಸಿದ್ಧಪಡಿಸಲಾಗಿದೆ. ಗೋವಿನ ಸೆಗಣಿ, ಗೋವಿನ ಮೂತ್ರ, ಅನ್ನದ ಗಂಜಿ ಹಾಗೂ ಕಟ್ಟಿಗೆ ಪುಡಿಗಳ ಮಿಶ್ರಣದೊಂದಿಗೆ ಗೋವಿನ ಪ್ರಣತಿ ಸಿದ್ಧಪಡಿಸಲಾಗಿದೆ.

ಕಲಬುರ್ಗಿಯ ನಂದಿ ಅನಿಮಲ್ ವೆಲ್ಫೇರ್ ಸೊಸೈಟಿಯ ಗೋಶಾಲೆಯಲ್ಲಿ ಗೋಮಯ ಪ್ರಣತಿಗಳನ್ನು ಸಿದ್ಧಪಡಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಚೀನಾದ ದೀಪಗಳನ್ನು ಕೈಬಿಟ್ಟು ಗೋವಿನ ಪ್ರಣತಿಗಳಲ್ಲಿ ದೀಪಾವಳಿ ಆಚರಿಸುವ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಿಸುವಂತೆ ನಂದಿ ಅನಿಮಲ್ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಕೇಶವ ಮೋಟಗಿ ಕರೆ ನೀಡಿದ್ದಾರೆ.

ನಂದಿ ಅನಿಮಲ್ ವೆಲ್ ಫೇರ್ ಸೊಸೈಟಿಗೆ ಸೈಯದ್ ಚಿಂಚೋಳಿಯ ಪಯೋನಿಧಿ ಗೋಶಾಲೆ, ಕುಸನೂರು ಮಾಧವ ಗೋಶಾಲೆಗಳು ಬೆಂಬಲವಾಗಿ ನಿಂತಿವೆ. ಜೊತೆಗೆ ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್. ಮತ್ತಿತರ ಹಿಂದೂಪರ ಸಂಘಟನೆಗಳು ಸಹಕಾರ ನೀಡಿದ್ದು, ಈ ವರ್ಷ 10 ಸಾವಿರ ಗೋವಿನ ಪ್ರಣತಿ ಸಿದ್ಧಪಡಿಸಲಾಗಿದೆ. 15 ರೂಪಾಯಿಗೆ ಜೋಡಿ ಪ್ರಣತಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ : ಸರ್ಕಾರದಿಂದ ಜನರಿಗೆ ಸಿಗುವ ವೈಯಕ್ತಿಕ ಸೌಲಭ್ಯಗಳನ್ನು ತಲುಪಿಸಲು ಆದ್ಯತೆ ನೀಡಿ: ಸಂಸದ ಬಿ.ವೈ.ರಾಘವೇಂದ್ರ

ಈ ಪ್ರಣತಿಗಳು ಉರಿದರೂ ಹೊಗೆಯಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಜೊತೆಗೆ ಹಬ್ಬ ಮುಗಿದ ನಂತರ ಭೂಮಿಗೆ ಎಸೆದಲ್ಲಿ ಗೊಬ್ಬರ ರೂಪದಲ್ಲಿಯೂ ಇವು ಕೆಲಸಕ್ಕೆ ಬರುತ್ತವೆ. ಹೀಗಾಗಿ ಈ ಬಾರಿ ಗೋಮಯ ದೀಪಾವಳಿ ಆಚರಿಸುವಂತೆ ಆರ್.ಎಸ್.ಎಸ್. ಮುಖಂಡ ಕೃಷ್ಣಾ ಜೋಶಿ ಕರೆ ನೀಡಿದ್ದಾರೆ.

ಗೋವು ಕೇವಲ ಹಾಲಿಗಷ್ಟೇ ಸೀಮಿತವಲ್ಲ. ಪ್ರಣತಿ ಸೇರಿ 15ಕ್ಕೂ ಹೆಚ್ಚು ಉಪ ಉತ್ಪನ್ನಗಳನ್ನು ಗೋವಿನ ಸೆಗಣಿ, ಮೂತ್ರದಿಂದ ರೂಪಿಸಬಹುದಾಗಿದೆ. ಕೊರೋನಾದಂತಹ ಸಂದರ್ಭದಲ್ಲಿ ಪರಿಸರಸ್ನೇಹಿ ಹಬ್ಬ ಆಚರಿಸುವುದು ಮುಖ್ಯವಾಗಿದ್ದು, ಅದೇ ಹಿನ್ನೆಲೆಯಲ್ಲಿ ಈ ಬಾರಿ ಗೋವಿನ ಪ್ರಣತಿಗಳನ್ನು ಕಲಬುರ್ಗಿಯಲ್ಲಿ ಸಿದ್ಧಪಡಿಸಲಾಗಿದೆ.

ಮುಂದಿನ ವರ್ಷ ಗೋವಿನ ಪ್ರಣತಿಗಳ ತಯಾರಿಕೆ ಮತ್ತಷ್ಟು ಹೆಚ್ಚಿಸಿ, ಸಂಪೂರ್ಣ ಗೋಮಯ ದೀಪಾವಳಿ ಆಚರಿಸುವ ಸಂಕಲ್ಪವನ್ನು ಹಿಂದೂಪರ ಸಂಘಟನೆಗಳು ಕೈಗೊಂಡಿವೆ.
Published by: G Hareeshkumar
First published: November 12, 2020, 11:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories