ಲಾಕ್​ಡೌನ್ ಸಮಯದಲ್ಲಿ 21 ಕುಟುಂಬಗಳ ಒಕ್ಕಲೆಬ್ಬಿಸಲು ನೋಟಿಸ್ ನೀಡಿದ ಅಧಿಕಾರಿಗಳು

ಅಲ್ಲಿರುವ ನಿರಾಶ್ರಿತರು ಮಾತ್ರ ಯಾವುದೇ ಕಾರಣಕ್ಕೂ ನಾವು ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ. ಒಂದು ವೇಳೆ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ತೆರವು ಮಾಡಿಸಲು ಮುಂದಾದಲ್ಲಿ ಅವರೇ ನಮ್ಮನ್ನು ಮತ್ತೆ ಜೀತಕ್ಕೆ ಕಳುಹಿಸಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

21 ಕುಟುಂಬಗಳಿಗೆ ನೋಟಿಸ್ ನೀಡಿರುವುದು.

21 ಕುಟುಂಬಗಳಿಗೆ ನೋಟಿಸ್ ನೀಡಿರುವುದು.

  • Share this:
ಕೊಡಗು: ಸದ್ಯ ಕೋವಿಡ್ ಮಹಾಮಾರಿ ಇಡೀ ದೇಶದಲ್ಲೇ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಇನ್ನು ರಾಜ್ಯದಲ್ಲೂ ತನ್ನ ಕಬಂಧ ಬಾಹುಗಳಿಂದ ಎಲ್ಲರನ್ನು ಸುತ್ತಿಕೊಳ್ಳುತ್ತಿದೆ. ಹೀಗಾಗಿಯೇ ರಾಜ್ಯ ಸರ್ಕಾರ ಮೂರು ದಿನಗಳಿಂದ ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಯಾರೂ ಕೂಡ ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬೇಕು ಎಂದು ಇಡೀ ಆಡಳಿತ ವರ್ಗಕ್ಕೆ ಸೂಚನೆ ನೀಡಿದೆ. ಆದರೆ ಕೊಡಗು ಜಿಲ್ಲೆಯ ಅಧಿಕಾರಿಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಗ್ರಾಮದ ಸರ್ಕಾರಿ ಪೈಸಾರಿ ಜಾಗದಲ್ಲಿರುವ 21 ಕುಟುಂಬಗಳನ್ನು ಅವರಿರುವ ಶೆಡ್ ಗಳಿಂದ ಆಚೆಗೆ ದಬ್ಬಲು ಸಿದ್ಧವಾಗಿದೆ.

ಹೌದು, ಬಾಳುಗೋಡಿನ ಸರ್ಕಾರಿ ಜಾಗದಲ್ಲಿ ನಿರ್ಗತಿಕ 21 ಕುಟುಂಬಗಳು ಕಳೆದ ಎರಡು ವರ್ಷಗಳಿಂದ ಶೆಡ್ ಹಾಕಿಕೊಂಡು ಬದುಕು ನಡೆಸುತ್ತಿದ್ದವು. ಆದರೆ ಆ ಜಾಗವನ್ನು ಅಭಿವೃದ್ಧಿಗೊಳಿಸಬೇಕೆಂಬ ನೆಪವೊಡ್ಡಿ ಅಲ್ಲಿನ ತಾಲ್ಲೂಕು ಆಡಳಿತ 21 ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿ ಜಾಗ ತೆರವಿಗೆ ಆದೇಶಿಸಿದೆ. ಅಷ್ಟೇ ಅಲ್ಲ ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಶೆಡ್ ಗಳನ್ನು ತೆರವು ಮಾಡಿ ಜಾಗ ಖಾಲಿ ಮಾಡದಿದ್ದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. 26 ರಂದು ನೋಟಿಸ್ ಜಾರಿ ಮಾಡಲಾಗಿದ್ದು, ಇನ್ನು ನಾಲ್ಕು ದಿನಗಳಲ್ಲಿ ಜಾಗ ತೆರವು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದುವರೆಗೆ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಜೀತ ಮಾಡಿಕೊಂಡು ಬದುಕುತ್ತಿದ್ದ ಕುಟುಂಬಗಳು ಸ್ವಂತ ಸೂರು ಹೊಂದಬೇಕೆಂದು ಶೆಡ್ ನಿರ್ಮಿಸಿಕೊಂಡಿದ್ದ ಕನಸ್ಸು ಕೂಡ ಭಗ್ನವಾಗಿದೆ. ಆದರೆ ಈ ಲಾಕ್ ಡೌನ್ ಸಮಯದಲ್ಲಿ ಶೆಡ್ ಖಾಲಿ ಮಾಡಿ ಎಲ್ಲಿಗೆ ಹೋಗಬೇಕೆಂದು ಈ 21 ಕುಟುಂಬಗಳು ದಿಕ್ಕು ತೋಚದೆ ಕಂಗಾಲಾಗಿವೆ.

ಇದನ್ನು ಓದಿ: ಕೋವಿಡ್ ಚಿಕಿತ್ಸೆ ಹೆಸರಲ್ಲಿ ವ್ಯಾಪಕ ಭ್ರಷ್ಟಾಚಾರ, ನೈತಿಕ ಹೊಣೆ ಹೊತ್ತು ಸಿಎಂ, ಆರೋಗ್ಯ ಸಚಿವರ ರಾಜೀನಾಮೆಗೆ ರಾಯರೆಡ್ಡಿ ಆಗ್ರಹ

ಮತ್ತೊಂದೆಡೆ ಆರ್ಜಿ ಗ್ರಾಮ ಪಂಚಾಯಿತಿಯ ಪಿಡಿಓ ಕೂಡ ನೋಟಿಸ್ ಗಳನ್ನು ಜಾರಿ ಮಾಡಿದ ಮರುದಿನವೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಐವತ್ತಕ್ಕೂ ಹೆಚ್ಚು ಜನರನ್ನು ಸೇರಿಸಿ ಸಭೆ ಮಾಡಿದ್ದಾರೆ. ನೀವು ಜಾಗ ಖಾಲಿ ಮಾಡಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳ ಹಾಗೆ ನಮ್ಮ ಪಂಚಾಯಿತಿಯನ್ನು ಸ್ವಚ್ಛವಾಗಿ ಇಡಬೇಕಾದರೆ ನಾವು ಕಸ ವಿಲೇವಾರಿ ಘಟಕ ಸ್ಥಾಪನೆಗೆ ಈ ಜಾಗ ಬೇಕು ಎಂದು ಸೂಚನೆ ನೀಡಿದ್ದಾರೆ. ಒಂದೆಡೆ ಈ ಲಾಕ್ ಡೌನ್ ಸಂದರ್ಭದಲ್ಲಿ ಯಾವ ರೀತಿ ಅಧಿಕಾರಿಗಳು ಇವರನ್ನು ಮನೆ ಖಾಲಿ ಮಾಡಿ ಎಂದು ನೋಟಿಸ್ ನೀಡಿದ್ದಾರೋ ಗೊತ್ತಿಲ್ಲ. ಮತ್ತೊಂದೆಡೆ ಪಿಡಿಓ ನಿಯಮ ಉಲ್ಲಂಘಿಸಿ ಅದು ಹೇಗೆ ಸಭೆ ಮಾಡಿದ್ದಾರೋ ಗೊತ್ತಿಲ್ಲ.

ಈ ಕುರಿತು ವಿರಾಜಪೇಟೆ ತಹಸೀಲ್ದಾರ್ ಯೋಗಾನಂದ್ ಅವರು ನಿವೇಶನ ರಹಿತರಿಗಾಗಿಯೇ ಈ ಸ್ಥಳದಲ್ಲಿ ಬಡಾವಣೆ ಮಾಡಲು ತಯಾರಿದ್ದೇವೆ. ಅವರು ಈ ಜಾಗ ತೆರವು ಮಾಡಿಕೊಟ್ಟಲ್ಲಿ ಮಾತ್ರವೇ ಬಡಾವಣೆ ಅಭಿವೃದ್ಧಿ ಪಡಿಸಲು ಸಾಧ್ಯ ಎಂದಿದ್ದಾರೆ. ಅಷ್ಟಕ್ಕೂ ಲಾಕ್ ಡೌನ್ ಗೂ ಮೊದಲೇ ನಾವು ನೊಟೀಸ್ ನೀಡಿದ್ದೆವು. ಆದರೆ ಈಗ ಲಾಕ್ ಡೌನ್ ಇರುವುದರಿಂದ ನಾವು ಸದ್ಯ ತೆರವು ಮಾಡಲು ಹೋಗುವುದಿಲ್ಲ. ಆ ನಂತರವಾದರೂ ಅವರು ಜಾಗ ತೆರವು ಮಾಡಿಕೊಟ್ಟಲ್ಲಿ ಬಡಾವಣೆ ಅಭಿವೃದ್ಧಿ ಮಾಡಿ ನಿರಾಶ್ರಿತರಿಗೆ ನಿವೇಶನ ಹಂಚುತ್ತೇವೆ ಎಂದಿದ್ದಾರೆ. ಆದರೆ ಅಲ್ಲಿರುವ ನಿರಾಶ್ರಿತರು ಮಾತ್ರ ಯಾವುದೇ ಕಾರಣಕ್ಕೂ ನಾವು ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ. ಒಂದು ವೇಳೆ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ತೆರವು ಮಾಡಿಸಲು ಮುಂದಾದಲ್ಲಿ ಅವರೇ ನಮ್ಮನ್ನು ಮತ್ತೆ ಜೀತಕ್ಕೆ ಕಳುಹಿಸಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.
Published by:HR Ramesh
First published: