news18-kannada Updated:June 15, 2020, 2:38 PM IST
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಚೇರಿ
ಹುಬ್ಬಳ್ಳಿ(ಜೂ.15): ಲಾಕ್ ಡೌನ್ನಿಂದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸಂಸ್ಥೆಯ ಸಿಬ್ಬಂಧಿಗೆ ನೀಡಲಾಗುತ್ತಿದ್ದ ವಿವಿಧ ಭತ್ಯೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ಹುದ್ದೆಗಳನ್ನು ಕಡಿತ ಮಾಡಲಾಗಿದ್ದರೆ ಕೆಲವು ಹುದ್ದೆಗಳ ವಿಲೀನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಪ ಮುಖ್ಯ ಹುದ್ದೆಗಳಿಗೆ ಕತ್ತರಿ ಪ್ರಯೋಗಿಸಲು ಚಿಂತನೆ ನಡೆದಿದೆ. ಕೇಂದ್ರ ಕಚೇರಿ ಮತ್ತು ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ ಹಲವು ಹುದ್ದೆಗಳನ್ನು ಕಡಿತ ಹಾಗೂ ವಿಲೀನ ಮಾಡುವಂತೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ್ ಅವರು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರವೀಗ ಅಧಿಕಾರಿ ವಲಯದಲ್ಲಿ ಸಂಚಲನ ಮೂಡಿಸಿದೆ.
ವೆಚ್ಚ ಕಡಿತಕ್ಕಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತ ಚರ್ಚೆ ಬಹು ಜೋರಾಗಿ ನಡೆಯುತ್ತಿದೆ. ಖರ್ಚು ಕಡಿಮೆ ಮಾಡಲು ತಯಾರಿಸಿರುವ ವರದಿ ಎಷ್ಟು ಸೂಕ್ತ ಎನ್ನುವ ಚರ್ಚೆಗಳು ನಡೆಯುತ್ತಿವೆ. ಹುದ್ದೆ ಕಡಿತ ಹಾಗೂ ವಿಲೀನಗೊಳಿಸಿದರೆ ಆ ಸ್ಥಾನದಲ್ಲಿರುವ ಅಧಿಕಾರಿಯನ್ನು ಇತರೆ ಸ್ಥಳ ಅಥವಾ ಇನ್ನೊಂದು ಹುದ್ದೆಗೆ ನಿಯೋಜಿಸಲೇಬೇಕು. ಇದರಿಂದ ಖರ್ಚು ಕಡಿಮೆ ಹೇಗಾಗುತ್ತದೆ ಎನ್ನುವ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳುತ್ತಿದ್ದಾರೆ.
ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಹಾಗೂ ಆರ್ಟಿಐ ಪ್ರಾಚಾರ್ಯ, ಮುಖ್ಯ ತಾಂತ್ರಿಕ ಶಿಲ್ಪಿ ಹಾಗೂ ಉಗ್ರಾಣ ಹಾಗೂ ಖರೀದಿ ನಿಯಂತ್ರಕ, ಮುಖ್ಯಯೋಜನಾ ಮತ್ತು ಅಂಕಿ-ಅಂಶ ಅಧಿಕಾರಿ ಹಾಗೂ ಮುಖ್ಯ ಗಣಕ ವ್ಯವಸ್ಥಾಪಕ, ಮುಖ್ಯ ಕಾನೂನು ಅಧಿಕಾರಿ ಹಾಗೂ ಮಂಡಳಿ ಕಾರ್ಯದರ್ಶಿ, ವಿಭಾಗಗಳ ಆಡಳಿತಾಧಿಕಾರಿ ಮತ್ತು ಕಾರ್ಮಿಕ ಕಲ್ಯಾಣಾಧಿಕಾರಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಮತ್ತು ವಿಭಾಗೀಯ ಕಾರ್ಯಾಧ್ಯಕ್ಷ, ವಿಭಾಗ ಲೆಕ್ಕಾಧಿಕಾರಿ ಹಾಗೂ ಅಂಕಿ ಸಂಖ್ಯಾಧಿಕಾರಿ, ವಿಭಾಗೀಯ ಭದ್ರತಾಧಿಕಾರಿ ಹಾಗೂ ಉಗ್ರಾಣಾಧಿಕಾರಿ, ವಿಭಾಗೀಯ ಸಾರಿಗೆ ಅಧಿಕಾರಿ ಹಾಗೂ ಬಸ್ ನಿಲ್ದಾಣ ಎಟಿಎಂ ಅಧಿಕಾರಿಗಳ ಹುದ್ದೆ ವಿಲೀನ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರಾದೇಶಿಕ ಪ್ರಾಚಾರ್ಯ ಹುದ್ದೆ, ಉಪ ಕಾನೂನು ಅಧಿಕಾರಿ, ಉಪ ಸಂಚಾರ ವ್ಯವಸ್ಥಾಪಕ, ಉಪ ಸಿಬ್ಬಂದಿ ವ್ಯವಸ್ಥಾಪಕ, ಉಪ ಮುಖ್ಯ ಲೆಕ್ಕಾಧಿಕಾರಿ, ಉಪ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ, ಹುಬ್ಬಳ್ಳಿ ನಗರ ಹಾಗೂ ಗ್ರಾಮಾಂತರ ವಿಭಾಗದ ಭದ್ರತಾ ಮತ್ತು ಜಾಗೃತಾಧಿಕಾರಿ ಹುದ್ದೆಗಳನ್ನು ಕಡಿತಗೊಳಿಸಬೇಕು. ಕೆಲ ಅಧಿಕಾರಿಗಳನ್ನು ಹಿರಿಯ ಘಟಕ ವ್ಯವಸ್ಥಾಪಕ ಹುದ್ದೆಗೆ ನಿಯೋಜಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷರು ವರದಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :
ಜೂ.17ರಿಂದ ಮತ್ತೆ ಆರಂಭವಾಗಲಿದೆ ಅಂತಾರಾಜ್ಯ ಬಸ್ ಸಂಚಾರ; ರಾಜ್ಯಕ್ಕೆ ಹೆಚ್ಚಾದ ಕೊರೋನಾ ಭೀತಿ
ಸಾರಿಗೆ ಸಂಸ್ಥೆಯ ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ 55 ವರ್ಷ ಮೇಲ್ಪಟ್ಟವರಿಗೆ ಸ್ವಯಂ ನಿವೃತ್ತಿ ನೀಡುವ ವಿಶೇಷ ಯೋಜನೆ ಬಗ್ಗೆ ಚಿಂತನೆ ನಡೆಯುತ್ತಿದೆ. ಇದಕ್ಕೆ ತಗಲುವ ವೆಚ್ಚ ಸರಕಾರದಿಂದ ನೀಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿವೃತ್ತಿ ಪಡೆದರೆ ಅವರಿಗೆ ಆರ್ಥಿಕ ಸೌಲಭ್ಯ ಕಲ್ಪಿಸುವ ಸಾಮರ್ಥ್ಯ ಸಾರಿಗೆ ಸಂಸ್ಥೆಗಿಲ್ಲ. ಮೊದಲೆ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗೆ ಕೊರೊನಾ ಮಹಾಮಾರಿ ಮತ್ತಷ್ಟು ಹೊಡೆತ ನೀಡಿದೆ.
ಲಾಕ್ಡೌನ್ನಿಂದ ಸಂಸ್ಥೆಯ ಗಾಯದ ಮೇಲೆ ಬರೆ ಎಳದಂತಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಸ್ತಿತ್ವ ಉಳಿಸಿಕೊಳ್ಳಲು ರಾಜ್ಯ ಸರ್ಕಾರದತ್ತ ಮುಖ ಮಾಡಿ ಕುಳಿತಿದೆ.
First published:
June 15, 2020, 2:35 PM IST