ನವದೆಹಲಿ, ಆ. 10: ಲೋಕಸಭೆಯಲ್ಲಿ ಸೋಮವಾರ ಮಂಡಿಸಿದ್ದ 'ಮೀಸಲಾತಿ ನೀಡಲು ಒಬಿಸಿ ಪಟ್ಟಿಯನ್ನು ತಯಾರಿಸುವ ಹಕ್ಕನ್ನು ರಾಜ್ಯಗಳಿಗೆ ನೀಡುವ' ಮಸೂದೆಯು ಮಂಗಳವಾರ ವ್ಯಾಪಕ ಚರ್ಚೆಯ ಬಳಿಕ ಅನುಮೋದನೆ ಗೊಂಡಿದೆ.
ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಒಬಿಸಿ ಪಟ್ಟಿಯನ್ನು ತಯಾರಿಸಲು ಸಾಧ್ಯವಾಗಲು ಅವಕಾಶ ಮಾಡಿಕೊಡುವ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ 127ನೇ ಸಂವಿಧಾನಿಕ ತಿದ್ದುಪಡಿಗಾಗಿ ಮಂಡಿಸಿದ್ದರು. ಲೋಕಸಭೆಯಲ್ಲಿ ಇದು ಅಂಗೀಕಾರ ಆಗಿರುವುದರಿಂದ ಬುಧವಾರ ರಾಜ್ಯಸಭೆಯಲ್ಲಿ ಮಂಡನೆ ಆಗುವ ಸಾಧ್ಯತೆ ಇದೆ. ಅಲ್ಲದೆ ಬುಧವಾರ ಅಥವಾ ಗುರುವಾರವೇ ಅಂಗೀಕಾರ ಆಗುವ ಸಾಧ್ಯತೆಯೂ ಇದೆ.
ಏನಿದು ಮಸೂದೆ?
ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯ ರಾಜ್ಯ ಸರ್ಕಾರಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಮತ್ತು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಪ್ರವೇಶ ನೀಡುವ ಹಕ್ಕು ಇರುವುದಿಲ್ಲ. ಸಂವಿಧಾನದ 102ನೇ ತಿದ್ದುಪಡಿಯಲ್ಲೂ ಇದರ ಉಲ್ಲೇಖವಿದೆ. ಇದೇ ಹಿನ್ನೆಲೆಯಲ್ಲಿ ಇತ್ತೀಚೆಗೆ 'ಮಹಾರಾಷ್ಟ್ರ ಸರ್ಕಾರ ಮರಾಠರನ್ನು ಒಬಿಸಿಗೆ ಸೇರಿಸಿ ಅವರಿಗೆ ಮೀಸಲಾತಿ ನೀಡುವ ನಿರ್ಧಾರವನ್ನು' ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು.
ಈಗ ಸಂವಿಧಾನದ 102ನೇ ತಿದ್ದುಪಡಿಯ ಕೆಲವು ನಿಬಂಧನೆಗಳನ್ನು ಸ್ಪಷ್ಟಪಡಿಸಲು ಈ ಮಸೂದೆ ತರಲಾಗಿದೆ. ಮಸೂದೆ ಅಂಗೀಕಾರವಾದ ನಂತರ ಹಿಂದುಳಿದ ಜಾತಿಗಳನ್ನು ಪಟ್ಟಿ ಮಾಡುವ ಹಕ್ಕನ್ನು ರಾಜ್ಯಗಳು ಪಡೆಯುತ್ತವೆ. ಮಸೂದೆ ಅಂಗೀಕಾರವಾದ ನಂತರ ಕೇಂದ್ರ/ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಒಬಿಸಿಗಳ ಪ್ರತ್ಯೇಕ ಪಟ್ಟಿಗಳನ್ನು ಮಾಡುತ್ತವೆ.
ಮಸೂದೆ ಅಂಗೀಕಾರವಾದ ಬಳಿಕ ಯಾವ ಬದಲಾವಣೆ ಆಗಲಿದೆ?
ಈ ಮಸೂದೆ ಅಂಗೀಕಾರವಾದ ಬಳಿಕ ರಾಜ್ಯ ಸರ್ಕಾರಗಳು ಒಬಿಸಿ ಕೋಟಾದಲ್ಲಿ ವಿವಿಧ ಜಾತಿಗಳನ್ನು ಪರಿಗಣಿಸಲು ಸಾಧ್ಯವಾಗುತ್ತದೆ. ಇದರಿಂದ ಕರ್ನಾಟಕದಲ್ಲಿ ಪಂಚಮಸಾಲಿ ಲಿಂಗಾಯತರು, ಹರಿಯಾಣದಲ್ಲಿ ಜಾಟರು, ರಾಜಸ್ಥಾನದಲ್ಲಿ ಗುಜ್ಜರುಗಳು, ಮಹಾರಾಷ್ಟ್ರದಲ್ಲಿ ಮರಾಠರು, ಗುಜರಾತಿನಲ್ಲಿ ಪಟೇಲರ ಮೀಸಲಾತಿ ಹೋರಾಟದ ಹಾದಿ ಸುಗಮವಾಗಬಹುದು.
ಶೇಕಡಾ 50ರಷ್ಟು ಮಿತಿ ಮೀರುವಂತಿಲ್ಲ!
ಮಸೂದೆ ಅಂಗೀಕರಿಸಿದಾಗ ಹೊಸ ಜಾತಿಗಳನ್ನು ಸೇರ್ಪಡೆಗೊಳಿಸಲು ಒಬಿಸಿಗೆ ಅಧಿಕಾರ ಸಿಗಲಿದೆ. ಆದರೆ ಇಂದಿರಾ ಸಾಹ್ನಿ ಪ್ರಕರಣದ ನಿರ್ಧಾರದ ಪ್ರಕಾರ ಯಾವುದಾರೂ ರಾಜ್ಯ ಶೇಕಡಾ 50ರಷ್ಟು ಮಿತಿ ಮೀರಿ ಮೀಸಲಾತಿ ನೀಡಿದರೆ ಆಗ ಮಾತ್ರ ಸುಪ್ರೀಂ ಕೋರ್ಟ್ ಅಂತಾ ನಿರ್ಧಾರಕ್ಕೆ ತಡೆ ನೀಡಬಹುದಾಗಿದೆ. ಈ ಕಾರಣಕ್ಕಾಗಿ ಹಲವು ರಾಜ್ಯಗಳು ಈ ಮಿತಿ ರದ್ದುಗೊಳಿಸುವಂತೆ ಒತ್ತಾಯಿಸುತ್ತಿವೆ.
ಇದನ್ನೂ ಓದಿ: ಬಿಜೆಪಿಗೆ ಗಂಗಾ ಮಾತೆಯ ಶಾಪ ತಟ್ಟುತ್ತದೆ: ತ್ರಿಪುರಾದಲ್ಲಿ ತಾರಕಕ್ಕೆ ಏರಿದ ಬಿಜೆಪಿ- ಟಿಎಂಸಿ ಜಗಳ
ಮಸೂದೆಯ ಹಿಂದಿನ ರಾಜಕೀಯ ಲೆಕ್ಕಾಚಾರ...
ಪ್ರತಿಪಕ್ಷಗಳು ಬಹಳ ಹಿಂದಿನಿಂದಲೂ ಜಾತಿ ಗಣತಿಗೆ ಒತ್ತಾಯಿಸುತ್ತಿವೆ. ಈ ಮಸೂದೆಯ ಮೂಲಕ, ಕೇಂದ್ರ ಸರ್ಕಾರ ಹಿಂದುಳಿದ ಜಾತಿಗಳನ್ನು ತಲುಪಲು ಪ್ರಯತ್ನಿಸಿದೆ. ಮಸೂದೆ ಅಂಗೀಕರಿಸಿದ ನಂತರ, ಹರಿಯಾಣ, ಗುಜರಾತ್, ಕರ್ನಾಟಕದಂತಹ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳು ಜಾಟ್, ಪಟೇಲ್ ಮತ್ತು ಲಿಂಗಾಯತ ಜಾತಿಗಳನ್ನು ಒಬಿಸಿಗೆ ಸೇರಿಸುವ ಮೂಲಕ ಚುನಾವಣಾ ಲಾಭ ಪಡೆಯಲು ಬಯಸುತ್ತವೆ. ಮೀಸಲಾತಿ ನೀಡುವುದರಿಂದ ರಾಜಕೀಯ ಪಕ್ಷಗಳಲ್ಲಿ ಜಾತಿಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ